Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನೆಹೆಮೀಯ 2 - ಕನ್ನಡ ಸತ್ಯವೇದವು J.V. (BSI)


ನೆಹೆಮೀಯನು ಯೆರೂಸಲೇಮನ್ನು ಭದ್ರಪಡಿಸುವದಕ್ಕೆ ರಾಜಾಜ್ಞೆಹೊಂದಿದ್ದು

1 ನಾನು ಅರಸನ ಪಾನಸೇವಕನಾಗಿದ್ದೆನು. ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರುಷದ ಚೈತ್ರಮಾಸದಲ್ಲಿ ಅರಸನು ದ್ರಾಕ್ಷಾರಸಪಾನಮಾಡುವ ಹೊತ್ತಿನಲ್ಲಿ ನಾನು ದ್ರಾಕ್ಷಾರಸವನ್ನು ತಂದು ಅವನಿಗೆ ಕೊಟ್ಟೆನು. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ.

2 ಅರಸನು ನನಗೆ - ನೀನು ಕಳೆಗುಂದಿದವನಾಗಿ ಕಾಣುವದೇಕೆ? ನಿನಗೆ ದೇಹಾಲಸ್ಯವಿಲ್ಲವಲ್ಲಾ; ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣವಲ್ಲ ಎಂದು ಹೇಳಲು ನನಗೆ ಮಹಾಭೀತಿಯುಂಟಾಯಿತು.

3 ನಾನು ಅರಸನಿಗೆ - ಅರಸನು ಚಿರಂಜೀವಿಯಾಗಿರಲಿ. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಲುಗಳು ಬೆಂಕಿಯಿಂದ ಸುಟ್ಟು ಹೋಗಿವೆ; ಹೀಗಿರುವಲ್ಲಿ ನನ್ನ ಮುಖವು ಕಳೆಗುಂದದೆ ಇರುವದು ಹೇಗೆ ಎಂದು ಹೇಳಿದೆನು.

4 ಆಗ ಅರಸನು ನನ್ನನ್ನು - ನಿನ್ನ ಅಪೇಕ್ಷೆಯೇನು ಎಂದು ಕೇಳಿದನು. ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ ಅರಸನಿಗೆ - ರಾಜರ ಚಿತ್ತವಿರುವದಾದರೆ ಮತ್ತು

5 ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ತಿರಿಗಿ ಕಟ್ಟುವದಕ್ಕೋಸ್ಕರ ಯೆಹೂದದೇಶಕ್ಕೆ ಹೋಗಲು ನನಗೆ ಅಪ್ಪಣೆಯಾಗಬೇಕು ಎಂದು ಹೇಳಿದೆನು.

6 ರಾಣಿಯು ಅರಸನ ಹತ್ತಿರದಲ್ಲೇ ಕೂತುಕೊಂಡಿದ್ದಳು. ಅರಸನು - ಪ್ರಯಾಣಕ್ಕೆ ನಿನಗೆಷ್ಟು ಕಾಲಬೇಕು? ಯಾವಾಗ ಹಿಂದಿರುಗುವಿ ಎಂದು ವಿಚಾರಿಸಿದಾಗ ನಾನು ಕಾಲವನ್ನು ಸೂಚಿಸಲು ಅವನು ಒಪ್ಪಿಕೊಂಡು ಅಪ್ಪಣೆಕೊಟ್ಟನು.

7 ತರುವಾಯ ನಾನು ಅರಸನಿಗೆ - ಹೊಳೆಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತಗಳಲ್ಲಿ ಹಾದು ಯೆಹೂದ ಸೀಮೆಗೆ ಹೋಗುವದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ

8 ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಲುಗಳು, ಪಟ್ಟಣದ ಪೌಳಿಗೋಡೆ, ನಾನು ಸೇರುವ ಮನೆ ಇವುಗಳಿಗೆ ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡುವ ಹಾಗೂ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಬೇಕು ಎಂದು ಬಿನ್ನವಿಸಲು ನನ್ನ ದೇವರ ಕೃಪಾಹಸ್ತಪಾಲನೆ ನನಗಿದ್ದದ್ದರಿಂದ

9 ಅರಸನು ಅವುಗಳನ್ನು ನನಗೆ ಕೊಟ್ಟದ್ದಲ್ಲದೆ ನನ್ನನ್ನು ಸಾಗಕಳುಹಿಸುವದಕ್ಕೋಸ್ಕರ ಸೇನಾಧಿಪತಿಗಳನ್ನೂ ರಾಹುತರನ್ನೂ ಕಳುಹಿಸಿದನು. ಹೀಗೆ ನಾನು ಹೊಳೆಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು.


