Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 2 - ಕನ್ನಡ ಸತ್ಯವೇದವು J.V. (BSI)

1 ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀವಿುಗೆ ಬಂದು ಇಸ್ರಾಯೇಲ್ಯರಿಗೆ - ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವದಿಲ್ಲವೆಂದು ನಾನು ಮಾತು ಕೊಟ್ಟಾಗ -

2 ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?

3 ನೀವು ಹೀಗೆ ಮಾಡುವದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸಿ ಬಿಡುವದಿಲ್ಲ; ಅವರು ನಿಮ್ಮನ್ನು ಉಪದ್ರವಪಡಿಸುವರು; ಅವರ ದೇವತೆಗಳು ನಿಮಗೆ ಉರುಲಾಗುವವು ಎಂದು ಮೊದಲೇ ಹೇಳಿದೆನಲ್ಲಾ ಅಂದನು.

4 ಯೆಹೋವನ ದೂತನು ಈ ಮಾತುಗಳನ್ನು ಹೇಳಿದಾಗ ಇಸ್ರಾಯೇಲ್ಯರೆಲ್ಲರೂ ಗಟ್ಟಿಯಾಗಿ ಅತ್ತರು.

5 ಮತ್ತು ಆ ಸ್ಥಳಕ್ಕೆ ಬೋಕೀಮೆಂಬ ಹೆಸರಿಟ್ಟು ಅಲ್ಲಿಯೇ ಯೆಹೋವನಿಗೋಸ್ಕರ ಯಜ್ಞಮಾಡಿದರು.


ನ್ಯಾಯಸ್ಥಾಪಕರ ಕಾಲದ ಚರಿತ್ರೆ ( 2.6—16.31 ) ಇಸ್ರಾಯೇಲ್ಯರಿಗೆ ಸಂಭವಿಸಿದ ಸುಖದುಃಖಗಳ ಕಾರಣಗಳು

6 ಯೆಹೋಶುವನು ಇಸ್ರಾಯೇಲ್ಯರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವತಂತ್ರಿಸಿಕೊಂಡರು.

7 ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.

8 ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರಹತ್ತು ವರುಷದವನಾಗಿ ಮರಣಹೊಂದಿದನು.

9 ಅವನನ್ನು ಅವನ ಸ್ವಾಸ್ತ್ಯಭೂವಿುಯಾದ ತಿಮ್ನತ್‍ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು; ಅದು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಗಾಷ್‍ಬೆಟ್ಟದ ಉತ್ತರದಿಕ್ಕಿನಲ್ಲಿರುತ್ತದೆ.

10 ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.

11 ಈ ಇಸ್ರಾಯೇಲ್ಯರು ಬಾಳನ ಪ್ರತಿಮೆಗಳನ್ನು ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.

12 ತಮ್ಮ ಪಿತೃಗಳನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಯೆಹೋವನನ್ನು ರೇಗಿಸಿದರು.

13 ಅವರು ಯೆಹೋವನನ್ನು ಬಿಟ್ಟು ಬಾಳ್ ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದದರಿಂದ

14 ಯೆಹೋವನ ಕೋಪವು ಅವರ ಮೇಲೆ ಉರಿಯಹತ್ತಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿ ಬಿಟ್ಟನು; ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.

15 ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು; ಅವರಿಗೆ ಬಹುಸಂಕಟವಾಯಿತು.

16 ಆಗ ಯೆಹೋವನು ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸುವದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದರೂ

17 ಇಸ್ರಾಯೇಲ್ಯರು ಅವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪಿತೃಗಳ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು; ಅವರಂತೆ ನಡೆಯಲೇ ಇಲ್ಲ.

18 ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ ಕನಿಕರಪಟ್ಟು ನ್ಯಾಯಸ್ಥಾಪಕರನ್ನು ಎಬ್ಬಿಸಿ ಅವರ ಜೀವಮಾನವೆಲ್ಲಾ ಅವರ ಸಂಗಡ ಇದ್ದು ಅವರ ಮೂಲಕವಾಗಿ ಇಸ್ರಾಯೇಲ್ಯರನ್ನು ಶತ್ರುಗಳಿಂದ ಬಿಡಿಸಿದನು.

19 ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲ್ಯರು ತಿರುಗಿಕೊಂಡು ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ ಸೇವಿಸಿ ಅವುಗಳಿಗೆ ಅಡ್ಡಬಿದ್ದರು; ಅವರು ಈ ತಮ್ಮ ದುರ್ಮಾರ್ಗವನ್ನೂ ಮೊಂಡತನವನ್ನೂ ಬಿಡಲೇ ಇಲ್ಲ.

20 ಆದದರಿಂದ ಯೆಹೋವನ ಕೋಪವು ಇಸ್ರಾಯೇಲ್ಯರ ಮೇಲೆ ಉರಿಯಹತ್ತಿತು; ಆತನು - ಈ ಜನರ ಪಿತೃಗಳಿಗೆ ನಾನು ಕೊಟ್ಟ ನಿಬಂಧನೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ.

21 ಹೀಗಿರುವದರಿಂದ ಯೆಹೋಶುವನು ಸಾಯುವ ಮೊದಲು ಹೊರಡಿಸದೆ ಬಿಟ್ಟ ಜನಾಂಗಗಳಲ್ಲಿ ನಾನೂ ಒಂದನ್ನಾದರೂ ಹೊರಡಿಸುವದಿಲ್ಲ.

22 ಇವರೂ ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಯೆಹೋವನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮೂಲಕವಾಗಿ ಪರೀಕ್ಷಿಸುವೆನು ಅಂದನು.

23 ಇದರಿಂದ ಯೆಹೋವನು ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಅಟ್ಟಿಬಿಡಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು