ಪರಮಗೀತೆ 2 - ಕನ್ನಡ ಸತ್ಯವೇದವು J.V. (BSI)1 ನಾನು ಬೈಲಿನ ನೆಲಸಂಪಿಗೆ, ತಗ್ಗಿನ ತಾವರೆ. 2 ನನ್ನ ಪ್ರಿಯಳು ಮುಳ್ಳುಗಳ ಮಧ್ಯದಲ್ಲಿನ ತಾವರೆಯಂತೆ ಸ್ತ್ರೀಯರಲ್ಲಿ ಶ್ರೇಷ್ಠಳು. 3 ಉದ್ಯಾನ ವೃಕ್ಷಗಳಲ್ಲಿ ಸೇಬು ಹೇಗೋ ಪುರುಷರಲ್ಲಿ ನನ್ನ ಕಾಂತನು ಹಾಗೆಯೇ ಇಷ್ಟನು. ನಾನು ಅವನ ನೆರಳಿನಲ್ಲಿ ಕೂತು ಸಂತಸಗೊಂಡೆನು, ಅವನ ಫಲವು ನನ್ನ ನಾಲಿಗೆಗೆ ರುಚಿಯಾಗಿತ್ತು. 4 ಅವನು ನನ್ನನ್ನು ಔತಣಶಾಲೆಗೆ ಬರಮಾಡಿಕೊಂಡನು, ನನ್ನ ಮೇಲೆ ಅವನು ಎತ್ತಿದ ಧ್ವಜವು ಪ್ರೀತಿಯೇ. 5 ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ, ದೀಪ ದ್ರಾಕ್ಷೆಯಿಂದ ನನ್ನನ್ನು ಉಪಚರಿಸಿರಿ, ಸೇಬು ಹಣ್ಣುಗಳಿಂದ ನನ್ನನ್ನು ಆದರಿಸಿರಿ. 6 ಅವನ ಎಡಗೈ ನನಗೆ ತಲೆಗಿಂಬಾಗಿ ಬಲಗೈ ತಬ್ಬುವದಾದರೆ ಎಷ್ಟೋ ಸಂತೋಷ! 7 ಯೆರೂಸಲೇವಿುನ ಸ್ತ್ರೀಯರೇ, ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು ಅಡವಿಯ ಹುಲ್ಲೆಗಳ ಮೇಲೆಯೂ ಹರಿಣಿಗಳ ಮೇಲೆಯೂ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. 8 ಅಗೋ, ನನ್ನ ಕಾಂತನ ಸಪ್ಪಳ! ಅವನು ಬೆಟ್ಟಗಳ ಮೇಲೆ ಹಾರುತ್ತಾ ಗುಡ್ಡಗಳಲ್ಲಿ ಕುಪ್ಪಳಿಸುತ್ತಾ ಬರುತ್ತಿದ್ದಾನೆ; 9 ಎನ್ನಿನಿಯನು ಜಿಂಕೆಯಂತೆಯೂ ಪ್ರಾಯದ ಎರಳೆಯ ಹಾಗೂ ಇದ್ದಾನೆ. ಆಹಾ, ನಮ್ಮ ಗೋಡೆಯ ಆಚೆ ನಿಂತಿದ್ದಾನೆ, ಕಿಟಕಿಗಳಲ್ಲಿ ನೋಡುತ್ತಾನೆ, ಜಾಲಾಂತರಗಳಲ್ಲಿ ಇಣಿಕುಹಾಕುತ್ತಾನೆ! 10 ನನ್ನ ನಲ್ಲನು ಎನಗೆ ಹೀಗೆಂದನು - ನನ್ನ ಪ್ರಿಯಳೇ, ಎನ್ನ ಸುಂದರಿಯೇ, ಎದ್ದು ಬಾ! 11 ಇಗೋ, ಮಳೆಗಾಲ ಕಳೆಯಿತು. ವೃಷ್ಟಿಯು ನಿಂತುಹೋಯಿತು; 12 ಭೂವಿುಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು, ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ; 13 ಅಂಜೂರದ ಮರವು ಕಾಯಿಗಳನ್ನು ಪಕ್ವಕ್ಕೆ ತರುತ್ತದೆ, ದ್ರಾಕ್ಷೆಯ ಬಳ್ಳಿಗಳು ಹೂಬಿಟ್ಟು ಪರಿಮಳವನ್ನು ಬೀರುತ್ತವೆ. ನನ್ನ ಪ್ರಿಯಳೇ, ಎನ್ನ ಸುಂದರಿಯೇ, ಎದ್ದು ಬಾ! 14 ಬಂಡೆಯ ಬಿರುಕುಗಳಲ್ಲಿಯೂ ಜರಿಯ ಮರೆಯಲ್ಲಿಯೂ ಇರುವ ನನ್ನ ಪರಿವಾಳವೇ! ನಿನ್ನ ರೂಪು ನನಗೆ ಕಾಣಿಸು, ನಿನ್ನ ದನಿ ಕೇಳಿಸು; ನಿನ್ನ ದನಿ ಎಷ್ಟೋ ಇಂಪು, ನಿನ್ನ ರೂಪು ಎಷ್ಟೋ ಅಂದ. 15 ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು, ಹಿಡಿಯಿರಿ; ನಮ್ಮ ತೋಟಗಳು ಹೂವಾಗಿವೆ. 16 ಎನ್ನಿನಿಯನು ನನ್ನವನೇ, ನಾನು ಅವನವಳೇ, ನೆಲದಾವರೆಗಳ ಮಧ್ಯದಲ್ಲಿ [ಮಂದೆಯನ್ನು] ಮೇಯಿಸುವವನಾಗಿದ್ದಾನೆ. 17 ನನ್ನ ಕಾಂತನೇ, ಹೊರಡು, ಹಗಲು ತಂಪಾಗಿ ನೆರಳು ಇಳಿದು ಹೋಗುವ ತನಕ ವಿಯೋಗವೆಂಬ ಪರ್ವತಗಳಲ್ಲಿ ಜಿಂಕೆಯಂತೆಯೂ ಪ್ರಾಯದ ಎರಳೆಯಂತೆಯೂ ಇರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India