ಪರಮಗೀತೆ 8 - ಕನ್ನಡ ಸತ್ಯವೇದವು J.V. (BSI)1 ನೀನು ನನ್ನ ತಾಯಿಯ ಸ್ತನ್ಯವನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! ನಾನು ನಿನ್ನನ್ನು ಹೊರಗೆ ಕಂಡು ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ. 2 ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ನೀನು ನನಗೆ ಉಪದೇಶಮಾಡಬಹುದಾಗಿತ್ತು; ದ್ರಾಕ್ಷೆಯ ವಿುಶ್ರಪಾನಕವನ್ನು, ನನ್ನ ದಾಳಿಂಬರದ ಸವಿರಸವನ್ನು, ನಿನಗೆ ಕುಡಿಸುತ್ತಿದ್ದೆನು. 3 ಆಗ ನಿನ್ನ ಎಡಗೈ ನನಗೆ ತಲೆಗಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು. 4 ಯೆರೂಸಲೇವಿುನ ಸ್ತ್ರೀಯರೇ, ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. 5 ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಆ ಸೇಬುಮರದ ಕೆಳಗೆ ನಿನ್ನನ್ನು ಎಬ್ಬಿಸಿದೆನಲ್ಲಾ! ಇಗೋ, ಅಲ್ಲಿ ನಿನ್ನ ತಾಯಿಯು ನಿನ್ನನ್ನು ಹೆತ್ತಳು, ಅಲ್ಲೇ ಪ್ರಸವವೇದನೆ ಪಟ್ಟು, ನಿನ್ನನ್ನು ಪಡೆದಳು! 6 ನಿನ್ನ ಹೃದಯದ ಮೇಲೆ, ನಿನ್ನ ಕೈಯಲ್ಲಿ, ನನ್ನನ್ನು ಮುದ್ರೆಯನ್ನಾಗಿ ಧರಿಸಿಕೋ. ಪ್ರೀತಿಯು ಮರಣದಷ್ಟು ಬಲವಾಗಿದೆ, [ಪ್ರೀತಿದ್ರೋಹದಿಂದ ಹುಟ್ಟುವ] ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು. 7 ಜಲದ ರಾಶಿಗಳೂ ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳಿಗೂ ಅದನ್ನು ಮುಣುಗಿಸಲು ಶಕ್ತಿಯಿಲ್ಲ. ಒಬ್ಬನು ತನ್ನ ಮನೆಮಾರನ್ನೆಲ್ಲಾ ಕೊಟ್ಟು ಪ್ರೀತಿಯನ್ನು ಪಡೆಯಲು ಯತ್ನಿಸಿದರೆ ಕೇವಲ ತಿರಸ್ಕಾರಕ್ಕೆ ಗುರಿಯಾಗುವನು. 8 ಸ್ತನಬಾರದ ತಂಗಿಯು ನಮಗುಂಟು; ಅವಳನ್ನು ಕೇಳತಕ್ಕ ಸಮಯದಲ್ಲಿ ಅವಳ ಹಿತಕ್ಕೆ ಏನು ಮಾಡೋಣ? 9 ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, ಬಾಗಿಲಾದರೆ ದೇವದಾರು ಹಲಿಗೆಗಳಿಂದ ಭದ್ರಪಡಿಸುವೆವು. 10 ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, ಹೀಗಿದ್ದು ಸೊಲೊಮೋನನ ದೃಷ್ಟಿಯಲ್ಲಿ [ಜಯಶಾಲಿನಿಯಾಗಿ] ಸಮಾಧಾನ ಹೊಂದಿದೆನು. 11 ಸೊಲೊಮೋನನು ನೋಡಿಕೊಳ್ಳುವವರಿಗೆ ಬಾಲ್ಹಾಮೋನಿನಲ್ಲಿ ಇದ್ದ ತನ್ನ ತೋಟವನ್ನು ಕೊಟ್ಟನು, ಅದರ ಫಲದಿಂದ ಯಾರಾದರೂ ಸಾವಿರ ರೂಪಾಯಿಯನ್ನು ಪಡೆಯಬಹುದು. 12 ಸೊಲೊಮೋನನೇ, ಆ ಸಾವಿರ ರೂಪಾಯಿ ನಿನಗಿರಲಿ, ಫಲವನ್ನು ನೋಡಿಕೊಳ್ಳುವವರಿಗೆ ಇನ್ನೂರು ರೂಪಾಯಿ ಸೇರಲಿ; ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ. 13 ಉದ್ಯಾನವಾಸಿನಿಯೇ, ಗೆಳೆಯರು ನಿನ್ನ ದನಿ ಕೇಳಬೇಕೆಂದಿದ್ದಾರೆ; ನನಗೆ ಕೇಳಿಸಲಿ. 14 ಎನ್ನಿನಿಯನೇ, ತ್ವರೆಪಡು, ಸುಗಂಧಸಸ್ಯಪರ್ವತಗಳಲ್ಲಿ ಜಿಂಕೆಯಂತೆಯೂ ಪ್ರಾಯದ ಎರಳೆಯಂತೆಯೂ ಇರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India