ಪರಮಗೀತೆ 7 - ಕನ್ನಡ ಸತ್ಯವೇದವು J.V. (BSI)1 ರಾಜಪುತ್ರಿಯೇ, ಪಾದರಕ್ಷೆಗಳಲ್ಲಿನ ನಿನ್ನ ಚರಣಗಳು ಎಷ್ಟೋ ಚಂದ! ದುಂಡಾದ ನಿನ್ನ ತೊಡೆಗಳು ಕುಶಲಶಿಲ್ಪಿಯು ಮಾಡಿದ ಆಭರಣಗಳಂತಿವೆ. 2 ನಿನ್ನ ಹೊಕ್ಕಳು ವಿುಶ್ರಪಾನಕದಿಂದ ತುಂಬಿರುವ ಗುಂಡುಬಟ್ಟಲು; ನಿನ್ನ ಉದರವು ನೆಲದಾವರೆಗಳಿಂದ ಅಲಂಕರಿಸಿದ ಗೋದಿಯ ರಾಶಿ; 3 ನಿನ್ನ ಎರಡು ಸ್ತನಗಳು ಎರಳೆಯ ಅವಳಿಮರಿಗಳೇ. 4 ನಿನ್ನ ಕಂಠವು ದಂತದ ಗೋಪುರ; ನಿನ್ನ ನೇತ್ರಗಳು ಹೆಷ್ಬೋನಿನಲ್ಲಿನ ಬತ್‍ರಬ್ಬೀಮ್ ಬಾಗಿಲ ಬಳಿಯ ಕೊಳಗಳಂತಿವೆ. ನಿನ್ನ ನಾಸಿಕವು ದಮಸ್ಕದ ಕಡೆಗಿರುವ ಲೆಬನೋನಿನ ಬುರುಜಿನ ಹಾಗಿದೆ. 5 ನಿನ್ನ ಶಿರಸ್ಸು ಕರ್ಮೆಲ್ ಬೆಟ್ಟದಂತೆ ಗಂಭೀರ; ನಿನ್ನ ತಲೆಯ ಕೂದಲು ಧೂಮ್ರವರ್ಣವು; ರಾಜನು ಅದರ ತೆಕ್ಕೆತೆಕ್ಕೆಗಳಲ್ಲಿ ಕಟ್ಟುಬಿದ್ದಿದ್ದಾನೆ. 6 ಪ್ರೇಮವೇ, ಸಕಲ ಸಂತೋಷಗಳಿಗಿಂತ ನೀನು ಎಷ್ಟೋ ಮನೋಹರ, ಎಷ್ಟೋ ರಮ್ಯ! 7 ಈ ನಿನ್ನ ನೀಳವಾದ ಆಕಾರವು ಖರ್ಜೂರವೃಕ್ಷ, ನಿನ್ನ ಸ್ತನಗಳೇ ಅದರ ಗೊಂಚಲುಗಳು. 8 ನಾನು ಆ ವೃಕ್ಷವನ್ನು ಹತ್ತಿ ಹಣ್ಣಿನ ತುಂಬುಗಳನ್ನು ಹಿಡಿಯುವೆನು ಅಂದುಕೊಂಡೆನು. ನಿನ್ನ ಸ್ತನಗಳು ನನಗೆ ದ್ರಾಕ್ಷೆಯ ಗೊಂಚಲುಗಳಂತಿರಲಿ, ನಿನ್ನ ಶ್ವಾಸವು ಸೇಬುಹಣ್ಣುಗಳೋಪಾದಿಯಲ್ಲಿ ಪರಿಮಳಿಸಲಿ; 9 ನಿನ್ನ ಮುದ್ದುಗಳು ಉತ್ತಮದ್ರಾಕ್ಷಾರಸದ ಹಾಗಿರಲಿ; ನಿದ್ರಿಸುವವರ ತುಟಿಗಳಲ್ಲಿ ಸರಾಗವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವದು. 10 ನಾನು ನನ್ನ ನಲ್ಲನವಳೇ, ಅವನ ಆಶೆಯು ನನ್ನ ಮೇಲೇ ಇದೆ. 11 ಎನ್ನಿನಿಯನೇ, ವನಕ್ಕೆ ಹೋಗೋಣ ಬಾ, ಕುಂಕುಮ ಹೂವುಗಳ ಮಧ್ಯದಲ್ಲಿ ವಾಸಿಸುವ! 12 ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷೆಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬರಗಳು ಪುಷ್ಟಿಸಿವೆಯೋ ನೋಡೋಣ! ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು. 13 ಕಾಮಜನಕ ವೃಕ್ಷಗಳು ಪರಿಮಳಬೀರುತ್ತವೆ, ನನ್ನ ಕಾಂತನೇ, ನಾನು ನಿನಗಾಗಿ ಇಟ್ಟುಕೊಂಡ ಒಳ್ಳೊಳ್ಳೆಯ ಬಗೆಬಗೆಯ ಹಳೆ ಹೊಸ ಹಣ್ಣುಗಳು ನಮ್ಮ ಬಾಗಿಲುಗಳ ಬಳಿ ಸಿದ್ಧವಾಗಿವೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India