ಪ್ರಕಟನೆ 14 - ಕನ್ನಡ ಸತ್ಯವೇದವು J.V. (BSI)VI. ರಕ್ಷಣೆಹೊಂದಿದವರ ಉತ್ಸವಗೀತೆ, ನಾಲ್ಕು ಪ್ರಕಟನೆಗಳು, ಭೂಲೋಕದ ಸುಗ್ಗೀಕಾಲ, ಇವುಗಳನ್ನು ಕುರಿತದ್ದು 1. ರಕ್ಷಣೆಹೊಂದಿದವರ ಉತ್ಸವಗೀತವನ್ನು ಕುರಿತದ್ದು 1 ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು. 2 ಇದಲ್ಲದೆ ಪರಲೋಕದ ಕಡೆಯಿಂದ ಜಲಪ್ರವಾಹದ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ವೀಣೆಗಳನ್ನು ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು. 3 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. 4 ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ; ಇವರು ಕನ್ಯೆಯರಂತೆ ನಿಷ್ಕಳಂಕರು. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು. 5 ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ; ಇವರು ನಿರ್ದೋಷಿಗಳಾಗಿದ್ದಾರೆ. 2. ನಾಲ್ಕು ಪ್ರಕಟನೆಗಳು 6 ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. 7 ಅವನು - ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರ ಮಾಡಿರಿ ಎಂದು ಮಹಾಶಬ್ದದಿಂದ ಹೇಳಿದನು. 8 ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು - ಬಿದ್ದಳು, ಬಿದ್ದಳು, ಬಾಬೆಲೆಂಬ ಮಹಾ ನಗರಿಯು ಬಿದ್ದಳು. ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು ಎಂದು ಹೇಳಿದನು. 9 ಅವನ ಹಿಂದೆ ಮೂರನೆಯವನಾದ ಒಬ್ಬ ದೇವದೂತನು ಬಂದು - ಯಾವನಾದರೂ ಮೊದಲನೆಯ ಮೃಗಕ್ಕೂ ಅದರ ವಿಗ್ರಹಕ್ಕೂ ನಮಸ್ಕಾರಮಾಡಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಗುರುತುಹಾಕಿಸಿಕೊಂಡರೆ 10 ಅವನು ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೆ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು; ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು. 11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ; ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ನಮಸ್ಕಾರಮಾಡುವವರೂ ಅದರ ಹೆಸರನ್ನು ಸೂಚಿಸುವ ಗುರುತನ್ನು ಹಾಕಿಸಿಕೊಂಡಿರುವವರೆಲ್ಲರೂ ಹಗಲಿರುಳು ಉಪಶಮನವಿಲ್ಲದೆ ಯಾತನೆಪಡುವರು ಎಂದು ಮಹಾ ಶಬ್ದದಿಂದ ಹೇಳಿದನು. 12 ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ. 13 ಪರಲೋಕದಿಂದ ಒಂದು ಶಬ್ದವು ನನಗೆ ಕೇಳಿಸಿತು. ಅದು - ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು - ಹೌದು, ಅವರು ಧನ್ಯರೇ; ಅವರ ಕಷ್ಟ ತೀರಿತು, ಅವರಿಗೆ ವಿಶ್ರಾಂತಿಯಾಗುವದು; ಅವರ ಸುಕೃತ್ಯಗಳು ಅವರೊಡನೆ ಬರುವವು ಎಂದು ಹೇಳುತ್ತಾನೆ. 3. ಭೂಲೋಕದ ಸುಗ್ಗೀಕಾಲವನ್ನು ಕುರಿತದ್ದು 14 ನಾನು ನೋಡಲಾಗಿ ಇಗೋ, ಪ್ರಕಾಶಮಾನವಾದ ಒಂದು ಮೇಘವು ನನಗೆ ಕಾಣಿಸಿತು. ಆ ಮೇಘದ ಮೇಲೆ ಮನುಷ್ಯಕುಮಾರನಂತಿದ್ದವನೊಬ್ಬನು ಕೂತಿರುವದನ್ನು ಕಂಡೆನು. ಆತನ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹದವಾದ ಕುಡುಗೋಲೂ ಇದ್ದವು. 15 ಆಗ ದೂತನಾದ ಮತ್ತೊಬ್ಬನು ದೇವಾಲಯದೊಳಗಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ - ಭೂವಿುಯ ಪೈರು ಮಾಗಿ ಒಣಗಿದೆ; ಕೊಯ್ಯುವ ಕಾಲ ಬಂತು; ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ ಎಂದು ಮಹಾ ಶಬ್ದದಿಂದ ಕೂಗಿದನು. 16 ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಹಾಕಿ ಭೂವಿುಯ ಪೈರನ್ನು ಕೊಯಿದನು; ಭೂವಿುಯ ಪೈರು ಕೊಯ್ಯಲ್ಪಟ್ಟಿತು. 17 ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು. ಅವನಲ್ಲಿ ಸಹ ಹದವಾದ ಕುಡುಗೋಲು ಇತ್ತು. 18 ತರುವಾಯ ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು ಆ ಹದವಾದ ಕುಡುಗೋಲಿನವನಿಗೆ - ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂವಿುಯ ದ್ರಾಕ್ಷೇಗೊಂಚಲುಗಳನ್ನು ಕೊಯ್ಯಿ; ಅದರ ಹಣ್ಣುಗಳು ಪೂರಾ ಮಾಗಿವೆ ಎಂದು ಮಹಾಶಬ್ದದಿಂದ ಕೂಗಿದನು. 19 ಆಗ ಆ ದೂತನು ತನ್ನ ಕುಡುಗೋಲನ್ನು ಭೂವಿುಗೆ ಹಾಕಿ ಭೂವಿುಯ ದ್ರಾಕ್ಷೇಬಳ್ಳಿಯ ಹಣ್ಣನ್ನು ಕೊಯಿದು ದೇವರ ರೌದ್ರವೆಂಬ ದೊಡ್ಡ ತೊಟ್ಟಿಯಲ್ಲಿ ಹಾಕಿದನು. 20 ಅದನ್ನು ಪಟ್ಟಣದ ಹೊರಗೆ ಆ ತೊಟ್ಟಿಯಲ್ಲಿ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಆಳವಾಗಿ ಇನ್ನೂರು ಮೈಲಿ ದೂರ ಹರಿಯಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India