ನೆಹೆಮೀಯನು ರಾತ್ರಿಯಲ್ಲಿ ಪೌಳಿಗೋಡೆಯನ್ನು ಪರೀಕ್ಷಿಸಿದ್ದು

10 ಇಸ್ರಾಯೇಲ್ಯರ ಹಿತಚಿಂತಕನೊಬ್ಬನು ಬಂದನೆಂಬ ವರ್ತಮಾನವು ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್‍ದೇಶದವನಾದ ಟೋಬೀಯ ಎಂಬ ದಾಸನಿಗೂ ಮುಟ್ಟಿದಾಗ ಅವರು ಬಹಳವಾಗಿ ಹೊಟ್ಟೆಕಿಚ್ಚುಪಟ್ಟರು.

11 ಅನಂತರ ಯೆರೂಸಲೇವಿುಗೆ ಬಂದೆನು. ಅಲ್ಲಿ ಮೂರು ದಿನಗಳಿದ್ದ ಮೇಲೆ

12 ಯೆರೂಸಲೇವಿುಗೋಸ್ಕರ ಮಾಡತಕ್ಕ ಕಾರ್ಯದ ವಿಷಯವಾಗಿ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾನೆಂದು ಯಾರಿಗೂ ತಿಳಿಸದೆ ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರಕೊಂಡು ಹೊರಟೆನು. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ.

13 ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇವಿುನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಲುಗಳನ್ನೂ ನೋಡುತ್ತಾ ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಲಿಗೆ ಹೋದೆನು.

14 ಅಲ್ಲಿಂದ ಬುಗ್ಗೆಬಾಗಲನ್ನು ಹಾದು ಅರಸನ ಕೊಳಕ್ಕೆ ಹೋದೆನು.

15 ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವದಕ್ಕೆ ಮಾರ್ಗವಿಲ್ಲದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆನು. ಆಮೇಲೆ ಪುನಃ ತಗ್ಗಿನ ಬಾಗಲಿನಿಂದ ಮನೆಗೆ ಬಂದೆನು.

16 ನಾನು ಆವರೆಗೆ ಯೆಹೂದ್ಯರಿಗೂ ಯಾಜಕರಿಗೂ ಶ್ರೀಮಂತರಿಗೂ ಅಧಿಕಾರಿಗಳಿಗೂ ಕೆಲಸನಡಿಸತಕ್ಕ ಇತರರಿಗೂ ಏನೂ ತಿಳಿಸದೆ ಇದ್ದದರಿಂದ ನಾನು ಎಲ್ಲಿ ಹೋಗಿದ್ದೆನು, ಏನು ಮಾಡಿದೆನು ಎಂಬದು ಅಧಿಕಾರಿಗಳಿಗೆ ಗೊತ್ತಿರಲಿಲ್ಲ.

17 ಆಗ ನಾನು ಅವರಿಗೆ - ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೋ; ಯೆರೂಸಲೇಮ್ ಪಟ್ಟಣವು ಹಾಳುಬಿದ್ದದೆ, ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ; ಬನ್ನಿರಿ, ಯೆರೂಸಲೇವಿುನ ಗೋಡೆಯನ್ನು ಕಟ್ಟೋಣ. ಹೀಗೆ ಮಾಡಿದರೆ ನಮ್ಮ ಮೇಲಣ ನಿಂದೆಯು ಹೋಗುವದು ಎಂದು ಹೇಳಿದೆನು.

18 ಇದಲ್ಲದೆ ನನ್ನ ದೇವರ ಕೃಪಾಹಸ್ತವು ನನ್ನನ್ನು ಪಾಲಿಸಿದ್ದನ್ನೂ ಅರಸನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆನು. ಆಗ ಅವರು - ಬನ್ನಿರಿ, ಕಟ್ಟೋಣ ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.

19 ಹೋರೋನಿನವನಾದ ಸನ್ಬಲ್ಲಟನೂ ಅಮ್ಮೋನ್ ದೇಶದವನಾದ ಟೋಬೀಯ ಎಂಬ ದಾಸನೂ ಅರಬಿಯನಾದ ಗೆಷೆಮನೂ ಈ ವರ್ತಮಾನವನ್ನು ಕೇಳಿದಾಗ ಅವರು ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿ - ನೀವು ಇಲ್ಲಿ ಮಾಡುವದೇನು? ಅರಸನಿಗೆ ವಿರೋಧವಾಗಿ ತಿರುಗಿಬೀಳಬೇಕೆಂದಿರುತ್ತೀರೋ ಎಂದು ಕೇಳಿದರು.

20 ನಾನು ಅವರಿಗೆ - ಪರಲೋಕದೇವರು ನಮಗೆ ಸಾಫಲ್ಯವನ್ನನುಗ್ರಹಿಸುವನು. ಆದದರಿಂದ ಆತನ ಸೇವಕರಾದ ನಾವು ಕಟ್ಟುವದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಯೆರೂಸಲೇವಿುನಲ್ಲಿ ಪಾಲೂ ಹಕ್ಕೂ ಹೆಸರೂ ಇರುವದಿಲ್ಲ ಎಂದು ಉತ್ತರಕೊಟ್ಟೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು