Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 12 - ಕನ್ನಡ ಸತ್ಯವೇದವು J.V. (BSI)


ಎಫ್ರಾಯೀಮ್ಯರ ಕಲಹಾಪಜಯಗಳು

1 ಎಫ್ರಾಯೀಮ್ಯರು ಕೂಡಿಕೊಂಡು ಯೊರ್ದನನ್ನು ದಾಟಿ ಉತ್ತರದಿಕ್ಕಿಗೆ ಯೆಪ್ತಾಹನಿದ್ದಲ್ಲಿಗೆ ಹೋಗಿ ಅವನಿಗೆ - ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ ಅಂದರು.

2 ಆಗ ಅವನು ಅವರಿಗೆ - ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ.

3 ನೀವು ಸಹಾಯಮಾಡುವದಿಲ್ಲವೆಂದು ತಿಳಿದು ಜೀವವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆನು; ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿದನು. ಹೀಗಿರಲು ನೀವು ಈಗ ಬಂದು ನನ್ನೊಡನೆ ಕಲಹಮಾಡುವದೇಕೆ ಎಂದು ಉತ್ತರಕೊಟ್ಟು

4 ಗಿಲ್ಯಾದಿನವರೆಲ್ಲರನ್ನೂ ಕೂಡಿಸಿ ಎಫ್ರಾಯೀಮ್ಯರಿಗೆ ವಿರೋಧವಾಗಿ ಯುದ್ಧಕ್ಕೆ ನಿಂತನು. ಗಿಲ್ಯಾದ್ಯರಾದ ನೀವು ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿರಿ ಎಂದು ಎಫ್ರಾಯೀಮ್ಯರು ಅಂದದರಿಂದ ಗಿಲ್ಯಾದ್ಯರು [ಕೋಪಗೊಂಡು] ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು.

5 ಇದಲ್ಲದೆ ಅವರು ಎಫ್ರಾಯೀವಿುಗೆ ಹೋಗುವ ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿರಿ ಎಂದು ಅವರನ್ನು ಕೇಳಿದರೆ ಅವರು - ನೀನು ಎಫ್ರಾಯೀಮ್ಯನೋ ಎಂದು ಕೇಳುವರು.

6 ಅವನು ಅಲ್ಲವೆಂದರೆ ಅವನಿಗೆ - ನೀನು ಷಿಬ್ಬೋಲೆತ್ ಅನ್ನು ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ಹತರಾದರು.

7 ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಾಯೇಲ್ಯರನ್ನು ಆರು ವರುಷ ಪಾಲಿಸಿದನಂತರ ಸತ್ತನು; ಅವನ ಶವವನ್ನು ಗಿಲ್ಯಾದಿನ ಪಟ್ಟಣಗಳಲ್ಲೊಂದರಲ್ಲಿ ಸಮಾಧಿ ಮಾಡಿದರು.


ಇಬ್ಚಾನ್, ಏಲೋನ್, ಅಬ್ದೋನ್ ಎಂಬ ನ್ಯಾಯಸ್ಥಾಪಕರು

8 ಅವನ ತರುವಾಯ ಬೇತ್ಲೆಹೇವಿುನವನಾದ ಇಬ್ಚಾನನು ಇಸ್ರಾಯೇಲ್ಯರ ಪಾಲಕನಾದನು.

9 ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು; ತನ್ನ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಕೊಟ್ಟು ಗಂಡು ಮಕ್ಕಳಿಗೋಸ್ಕರ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು.

10 ಇವನು ಇಸ್ರಾಯೇಲ್ಯರನ್ನು ಏಳು ವರುಷ ಪಾಲಿಸಿದನಂತರ ಮೃತನಾಗಲು ಅವನ ಶವವನ್ನು ಬೇತ್ಲೆಹೇವಿುನಲ್ಲಿ ಸಮಾಧಿಮಾಡಿದರು.

11 ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಾಯೇಲ್ಯರ ಪಾಲಕನಾಗಿ ಹತ್ತು ವರುಷಗಳವರೆಗೆ

12 ಅವರನ್ನು ಪಾಲಿಸಿದನಂತರ ಮರಣ ಹೊಂದಿದನು. ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು.

13 ಇವನ ತರುವಾಯ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರ ಪಾಲಕನಾದನು.

14 ಇವನಿಗೆ ನಾಲ್ವತ್ತು ಮಂದಿ ಮಕ್ಕಳೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿಮಾಡುವದಕ್ಕೋಸ್ಕರ ಎಪ್ಪತ್ತು ಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರನ್ನು ಎಂಟು ವರುಷ ಪಾಲಿಸಿದನಂತರ ಮರಣಹೊಂದಿದನು;

15 ಅವನ ಶವವನ್ನು ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು