Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 5 - ಕನ್ನಡ ಸತ್ಯವೇದವು J.V. (BSI)


ಜಯಗೀತ

1 ಆ ದಿನದಲ್ಲಿ ದೆಬೋರಳೂ ಅಬೀನೋವಮನ ಮಗನಾದ ಬಾರಾಕನೂ ಹಾಡಿದ್ದೇನಂದರೆ -

2 ಇಸ್ರಾಯೇಲ್ಯರಲ್ಲಿ ಸೇನಾನಾಯಕರು ಎದ್ದಿದ್ದಾರೆ; ಜನರು ಸ್ವೇಚ್ಫೆಯಿಂದ ಸೈನ್ಯದಲ್ಲಿ ಸೇರಿದ್ದಾರೆ, ಯೆಹೋವನನ್ನು ಕೊಂಡಾಡಿರಿ.

3 ಅರಸರೇ, ಕೇಳಿರಿ; ಪ್ರಭುಗಳೇ, ಕಿವಿಗೊಡಿರಿ; ನಾನು ಯೆಹೋವನನ್ನು ಕೀರ್ತಿಸುವೆನು; ಇಸ್ರಾಯೇಲ್‍ದೇವರಾದ ಯೆಹೋವನಿಗೆ ಗಾನ ಮಾಡುವೆನು.

4 ಯೆಹೋವನೇ, ನೀನು ಹೊರಟು ಎದೋಮ್ಯರ ಪ್ರಾಂತವಾದ ಸೇಯೀರಿನ ಮಾರ್ಗವಾಗಿ ಪಯಣಮಾಡುತ್ತಾ ಬರುವಾಗ ಭೂಲೋಕವು ಕಂಪಿಸಿತು, ಆಕಾಶದಿಂದ ಹನಿ ಬಿದ್ದಿತು; ಮೇಘಮಂಡಲವು ಮಳೆಗರೆಯಿತು.

5 ಯೆಹೋವನ ಮುಂದೆ ಪರ್ವತಗಳು ಕರಗಿ ಹೋದವು, ಇಸ್ರಾಯೇಲ್ ದೇವರಾದ ಯೆಹೋವನ ಎದುರಿಗೆ ಆ ಸೀನಾಯಿಬೆಟ್ಟವೂ ನೀರಾಯಿತು.

6 ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತು ಹೋಯಿತು; ಪ್ರಯಾಣಿಕರು ಸೀಳುದಾರಿಹಿಡಿದು ಹೋಗುವರು.

7 ದೆಬೋರಳಾದ ನಾನು ಇಸ್ರಾಯೇಲ್ಯರಲ್ಲಿ ತಾಯಿಯಂತೆ ಎದ್ದು ಬರುವವರೆಗೆ ಇಸ್ರಾಯೇಲ್‍ಗ್ರಾಮಗಳು ಹಾಳು ಬಿದ್ದಿದ್ದವು.

8 ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಊರುಬಾಗಲವರೆಗೆ ಬಂದಿತ್ತು. ಇಸ್ರಾಯೇಲ್ಯರ ನಾಲ್ವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳು ಇದ್ದಿಲ್ಲ.

9 ನಾನು ಇಸ್ರಾಯೇಲ್ ನಾಯಕರಲ್ಲಿಯೂ ಸ್ವೇಚ್ಫೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತೇನೆ; ಯೆಹೋವನನ್ನು ಕೊಂಡಾಡಿರಿ.

10 ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವವರೇ, ರತ್ನಗಂಬಳಿಗಳ ಮೇಲೆ ಕೂತುಕೊಳ್ಳುವವರೇ, ಪ್ರಯಾಣಿಕರೇ, ಗಾನ ಮಾಡಿರಿ.

11 ಸೇದುವ ಬಾವಿಗಳ ಬಳಿಯಲ್ಲಿ ಕೊಳ್ಳೆಯನ್ನು ಹಂಚಿಕೊಳ್ಳುವವರ ಧ್ವನಿಗಿಂತ ಗಟ್ಟಿಯಾಗಿ ಯೆಹೋವನ ನೀತಿಸಾಧನೆಯನ್ನು ವರ್ಣಿಸುತ್ತಾರೆ. ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. ಆ ಕಾಲದಲ್ಲಿ ಯೆಹೋವನ ಜನರು ಊರು ಬಾಗಲುಗಳಿಗೆ ಇಳಿದು ಬಂದರು.

