ಪ್ರಕಟನೆ 15 - ಕನ್ನಡ ಸತ್ಯವೇದವು J.V. (BSI)VII. ಏಳು ಉಪದ್ರವಗಳನ್ನು ಕುರಿತದ್ದು 1 ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾಲಕ್ಷಣವು ನನಗೆ ಕಾಣಿಸಿತು. ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು; ಇವು ಕಡೇ ಉಪದ್ರವಗಳು; ಇವುಗಳಲ್ಲಿ ದೇವರ ರೌದ್ರವು ಮುಗಿದಿರುವದು. ಮೃಗದ ಮೇಲೆ ಜಯಹೊಂದಿದವರ ಗೀತ 2 ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗದ ವಿಗ್ರಹಕ್ಕೆ ನಮಸ್ಕರಿಸದೆಯೂ ಅದರ ಹೆಸರಿನ ಅಂಕೆಯನ್ನು ಮುದ್ರೆಹಾಕಿಸಿಕೊಳ್ಳದೆಯೂ ಅದರ ಮೇಲೆ ಜಯ ಹೊಂದಿದವರು ದೇವರ ಸೇವಾರ್ಥವಾದ ವೀಣೆಗಳನ್ನು ಕೈಯಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ ಬಳಿಯಲ್ಲಿ ನಿಂತು 3 ದೇವರ ದಾಸನಾದ ಮೋಶೆಯ ಹಾಡನ್ನೂ ಯಜ್ಞದ ಕುರಿಯಾದಾತನ ಹಾಡನ್ನೂ ಹಾಡುತ್ತಾ - ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; 4 ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು ಎಂದು ಹೇಳಿದರು. ಏಳು ಉಪದ್ರವಗಳು ದೇವವಿರೋಧಿಗಳಿಗೆ ಉಂಟಾದದ್ದು 5 ಇದಾದ ಮೇಲೆ ನಾನು ನೋಡಿದಾಗ ಪರಲೋಕದಲ್ಲಿರುವ ದೇವದರ್ಶನಗುಡಾರದ ಪವಿತ್ರಸ್ಥಾನವು ತೆರೆಯಿತು; 6 ಅದರೊಳಗಿಂದ ಏಳು ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು; ಅವರು ಪ್ರಕಾಶವೂ ನಿರ್ಮಲವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು; ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. 7 ನಾಲ್ಕು ಜೀವಿಗಳಲ್ಲಿ ಒಂದು ಈ ಏಳು ಮಂದಿ ದೇವದೂತರಿಗೆ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ ಏಳು ಚಿನ್ನದ ಪಾತ್ರೆಗಳನ್ನು ಕೊಟ್ಟಿತು. 8 ದೇವರ ತೇಜಸ್ಸಾನ್ನಿಧ್ಯದಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಪವಿತ್ರಸ್ಥಾನವು ತುಂಬಿದ ಕಾರಣ ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ ಆ ಪವಿತ್ರಸ್ಥಾನದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India