ನ್ಯಾಯಸ್ಥಾಪಕರು 20 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ಬೆನ್ಯಾಮೀನ್ಯರನ್ನು ಸಂಹರಿಸಿದ್ದು 1 ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲ್ಯರೆಲ್ಲರೂ ಏಕಮನಸ್ಸಿನಿಂದ ಹೊರಟು ವಿುಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ನೆರೆದರು. 2 ಆ ದೇವಪ್ರಜಾಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು. 3 (ಇಸ್ರಾಯೇಲ್ಯರು ಕೂಡಿಕೊಂಡು ವಿುಚ್ಪೆಗೆ ಬಂದಿದ್ದಾರೆಂಬ ವರ್ತಮಾನವು ಬೆನ್ಯಾಮೀನ್ಯರಿಗೆ ಮುಟ್ಟಿತು.) ಇಸ್ರಾಯೇಲ್ಯರು - ಈ ದುಷ್ಟತನವು ಹೇಗೆ ನಡೆಯಿತೆಂದು ತಿಳಿಸಿರಿ ಎಂದು ಕೇಳಲು 4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು - ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಇಳುಕೊಂಡೆನು. 5 ಆ ಊರಿನ ಜನರು ಅದೇ ರಾತ್ರಿ ನಾನು ಇಳುಕೊಂಡಿದ್ದ ಮನೆಯನ್ನು ಸುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು; ಮತ್ತು ನನ್ನ ಉಪಪತ್ನಿಯನ್ನು ಬಹಳವಾಗಿ ಭಂಗಪಡಿಸಿದರು. ಆಕೆಯು ಸತ್ತಳು. 6 ಅವರು ಇಸ್ರಾಯೇಲ್ಯರಲ್ಲಿ ನಡಿಸಿದ ಇಂಥ ಕೆಟ್ಟ ಹುಚ್ಚುಗೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲ್ಯರ ಎಲ್ಲಾ ಪ್ರಾಂತಗಳಿಗೆ ಕಳುಹಿಸಿದೆನು. 7 ಇಲ್ಲಿ ಕೂಡಿದ ಎಲ್ಲಾ ಇಸ್ರಾಯೇಲ್ಯರೇ, ಈಗ ನಿಮ್ಮ ಆಲೋಚನಾಭಿಪ್ರಾಯಗಳನ್ನು ಹೇಳಿರಿ ಅಂದನು. 8 ಇದನ್ನು ಕೇಳಿ ಜನರು ಏಕಮನಸ್ಸಿನಿಂದ - ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ತಿರುಗಕೂಡದು. 9 ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. 10 ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲ್ಯರಲ್ಲಿ ನಡಿಸಿದ ದುಷ್ಕರ್ಮಕ್ಕಾಗಿ ಅವರಿಗೆ ದಂಡನೆ ಮಾಡೋಣ ಅಂದುಕೊಂಡರು. 11 ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು. 12 ಅವರು ಬೆನ್ಯಾಮೀನ್ಯರ ಸಮಸ್ತ ಕುಲಸ್ಥರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ - ನಿಮ್ಮಲ್ಲಿ ನಡೆದ ಈ ದುಷ್ಕರ್ಮ ಎಂಥದು? 13 ಈಗ ಗಿಬೆಯ ಊರಲ್ಲಿರುವ ಆ ನೀಚರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲ್ಯರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ ಎಂದು ಹೇಳಿಸಿದರು. 14 ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ನಿಂತರು. 15 ಆ ದಿವಸದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು. 16 ಈ ಎಲ್ಲಾ ಜನರಲ್ಲಿ ಏಳು ನೂರು ಮಂದಿ ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬನೂ ಕೂದಲೆಳೆಯಷ್ಟೂ ಗುರಿ ತಪ್ಪದ ಹಾಗೆ ಕವಣೆಯನ್ನು ಹೊಡಿಯುವದರಲ್ಲಿ ನಿಪುಣನು; 17 ಬೆನ್ಯಾಮೀನ್ಯರಲ್ಲದ ಇಸ್ರಾಯೇಲ್ಯರಲ್ಲಿ ನಾಲ್ಕು ಲಕ್ಷ ಭಟರಿದ್ದರು; ಇವರೆಲ್ಲರೂ ವೀರರೇ. 18 ಇಸ್ರಾಯೇಲ್ಯರು ಬೇತೇಲಿಗೆ ಹೋಗಿ - ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಯೆಹೋವನನ್ನು ಕೇಳಲು ಆತನು - ಮೊದಲು ಯೆಹೂದಕುಲದವರು ಹೋಗಲಿ ಎಂದು ಹೇಳಿದನು. 19 ಇಸ್ರಾಯೇಲ್ಯರು ಬೆಳಿಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು 20 ಬೆನ್ಯಾಮೀನ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ಸಿದ್ಧರಾಗಿ ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು. 21 ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು. 22 ಇಸ್ರಾಯೇಲ್ಯರು ತಿರಿಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹ ಕಟ್ಟಿದ ಸ್ಥಳದಲ್ಲೇ ತಿರಿಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು. 23 (ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ - ನಾವು ತಿರಿಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ ಎಂದು ಕೇಳಲು ಆತನು - ಹೋಗಿ ಯುದ್ಧಮಾಡಿರಿ ಅಂದನು. 24 ಆದದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು.) 25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಬೀಳಿಸಿದರು. 26 ಆಗ ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದವರೆಗೂ ಉಪವಾಸ ಮಾಡಿದರು. ಇದಲ್ಲದೆ ಅವರು ಆತನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 27 ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು; 28 ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವದರಿಂದ ಇಸ್ರಾಯೇಲ್ಯರು - ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ ಬೇಡವೋ ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ - ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು ಅಂದನು. 29 ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚಿನೋಡುವದಕ್ಕೆ ಇರಿಸಿ 30 ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು. 31 ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕಾಗಿ ಪಟ್ಟಣವನ್ನು ಬಿಟ್ಟು ದೂರಕ್ಕೆ ಬಂದರು. ಅವರು ಮುಂಚಿನಂತೆ ಜನರನ್ನು ವಧಿಸುವದಕ್ಕೆ ಪ್ರಾರಂಭಿಸಿ ಬೇತೇಲಿಗೂ ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜ ಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು. 32 ಬೆನ್ಯಾಮೀನ್ಯರು - ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆಂದು ನೆನಸಿದರು, ಇಸ್ರಾಯೇಲ್ಯರಾದರೋ - ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ ಎಂದು ಮಾತಾಡಿಕೊಂಡು 33 ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‍ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರಿಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನಿನಿಂದ ಎದ್ದು 34 ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹು ಘೋರವಾಯಿತು. ತಮಗೆ ಅಪಾಯವು ಒದಗಿ ಬಂದದೆ ಎಂಬದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಲಿಲ್ಲ. 35 ಯೆಹೋವನು ಇಸ್ರಾಯೇಲ್ಯರಿಗೆ ಜಯಕೊಟ್ಟದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾಮೀನ್ಯ ಭಟರನ್ನು ಹತಮಾಡಿದರು. 36 ತಾವು ಸೋತು ಹೋದೆವೆಂಬದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. (ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚಿನೋಡುವದಕ್ಕೋಸ್ಕರ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು. 37 ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ ಅದರೊಳಗಿದ್ದವರೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. 38 ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ ಓಡಿಹೋಗುತ್ತಿದ್ದವರು ತಿರುಗಿಕೊಂಡು ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚಿನೋಡುವವರೂ ಉಳಿದ ಇಸ್ರಾಯೇಲ್ಯರೂ ತಮ್ಮ ತಮ್ಮೊಳಗೆ ಗೊತ್ತು ಮಾಡಿದ್ದರು. 39 ಬೆನ್ಯಾಮೀನ್ಯರಾದರೋ - ಇಸ್ರಾಯೇಲ್ಯರು ಮುಂಚಿನಂತೆ ನಮ್ಮ ಮುಂದೆ ಸೋತುಹೋದರೆಂದು ನೆನಸಿ ಅವರನ್ನು ಹತಿಸ ಪ್ರಾರಂಭಿಸಿ ಸುಮಾರು ಮೂವತ್ತು ಮಂದಿಯನ್ನು ಕೊಂದುಹಾಕಿದರು. 40 ಆದರೆ ಪಟ್ಟಣದಿಂದ ಹೊಗೆಯೆದ್ದು ಸ್ತಂಭದೋಪಾದಿಯಲ್ಲಿ ಕಾಣಿಸಲು ಇಸ್ರಾಯೇಲ್ಯರು ತಿರುಗಿ ನಿಂತರು. 41 ಬೆನ್ಯಾಮೀನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣವು ಅಗ್ನಿಗೆ ಆಹುತಿಯಾದದ್ದನ್ನು ಕಂಡು ತಮಗೆ ಅಪಾಯ ಪ್ರಾಪ್ತವಾಯಿತೆಂದು ಕಳವಳಗೊಂಡರು. 42 ಅವರು ಇಸ್ರಾಯೇಲ್ಯರಿಗೆ ಬೆನ್ನುತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಯುದ್ಧಸ್ಥರು ಅವರನ್ನು ಹಿಂದಟ್ಟಿದ್ದರಿಂದಲೂ ಪಟ್ಟಣಕ್ಕೆ ಬೆಂಕಿ ಹೊತ್ತಿಸಿದವರು ಬಂದುಬಿಟ್ಟದ್ದರಿಂದಲೂ ಅವರು ಉಭಯರ ಮಧ್ಯದಲ್ಲಿ ಸಿಕ್ಕಿ ಹಾಳಾದರು. 43 ಇಸ್ರಾಯೇಲ್ಯರು ಅವರನ್ನು ಸುತ್ತಿಕೊಂಡು ಎಲ್ಲಿಯೂ ಓಡಗೊಡದೆ ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿರುವ ಮೆನೂಹದಲ್ಲಿ ತುಳಿದುಬಿಟ್ಟರು. 44 ಈ ಪ್ರಕಾರ ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು. 45 ಇದಲ್ಲದೆ ಅವರು ಅರಣ್ಯದಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲುತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದು ಹಾಕಿದರು. ಅಲ್ಲಿಂದ ಗಿದೋವಿುನವರೆಗೆ ಹಿಂದಟ್ಟಿ ತಿರಿಗಿ ಎರಡು ಸಾವಿರ ಜನರನ್ನು ಹತಮಾಡಿದರು. 46 ಹೀಗೆ ಆ ದಿವಸ ಬೆನ್ಯಾಮೀನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ಧಸನ್ನದ್ಧರಾದ ಭಟರು ಸಂಹೃತರಾದರು.) 47 ಆದರೆ ಆರು ನೂರು ಮಂದಿ ಅರಣ್ಯಮಾರ್ಗವಾಗಿ ಓಡಿಹೋಗಿ ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು. 48 ಇಸ್ರಾಯೇಲ್ಯರು ತಿರುಗಿಕೊಂಡು ಬೆನ್ಯಾಮೀನ್ ದೇಶದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ ದನಕುರಿಗಳನ್ನೂ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ ಎಲ್ಲಾ ಊರುಗಳಿಗೆ ಬೆಂಕಿಹೊತ್ತಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India