12 ಎಚ್ಚರವಾಗು, ದೆಬೋರಳೇ, ಎಚ್ಚರವಾಗು; ಎಚ್ಚರವಾಗು, ಎಚ್ಚರವಾಗಿ ಗಾನ ಮಾಡು. ಬಾರಾಕನೇ, ಏಳು; ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.

13 ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು; ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.

14 ಅಮಾಲೇಕ್ಯರ ಪ್ರದೇಶದಲ್ಲಿ ನೆಲೆಗೊಂಡಿರುವ ಎಫ್ರಾಯೀಮ್ಯರೂ ಅವರ ಜೊತೆಯಲ್ಲಿ ಬೆನ್ಯಾಮೀನ್ಯರೂ ಬಂದರು; ಮಾಕೀರನ ಗೋತ್ರದಿಂದ ಪ್ರಧಾನರೂ ಜೆಬುಲೂನ್ ಕುಲದಿಂದ ದಂಡಧಾರಿಗಳಾದ ಸೇನಾನಾಯಕರೂ

15 ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲ ಪ್ರಭುಗಳೂ ಇಸ್ಸಾಕಾರ್ಯರೊಡನೆ ಬಾರಾಕನೂ ಆಗವಿುಸಿದರು. ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ಸರ್ರನೆ ತಗ್ಗಿಗೆ ಬಂದರು. ರೂಬೇನ್ಯರು ನೀರಿನ ಕಾಲುವೆಗಳ ಬಳಿಯಲ್ಲಿ ಮಾಡಿದ ತೀರ್ಮಾನಗಳು ಘನವಾದವುಗಳೇ ಸರಿ.

16 ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ ಕೂತಿರುವದೇಕೆ? ಮಂದೆಗಳ ಮಧ್ಯದಲ್ಲಿ ಕೊಳಲೂದುವದನ್ನು ಕೇಳಬೇಕೆಂದಿದ್ದೀರೋ? ರೂಬೇನ್ಯರು ನೀರಿನ ಕಾಲುವೆಗಳ ಬಳಿಯಲ್ಲಿ ಮಾಡಿದ ವಿಚಾರಗಳು ಬಹು ಘನವಾದವುಗಳೇ ಸರಿ.

17 ಗಿಲ್ಯಾದ್ಯರು ಯೊರ್ದನಿನ ಆಚೆಯಲ್ಲೇ ಉಳಿದರು; ದಾನ್ ಕುಲದವರು ಹಡಗುಗಳಲ್ಲಿಯೇ ಉಳಿದದ್ದೇಕೆ? ಆಶೇರ್ ಕುಲದವರು ತಮ್ಮ ರೇವುಗಳನ್ನು ಬಿಡದೆ ಸಮುದ್ರತೀರದಲ್ಲಿ ಸುಮ್ಮನೆ ಕೂತುಬಿಟ್ಟರು.

18 ಜೆಬುಲೂನ್ಯರೂ ನಫ್ತಾಲ್ಯರೂ ಅಂಥವರಲ್ಲ; ಅವರು ಬೈಲಿನ ದಿನ್ನೆಗಳಲ್ಲಿ ತಮ್ಮ ಜೀವವನ್ನು ಮರಣಾಪತ್ತಿಗೊಪ್ಪಿಸಿದರು.

19 ಅರಸರು ಬಂದು ಯುದ್ಧಮಾಡಿದರು; ಕಾನಾನ್ಯರಾಜರು ಮೆಗಿದ್ದೋ ಪ್ರವಾಹಗಳ ಬಳಿಯಲ್ಲಿರುವ ತಾನಾಕದಲ್ಲಿ ಕೂಡಿಬಂದು ಕಾದಿದರು. ಅವರಿಗೆ ದ್ರವ್ಯವೇನೂ ಸಿಕ್ಕಲಿಲ್ಲ.

20 ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು.

21 ಪೂರ್ವಪ್ರಸಿದ್ಧವಾದ ಕೀಷೋನ್ ಹೊಳೆಯು ಶತ್ರುಗಳನ್ನು ಬಡಕೊಂಡು ಹೋಯಿತು. (ನನ್ನ ಮನವೇ, ಧೈರ್ಯದಿಂದ ಮುಂದೆ ಹೊರಡು.)

22 ಭರಧೌಡಿನಿಂದ ಓಡುವ ಅವರ ಬಲವಾದ ಕುದುರೆಗಳ ಕಾಲುಗಳ ಪೆಟ್ಟಿನಿಂದ ನೆಲವು ಕಂಪಿಸಿತು.

23 ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ; ಯುದ್ಧವೀರರ ಜೊತೆಯಲ್ಲಿ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; ಅವರನ್ನು ಶಪಿಸೇ ಶಪಿಸಿರಿ.

24 ಎಲ್ಲಾ ಸ್ತ್ರೀಯರಲ್ಲಿ ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳಿಗೇ ಆಶೀರ್ವಾದವು; ಗುಡಾರಗಳಲ್ಲಿ ವಾಸಿಸುವ ಸ್ತ್ರೀಯರಲ್ಲಿ ಆಕೆಗೇ ಆಶೀರ್ವಾದವು.

25 ನೀರು ಕೇಳಿದನು, ಹಾಲು ಕೊಟ್ಟಳು; ಉತ್ತಮಪಾತ್ರೆಯಲ್ಲಿ ಮಜ್ಜಿಗೆಕೊಟ್ಟಳು.

26 ಕೈಚಾಚಿ ಗೂಟವನ್ನು ತೆಗೆದುಕೊಂಡಳು; ಬಲಗೈಯಲ್ಲಿ ದೊಡ್ಡ ಕೊಡತಿಯನ್ನು ಹಿಡಿದಳು; ಆ ಕೊಡತಿಯಿಂದ ಸೀಸೆರನ ತಲೆಯನ್ನು ಒಡೆದುಬಿಟ್ಟಳು. ಅವನ ಕಣತಲೆಗೆ ತಿವಿದು ಬಡಿದಳು.

27 ಅವನು ಆಕೆಯ ಕಾಲುಗಳ ಬಳಿಯಲ್ಲಿ ಬೊಗ್ಗಿಕೊಂಡು ಉರುಳಿ ಬಿದ್ದನು; ಅವನು ಆಕೆಯ ಕಾಲುಗಳ ಬಳಿಯಲ್ಲಿ ಮುದುರಿಕೊಂಡು ಉರುಳಿದನು. ಅವನು ಬಿದ್ದಲ್ಲೇ ಸತ್ತನು.

28 ಸೀಸೆರನ ತಾಯಿಯು ಕಿಟಿಕಿಯಿಂದ ನೋಡಿದಳು; ಸೀಸೆರನ ತಾಯಿಯು ಕಿಟಿಕಿಯ ಜಾಲರಿಗಳಿಂದ ಕೂಗಿದಳು. ಅವನ ರಥವು ಬರುವದಕ್ಕೆ ಇಷ್ಟು ಹೊತ್ತೇಕಾಯಿತು! ಅವನ ಕುದುರೆಗಳ ಕಾಲುಗಳಿಗೆ ಇಷ್ಟು ಸಾವಕಾಶವೇಕೆ ಅಂದಳು.

29 ಸಭ್ಯಸ್ತ್ರೀಯರಲ್ಲಿ ಬುದ್ಧಿವಂತೆಯರು ಕೊಟ್ಟ ಉತ್ತರವನ್ನು ಈಕೆಯು ತನ್ನಲ್ಲಿ ತಾನೇ ಅಂದುಕೊಳ್ಳುತ್ತಿದ್ದದ್ದು ಹೇಗಂದರೆ -

30 ನಿಶ್ಚಯವಾಗಿ ಅವರಿಗೆ ಕೊಳ್ಳೆಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಸೈನಿಕನಿಗೆ ಒಬ್ಬಿಬ್ಬರು ದಾಸಿಯರೂ ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ ವಿಚಿತ್ರವಾಗಿ ಕಸೂತಿಹಾಕಿದ ಒಂದೆರಡು ವಸ್ತ್ರಗಳೂ ಕಂಠಮಾಲೆಯೂ ದೊರಕಿರುತ್ತವೆ ಎಂಬದೇ.

31 ಯೆಹೋವನ ಎಲ್ಲಾ ಶತ್ರುಗಳೂ ಇವರಂತೆಯೇ ನಾಶವಾಗಲಿ; ಆತನ ಭಕ್ತರು ಪ್ರತಾಪದಿಂದ ಉದಯಿಸುವ ಸೂರ್ಯನಂತಿರಲಿ. ದೇಶದಲ್ಲಿ ನಾಲ್ವತ್ತು ವರುಷ ಸಮಾಧಾನವಿತ್ತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು