ಪ್ರಕಟನೆ 11 - ಕನ್ನಡ ಸತ್ಯವೇದವು J.V. (BSI)ದೇವರ ಆಲಯವನ್ನು ಅಳೆದದ್ದನ್ನೂ ದೇವರ ಇಬ್ಬರು ಸಾಕ್ಷಿಗಳನ್ನೂ ಕುರಿತದ್ದು 1 ತರುವಾಯ ದಂಡದಂತಿದ್ದ ಒಂದು ಅಳತೇ ಕೋಲು ನನ್ನ ಕೈಗೆ ಕೊಡಲ್ಪಟ್ಟಿತು. ಮತ್ತು ಒಂದು ವಾಣಿ ಉಂಟಾಯಿತು; ಅದು ನನಗೆ ಹೇಳಿದ್ದೇನಂದರೆ - ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಲೆಕ್ಕಿಸು. 2 ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಅದು ಅನ್ಯಜನರಿಗಾಗಿ ಬಿಟ್ಟದೆ; ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು. 3 ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರುವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಮಾಡುವೆನು. 4 ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ. 5 ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವದು; 6 ಇವರಿಗೆ ಯಾವನಾದರೂ ಕೇಡನ್ನು ಉಂಟುಮಾಡಬೇಕೆಂದಿದ್ದರೆ ಅವನಿಗೆ ಈ ರೀತಿಯಾಗಿ ಕೊಲೆಯಾಗಬೇಕು. ತಾವು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂವಿುಯನ್ನು ಪೀಡಿಸುವದಕ್ಕೂ ಅಧಿಕಾರವುಂಟು. 7 ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದನಂತರ ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು. 8 ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಗೂಢಾರ್ಥವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಹೆಸರುಗಳುಂಟು; ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು. 9 ಸಕಲ ಪ್ರಜೆ ಕುಲ ಭಾಷೆ ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುತ್ತಾ ಇರುವರು; ಅವುಗಳನ್ನು ಸಮಾಧಿಯಲ್ಲಿ ಇಡಗೊಡಿಸುವದಿಲ್ಲ. 10 ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮ ಬಂದು ಆ ಶವಗಳಲ್ಲಿ ಹೊಗಲು ಅವು ಕಾಲೂರಿ ನಿಂತವು. ಅವರನ್ನು ನೋಡಿದವರಿಗೆ ಮಹಾ ಭಯವು ಹಿಡಿಯಿತು. 12 ಆಮೇಲೆ ಅವರಿಗೆ - ಇಲ್ಲಿ ಮೇಲಕ್ಕೆ ಬನ್ನಿರಿ ಎಂದು ಆಕಾಶದ ಮಹಾವಾಣಿಯು ಹೇಳಿತು. ಅದನ್ನು ಅವರು ಕೇಳಿ ಮೇಘ ವಿಮಾನದಲ್ಲಿ ಪರಲೋಕಕ್ಕೆ ಏರಿಹೋದರು; ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13 ಅದೇ ಗಳಿಗೆಯಲ್ಲಿ ಮಹಾಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು; ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕ ದೇವರನ್ನು ಘನಪಡಿಸಿದರು. 14 ಎರಡನೆಯ ವಿಪತ್ತು ಕಳೆದುಹೋಯಿತು; ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತದೆ. ಏಳನೆಯ ತುತೂರಿ ಊದಿದ್ದು; ದೇವರು ನ್ಯಾಯತೀರ್ಪನ್ನು ಮಾಡುವ ಕಾಲ ಹತ್ತಿರ ಬಂದದ್ದಕ್ಕಾಗಿ ಪರಲೋಕದಲ್ಲಿ ಆತನಿಗೆ ಸ್ತೋತ್ರ ಉಂಟಾದದ್ದು 15 ಏಳನೆಯ ದೇವದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾ ಶಬ್ದಗಳುಂಟಾಗಿ - ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು ಎಂದು ಹೇಳಿದವು. 16 ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕೂತಿರುವ ಇಪ್ಪತ್ತುನಾಲ್ಕು ಮಂದಿ ಹಿರಿಯರು ಆತನಿಗೆ ಆಡ್ಡಬಿದ್ದು - 17 ಕರ್ತನೇ, ಸರ್ವಶಕ್ತನಾದ ದೇವರೇ, ಸದಾ ಇರುವಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳಿದ್ದರಿಂದ ನಿನಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತೇವೆ. 18 ಜನಾಂಗಗಳು ಕೋಪಿಸಿಕೊಂಡವು, ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯ ಬಂದದೆ; ನೀನು ನಿನ್ನ ದಾಸರಾದ ಪ್ರವಾದಿಗಳಿಗೂ ದೇವಜನರಿಗೂ ನಿನ್ನ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲವನ್ನು ಕೊಟ್ಟು ಲೋಕನಾಶಕರನ್ನು ನಾಶಮಾಡುವಿ ಎಂದು ಆತನನ್ನು ಆರಾಧಿಸಿದರು. 19 ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ವಿುಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India