ನ್ಯಾಯಸ್ಥಾಪಕರು 10 - ಕನ್ನಡ ಸತ್ಯವೇದವು J.V. (BSI)ತೋಲಾ, ಯಾಯೀರ್ ಎಂಬ ನ್ಯಾಯಸ್ಥಾಪಕರು 1 ಅಬೀಮೆಲೆಕನ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಎದ್ದು ಇಸ್ರಾಯೇಲ್ಯರನ್ನು ರಕ್ಷಿಸಿದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸವಾಗಿದ್ದನು. 2 ಇಪ್ಪತ್ತಮೂರು ವರುಷಗಳವರೆಗೆ ಇಸ್ರಾಯೇಲ್ಯರನ್ನು ಪಾಲಿಸಿದನಂತರ ಸತ್ತು ಶಾಮೀರಿನಲ್ಲಿ ಹೂಣಲ್ಪಟ್ಟನು. 3 ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲ್ಯರನ್ನು ಇಪ್ಪತ್ತೆರಡು ವರುಷ ಪಾಲಿಸಿದನು. 4 ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರೀ ಕತ್ತೆಗಳೂ ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನವರೆಗೂ ಯಾಯೀರಿನ ಗ್ರಾಮಗಳೆಂದು ಹೆಸರಿದೆ. 5 ಯಾಯೀರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು. ಅಮ್ಮೋನಿಯರ ಕಾಟವು 6 ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ಆತನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನೂ ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸಹತ್ತಿ ಯೆಹೋವನನ್ನು ಬಿಟ್ಟೇ ಬಿಟ್ಟರು. 7 ಆದದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವನಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು. 8 ಇವರು ಆ ವರುಷದಿಂದ ಹದಿನೆಂಟು ವರುಷಗಳವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲ್ಯರನ್ನು ಬಹಳವಾಗಿ ಪೀಡಿಸುತ್ತಾ ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು. 9 ಇದಲ್ಲದೆ ಅಮ್ಮೋನಿಯರು ಯೊರ್ದನ್ ಹೊಳೆಯನ್ನು ದಾಟಿ ಯೆಹೂದ ಬೆನ್ಯಾಮೀನ್ ಎಫ್ರಾಯೀಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಾಯೇಲ್ಯರಿಗೆ ಬಹಳ ಕಷ್ಟವಾಯಿತು. 10 ಆಗ ಅವರು ಯೆಹೋವನಿಗೆ - ನಾವು ನಮ್ಮ ದೇವರಾದ ನಿನ್ನನ್ನು ಬಿಟ್ಟು ಬಾಳನ ಪ್ರತಿಮೆಗಳನ್ನು ಪೂಜಿಸಿ ನಿನಗೆ ವಿರುದ್ಧವಾಗಿ ಪಾಪ ಮಾಡಿದ್ದೇವೆ ಎಂದು ಮೊರೆಯಿಡಲು ಆತನು ಅವರಿಗೆ - 11 ಐಗುಪ್ತ, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ 12 ಇವೇ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ಬಿಡಿಸಿದರೂ 13 ನೀವು ತಿರಿಗಿ ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುತ್ತಾ ಬಂದಿರಿ; ಆದದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವದೇ ಇಲ್ಲ. 14 ಹೋಗಿ ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮ ಈ ಇಕ್ಕಟ್ಟಿನಲ್ಲಿ ಸಹಾಯ ಮಾಡಲಿ ಅಂದನು. 15 ಇಸ್ರಾಯೇಲ್ಯರು ತಿರಿಗಿ ಯೆಹೋವನಿಗೆ - ನಾವು ಪಾಪ ಮಾಡಿದ್ದೇವೆ; ನಿನಗೆ ಸರಿ ಕಾಣುವ ಪ್ರಕಾರ ನಮಗೆ ಮಾಡು; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು ಎಂದು ಮೊರೆಯಿಟ್ಟು ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದುಹಾಕಿ ಯೆಹೋವನನ್ನು ಸೇವಿಸುವವರಾದರು. 16 ಆಗ ಆತನ ಮನಸ್ಸು ಇಸ್ರಾಯೇಲ್ಯರ ಸಂಕಟದ ನಿವಿುತ್ತ ಬಲು ನೊಂದಿತು. 17 ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳುಕೊಳ್ಳಲು ಇಸ್ರಾಯೇಲ್ಯರು ಕೂಡಿ ವಿುಚ್ಪೆಯಲ್ಲಿ ಪಾಳೆಯಮಾಡಿಕೊಂಡರು. 18 ಗಿಲ್ಯಾದಿನ ಜನರೂ ಅಧಿಪತಿಗಳೂ - ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕುವವನಾವನು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡೇವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India