ಪರಮಗೀತೆ 6 - ಕನ್ನಡ ಸತ್ಯವೇದವು J.V. (BSI)1 ಮಹಿಳಾಮಣಿಯೇ, ನಿನ್ನಿನಿಯನು ಎಲ್ಲಿ ಹೋದನು? ನಾವು ನಿನ್ನೊಂದಿಗೆ ಅವನನ್ನು ಹುಡುಕುವಂತೆ ತಿಳಿಸು. ನಿನ್ನ ನಲ್ಲನು ಎಲ್ಲಿಗೆ ತೆರಳಿರುವನು? 2 ನನ್ನ ಕಾಂತನು ಉದ್ಯಾನಗಳಲ್ಲಿ [ಮಂದೆಯನ್ನು] ಮೇಯಿಸುತ್ತಾ ನೆಲದಾವರೆಗಳನ್ನು ಕೊಯ್ಯಬೇಕೆಂದು ಸುಗಂಧಸಸ್ಯದ ಪಾತಿಗಳಿರುವ ತನ್ನ ತೋಟಕ್ಕೆ ಹೋಗಿದ್ದಾನೆ. 3 ಎನ್ನಿನಿಯನು ನನ್ನವನೇ, ನಾನು ಅವನವಳೇ, ನೆಲದಾವರೆಗಳ ಮಧ್ಯದಲ್ಲಿ [ಮಂದೆಯನ್ನು] ಮೇಯಿಸುವವನಾಗಿದ್ದಾನೆ. 4 ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದರಿ, ಯೆರೂಸಲೇವಿುನ ಹಾಗೆ ಮನೋಹರಿ ಪತಾಕಿನಿಯಂತೆ ಭಯಂಕರಿ! 5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ [ಬೆಟ್ಟದ] ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ. 6 ನಿನ್ನ ಹಲ್ಲುಗಳೋ ತೊಳೆಯಲ್ಪಟ್ಟ ಬಳಿಕ ಯಾವದೂ ತನ್ನ ಜೊತೆಯನ್ನು ಕಳೆದುಕೊಳ್ಳದೆ ಜೋಡಿಯಲ್ಲಿ ಮೇಲಕ್ಕೆ ಬರುವ ಕುರಿಯ ಮಂದೆಯ ಹಾಗಿವೆ. 7 ಮುಸುಕಿನೊಳಗಿನ ನಿನ್ನ ಕೆನ್ನೆಯು ದಾಳಿಂಬರದ ತಿರುಳೇ. 8 ಅರುವತ್ತು ಮಂದಿ ರಾಣಿಯರೂ ಎಂಭತ್ತು ಜನ ಉಪಪತ್ನಿಯರೂ ಲೆಕ್ಕವಿಲ್ಲದ ಯುವತಿಯರೂ ನನಗುಂಟು. 9 ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ, ಇವಳು ತಾಯಿಗೆ ಏಕಪುತ್ರಿಯು, ಹೆತ್ತವಳಿಗೆ ಆಪ್ತಳು. ಯುವತಿಯರು ನೋಡಿದಾಗ ಧನ್ಯಳೆಂದು ಹೇಳಿದರು. ರಾಣಿಯರೂ ಉಪಸ್ತ್ರೀಯರೂ ಕಂಡಾಗ ಹೀಗೆ ಪ್ರಶಂಸಿಸಿದರು - 10 ಅರುಣೋದಯವು ದೃಷ್ಟಿಸುವಂತಿರುವ ಇವಳಾರು? ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು, ಪತಾಕಿನಿಯಂತೆ ಭಯಂಕರಳು ಆಗಿರುವ ಇವಳಾರು? 11 ದ್ರಾಕ್ಷೆಯು ಚಿಗುರಿದೆಯೋ, ದಾಳಿಂಬರಗಳು ಹೂಬಿಟ್ಟಿವೆಯೋ ಎಂದು ತಗ್ಗಿನ ಸಸ್ಯಗಳನ್ನು ನೋಡಲು ಬಾದಾವಿುಯ ತೋಟಕ್ಕೆ ನಾನು ಹೋಗಿದ್ದಾಗ 12 ನನ್ನ ತವಕವು ನನ್ನ ದೇಶದ ಪ್ರಧಾನರ ರಥಗಳ ನಡುವೆ ಅಕಸ್ಮಾತ್ತಾಗಿ ನನ್ನನ್ನು ಸಿಕ್ಕಿಸಿತು. 13 ಶೂಲಮ್ ಊರಿನವಳೇ, ತಿರುಗು, ತಿರುಗು; ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು; ಎದುರುಬದುರಿನ ನಾಟ್ಯವನ್ನು ನೋಡುವಷ್ಟು ಆಶೆಯಿಂದ ಶೂಲಮ್ ಊರಿನವಳಾದ ನನ್ನನ್ನು ಏಕೆ ನೋಡಬೇಕು! |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India