Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 4 - ಕನ್ನಡ ಸತ್ಯವೇದವು J.V. (BSI)

1 ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆ.

2 ನಿನ್ನ ಹಲ್ಲುಗಳೋ ತೊಳೆಯಲ್ಪಟ್ಟು ಉಣ್ಣೆ ಕತ್ತರಿಸಿಕೊಂಡ ಕೂಡಲೇ ಯಾವದೂ ತನ್ನ ಜೊತೆಯನ್ನು ಕಳೆದುಕೊಳ್ಳದೆ ಜೋಡಿಯಾಗಿ ಮೇಲಕ್ಕೆ ಬರುವ ಕುರಿಯ ಮಂದೆಯ ಹಾಗಿವೆ.

3 ನಿನ್ನ ತುಟಿಗಳು ಕೆಂಪು ದಾರದಂತಿವೆ. ನಿನ್ನ ಬಾಯಿ ರಮ್ಯ, ಮುಸುಕಿನೊಳಗಿನ ನಿನ್ನ ಕೆನ್ನೆಯು ದಾಳಿಂಬರದ ತಿರುಳೇ.

4 ನಿನ್ನ ಕಂಠವು ಆಯುಧಶಾಲೆಯಾಗಿ ಕಟ್ಟಿ ಸಾವಿರ ಶೂರರ ಗುರಾಣಿಗಳನ್ನು ನೇತುಹಾಕಿರುವ ದಾವೀದನ ಬುರುಜಿನ ಹಾಗಿದೆ.

5 ನಿನ್ನ ಎರಡು ಸ್ತನಗಳು ನೆಲದಾವರೆಗಳ ಮಧ್ಯದಲ್ಲಿ ಮೇಯುವ ಎರಳೆಯ ಅವಳಿಮರಿಗಳಂತಿವೆ.

6 ನಾನು ರಕ್ತಬೋಳದ ಬೆಟ್ಟಕ್ಕೂ ಧೂಪದ ಗುಡ್ಡಕ್ಕೂ ತೆರಳಿ ಹಗಲು ತಂಪಾಗಿ ನೆರಳು ಇಳಿಯುವ ತನಕ ಚರಿಸುತ್ತಿರುವೆನು.

7 ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ.

8 ಎನ್ನೊಂದಿಗೆ ಲೆಬನೋನಿನಿಂದ ಬಾ! ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! ಅಮಾನದ ತುದಿ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳು, ಸಿಂಹಗಳ ಗವಿಗಳು, ಚಿರತೆಗಳ ಗುಡ್ಡಗಳು, ಇವುಗಳಿಂದ ಹೊರಟು ಬಾ!

9 ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿದ್ದೀ, ನಿನ್ನ ಒಂದು ಕಡೆಗಣ್ಣಿನಿಂದ, ನಿನ್ನ ಕಂಠಹಾರದ ಒಂದು ಸರದಿಂದ, ನನ್ನ ಹೃದಯವನ್ನು ವಶಮಾಡಿಕೊಂಡಿದ್ದೀ.

10 ಪ್ರಿಯಳೇ, ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! ನಿನ್ನ ಪ್ರೇಮವು ದ್ರಾಕ್ಷಾರಸಕ್ಕಿಂತ ಎಷ್ಟೋ ಮೇಲು! ನಿನ್ನ ತೈಲದ ಪರಿಮಳವು ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!

11 ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಹಾಲೂ ನಿನ್ನ ನಾಲಿಗೆಯೊಳಗಿವೆ; ನಿನ್ನ ವಸ್ತ್ರಗಳ ಸುವಾಸನೆಯೋ ಲೆಬನೋನಿನ ಪರಿಮಳವೇ.

12 ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಅಗುಳಿ ಹಾಕಿದ ಉದ್ಯಾನ, ಬೇಲಿಯೊಳಗಿನ ಬುಗ್ಗೆ, ಮುಚ್ಚಿ ಮುದ್ರಿಸಿದ ಬಾವಿ ಆಗಿದ್ದಾಳೆ.

13 ನಿನ್ನ ಉದ್ಯಾನದಲ್ಲಿ ದಾಳಿಂಬರದ ವನ, ಉತ್ತಮಫಲ, ಜಟಾಮಾಂಸಿ, ಗೋರಂಟೆ,

14 ಜಟಾಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತವಿಧಧೂಪ, ರಕ್ತಬೋಳ, ಅಗುರು, ಸಕಲ ಮುಖ್ಯ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ.

15 ಉದ್ಯಾನಗಳಿಗೆ ಹಾಯುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಪ್ರವಾಹ, ಇವೆಲ್ಲವೂ ನಿನ್ನಲ್ಲಿವೆ.

16 ಬಡಗಣ ಗಾಳಿಯೇ ಬೀಸು, ತೆಂಕಣ ಗಾಳಿಯೇ ಬಾ! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು