ನ್ಯಾಯಸ್ಥಾಪಕರು 3 - ಕನ್ನಡ ಸತ್ಯವೇದವು J.V. (BSI)1 ಕಾನಾನ್ಯರೊಡನೆ ನಡೆದ ಯುದ್ಧಗಳಲ್ಲಿ ಒಂದನ್ನೂ ನೋಡದೆ ಇದ್ದ ಇಸ್ರಾಯೇಲ್ಯರನ್ನು ಪರೀಕ್ಷಿಸುವದಕ್ಕೂ 2 ಇಸ್ರಾಯೇಲ್ ಸಂತತಿಯವರಲ್ಲಿ ಯುದ್ಧವಿದ್ಯೆಯನ್ನು ಅರಿಯದವರಿಗೆ ಅದನ್ನು ಕಲಿಸಿಕೊಡುವದಕ್ಕೂ ಯೆಹೋವನು ಉಳಿಸಿದ ಜನಾಂಗಗಳವರು ಯಾರಂದರೆ - 3 ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಸರ್ವ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಾವಳಿಯಲ್ಲಿ ಬಾಳ್‍ಹೆರ್ಮೊನ್ ಬೆಟ್ಟದಿಂದ ಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು ಇವರೇ. 4 ತಾನು ಮೋಶೆಯ ಮೂಲಕವಾಗಿ ಇವರ ಪಿತೃಗಳಿಗೆ ವಿಧಿಸಿದ ಆಜ್ಞೆಗಳನ್ನು ಇಸ್ರಾಯೇಲ್ಯರು ಕೈಕೊಂಡು ನಡೆಯುವರೋ ಇಲ್ಲವೋ ಎಂಬದನ್ನು ಪರೀಕ್ಷಿಸಿ ತಿಳುಕೊಳ್ಳುವದಕ್ಕೋಸ್ಕರ ಯೆಹೋವನು ಅವರನ್ನು ಉಳಿಸಿದನು. 5 ಇಸ್ರಾಯೇಲ್ಯರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ 6 ಅವರ ಕನ್ಯೆಯರನ್ನು ತಾವು ತಂದು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು ಅವರ ದೇವತೆಗಳನ್ನು ಸೇವಿಸಿದರು. ಒತ್ನೀಯೇಲ್, ಏಹೂದ್, ಶಮ್ಗರ್ ಎಂಬ ಪ್ರಥಮ ನ್ಯಾಯಸ್ಥಾಪಕರು 7 ಇಸ್ರಾಯೇಲ್ಯರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟು ಆತನ ದೃಷ್ಟಿಯಲ್ಲಿ ದ್ರೋಹಿಗಳಾದರು. 8 ಆದದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬವನಿಗೆ ಮಾರಿಬಿಟ್ಟನು. ಅವರು ಎಂಟು ವರುಷಗಳವರೆಗೆ ಅವನಿಗೆ ದಾಸರಾಗಿದ್ದರು. 9 ಇಸ್ರಾಯೇಲ್ಯರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಅವರನ್ನು ಬಿಡಿಸುವದಕ್ಕೋಸ್ಕರ ರಕ್ಷಕನನ್ನು ಎಬ್ಬಿಸಿದನು; ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನೇ ಆ ರಕ್ಷಕನು. 10 ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದ ಅವನು ಇಸ್ರಾಯೇಲ್ಯರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು. ಯೆಹೋವನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಅವನ ಕೈಗೆ ಒಪ್ಪಿಸಿಕೊಟ್ಟದರಿಂದ ಅವನು ಅವನನ್ನು ಪೂರ್ಣವಾಗಿ ಸೋಲಿಸಿಬಿಟ್ಟನು. 11 ದೇಶದಲ್ಲಿ ನಾಲ್ವತ್ತು ವರುಷಗಳ ಪರ್ಯಂತರ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು. 12 ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಆತನು ಅವರ ದ್ರೋಹದ ನಿವಿುತ್ತ ಮೋವಾಬ್ಯರ ಅರಸನಾದ ಎಗ್ಲೋನನನ್ನು ಅವರಿಗೆ ವಿರೋಧವಾಗಿ ಬಲಪಡಿಸಿದನು. 13 ಇವನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲ್ಯರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು. 14 ಇಸ್ರಾಯೇಲ್ಯರು ಅವನಿಗೆ ಹದಿನೆಂಟು ವರುಷ ದಾಸರಾಗಿದ್ದರು. 15 ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವದಕ್ಕೋಸ್ಕರ ಬೆನ್ಯಾಮೀನ್ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲ್ಯರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು. 16 ಅವನು ತನಗೋಸ್ಕರ ಒಂದು ಗುದ್ದುಮೊಳ ಉದ್ದವಾದ ಇಬ್ಬಾಯಿಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಕೆಳಗೆ ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋಗಿ 17 ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಒಪ್ಪಿಸಿದನು. ಎಗ್ಲೋನನು ಬಲು ಕೊಬ್ಬಿದವನು. 18 ಏಹೂದನು ಕಪ್ಪವನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತುಕೊಂಡು ಬಂದ ಆಳುಗಳನ್ನು ಕಳುಹಿಸಿಬಿಟ್ಟು 19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು - ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ ಅಂದನು. ಆಗ ಅರಸನು ನಿಶ್ಶಬ್ದ ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು. 20 ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕೂತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ - ನಿನಗೆ ಹೇಳಬೇಕಾದದ್ದೊಂದು ದೇವೋಕ್ತಿಯಿದೆ ಅನ್ನಲು ಅವನು ತನ್ನ ಸಿಂಹಾಸನದಿಂದೆದ್ದನು. 21 ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು. 22 ಅಲಗೂ ಹಿಡಿಯೂ ಹೊಟ್ಟೆಯೊಳಗೆ ಹೊಕ್ಕವು. ಅವನು ಕತ್ತಿಯನ್ನು ಹೊರಗೆ ತೆಗೆಯದ್ದರಿಂದ ಕೊಬ್ಬು ಅಲಗನ್ನು ಸುತ್ತಿಕೊಂಡಿತು; ಮಲವು ಹೊರಗೆ ಬಂದಿತು. 23 ಏಹೂದನು ಪಡಸಾಲೆಗೆ ಬಂದು ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು. 24 ತರುವಾಯ ಸೇವಕರು ಅಲ್ಲಿ ಬಂದು ಬಾಗಲಿಗೆ ಬೀಗಹಾಕಿರುವದನ್ನು ಕಂಡು - ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು 25 ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಕದಗಳು ತೆರೆಯಲ್ಪಡದೆ ಇರುವದನ್ನು ನೋಡಿ ಬೀಗದ ಕೈಯನ್ನು ತೆಗೆದುಕೊಂಡು ಬಾಗಲನ್ನು ತೆರೆಯಲು ಇಗೋ ಅವರ ಒಡೆಯನು ಸತ್ತು ಬಿದ್ದಿದ್ದನು. 26 ಅವರು ತಡಮಾಡುವಷ್ಟರಲ್ಲಿ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ಹೊಳೆದಾಟಿ ಸೆಯೀರಾ ಎಂಬಲ್ಲಿಗೆ ಬಂದು 27 ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಕೊಂಬನ್ನು ಊದಿದನು. ಆಗ ಇಸ್ರಾಯೇಲ್ಯರು ಅವನ ಬಳಿಗೆ ಬಂದು ಗಟ್ಟಾ ಇಳಿದು ಅವನ ಸಂಗಡ ಹೊರಟರು. 28 ಅವನು ಅವರ ನಾಯಕನಾಗಿ - ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆಂದು ಹೇಳಲು ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ ಹಿಡಿದರು; ಯಾರನ್ನೂ ದಾಟಗೊಡಲಿಲ್ಲ. 29 ಅವರು ಆ ಕಾಲದಲ್ಲಿ ಪುಷ್ಟರೂ ಪರಾಕ್ರವಿುಗಳೂ ಆದ ಸುಮಾರು ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಒಬ್ಬನೂ ತಪ್ಪಿಸಿಕೊಳ್ಳದಂತೆ ಹತಮಾಡಿದರು. 30 ಆ ದಿವಸದಲ್ಲಿ ಮೋವಾಬ್ಯರು ಇಸ್ರಾಯೇಲ್ಯರಿಂದ ತಗ್ಗಿಸಲ್ಪಟ್ಟರು; ದೇಶದಲ್ಲಿ ಎಂಭತ್ತು ವರುಷ ಸಮಾಧಾನವಿತ್ತು. 31 ಏಹೂದನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಹತಮಾಡಿ ಇಸ್ರಾಯೇಲ್ಯರನ್ನು ರಕ್ಷಿಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India