Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 3 - ಕನ್ನಡ ಸತ್ಯವೇದವು J.V. (BSI)

1 ರಾತ್ರಿ ರಾತ್ರಿಯಲ್ಲಿಯೂ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.

2 ನಾನು ಎದ್ದು ಊರಲ್ಲಿ ತಿರುಗುವೆನು, ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು ಎಂದುಕೊಂಡೆನು; ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.

3 ಊರಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು; ನನ್ನ ಪ್ರಾಣಪ್ರಿಯನನ್ನು ಕಂಡಿರಾ ಎಂದು ಅವರನ್ನು ವಿಚಾರಿಸಿದೆನು.

4 ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ, ಸೇರುವ ತನಕ ಬಿಡದೆ ಹಿಡಿದುಕೊಂಡೇ ಹೋದೆನು.

5 ಯೆರೂಸಲೇವಿುನ ಸ್ತ್ರೀಯರೇ, ಉಚಿತ ಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ಅಡವಿಯ ಹುಲ್ಲೆಗಳ ಮೇಲೆಯೂ ಹರಿಣಿಗಳ ಮೇಲೆಯೂ ನಿಮ್ಮಿಂದ ಪ್ರಮಾಣ ಮಾಡಿಸುತ್ತೇನೆ.

6 ರಕ್ತಬೋಳ, ಧೂಪ, ವರ್ತಕರ ಸಕಲಸುಗಂಧ ದ್ರವ್ಯಗಳನ್ನು ಧೂಪಿಸಿದ ಧೂಮಸ್ತಂಭಗಳಂತೆ ಅರಣ್ಯದಿಂದ ಬರುವ ಈ ಮೆರವಣಿಗೆ ಯಾರದು?

7 ನೋಡು, ಅದು ಸೊಲೊಮೋನನ ಪಾಲಕಿ; ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಮಂದಿ ಅದರ ಸುತ್ತಲಿದ್ದಾರೆ.

8 ಯುದ್ಧಪ್ರವೀಣರಾದ ಇವರೆಲ್ಲರೂ ಕೈಯಲ್ಲಿ ಕತ್ತಿಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿವಿುತ್ತ ಪ್ರತಿಯೊಬ್ಬನೂ ಸೊಂಟಕ್ಕೆ ಕತ್ತಿಕಟ್ಟಿದ್ದಾನೆ.

9 ಆ ಪಾಲಕಿಯನ್ನು ರಾಜನಾದ ಸೊಲೊಮೋನನು ಲೆಬನೋನಿನ ಮರದಿಂದ ಮಾಡಿಸಿಕೊಂಡನು.

10 ಅದರ ಕಂಬಗಳನ್ನು ಬೆಳ್ಳಿಯಿಂದ, ಒರಗನ್ನು ಚಿನ್ನದಿಂದ, ಆಸನವನ್ನು ಸಕಲಾತಿಯಿಂದ ಮಾಡಿಸಿದನು; ಮಧ್ಯಭಾಗವನ್ನು ಯೆರೂಸಲೇವಿುನ ಸ್ತ್ರೀಯರು ತಮ್ಮ ಪ್ರೀತಿಗೆ ಗುರುತಾಗಿ ನಕಾಸಿಯಿಂದ ಅಲಂಕರಿಸಿದರು.

11 ಚೀಯೋನಿನ ನಾರಿಯರೇ, ಹೊರಟು ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ. ಅವನು ವಿವಾಹವಾಗಿ ಉಲ್ಲಾಸಪಟ್ಟ ದಿನದಲ್ಲಿ ತಾಯಿಯು ಅವನ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು