Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನೆಹೆಮೀಯ 13 - ಕನ್ನಡ ಸತ್ಯವೇದವು J.V. (BSI)


ನೆಹೆಮೀಯನು ಎರಡನೆಯ ಸಾರಿ ಅಧಿಪತಿಯಾಗಿ ಬಂದು ಮತಸಂಬಂಧವಾಗಿ ವ್ಯವಸ್ಥೆಮಾಡಿದ್ದು

1 ಆ ಕಾಲದಲ್ಲಿ ಜನರ ಮುಂದೆ ಮೋಶೆಯ ಧರ್ಮಶಾಸ್ತ್ರಪಾರಾಯಣವು ನಡೆಯುತ್ತಿರಲಾಗಿ ಅದರಲ್ಲಿ - ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಸೇರಬಾರದು;

2 ಯಾಕಂದರೆ ಅವರು ಇಸ್ರಾಯೇಲ್ಯರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ; ಅವರನ್ನು ಶಪಿಸುವದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಅವನನ್ನು ಕರಿಸಿದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಅಶೀರ್ವಾದವನ್ನೇ ಹೇಳಿಸಿದನು ಎಂಬ ಮಾತು ಬರೆದಿರುವದಾಗಿ ಕಂಡು ಬಂತು.

3 ಇಸ್ರಾಯೇಲ್ಯರು ಈ ಧರ್ಮವಿಧಿಯನ್ನು ಕೇಳಿದೊಡನೆ ಎಲ್ಲಾ ವಿುಶ್ರಜಾತಿಯವರನ್ನು ತಮ್ಮ ಮಧ್ಯದಿಂದ ಬೇರ್ಪಡಿಸಿದರು.

4 ಇದಕ್ಕಿಂತ ಮೊದಲು ಯಾಜಕನಾದ ಎಲ್ಯಾಷೀಬನು ನಮ್ಮ ದೇವಾಲಯದ ಕೊಠಡಿಗಳ ಮೇಲ್ವಿಚಾರಕನಾಗಿ ನೇವಿುಸಲ್ಪಟ್ಟಿದ್ದನು.

5 ಇವನು ಟೋಬೀಯನ ಬೀಗನಾಗಿದ್ದದರಿಂದ ನೈವೇದ್ಯದ್ರವ್ಯ ಧೂಪ ಪಾತ್ರೆ ಇವುಗಳನ್ನೂ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳ ದಶಮಾಂಶವನ್ನೂ ಲೇವಿಯ ಗಾಯಕ ದ್ವಾರಪಾಲಕ ಇವರಿಗೆ ಸಲ್ಲತಕ್ಕ ಪದಾರ್ಥಗಳನ್ನೂ ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ ಇಡುವದಕ್ಕಾಗಿ ಉಪಯೋಗವಾಗುತ್ತಿದ್ದ ಕೊಠಡಿಯನ್ನು ಅವನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು.

6 ಬಾಬೆಲಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರುಷದಲ್ಲಿ ಅರಸನ ಬಳಿಗೆ ಹೋಗಿದ್ದೆನಾದದರಿಂದ ಇದೆಲ್ಲಾ ನಡೆಯುವಾಗ ನಾನು ಯೆರೂಸಲೇವಿುನಲ್ಲಿರಲಿಲ್ಲ. ಕಾಲಾಂತರದಲ್ಲಿ ನಾನು ಅರಸನಿಂದ ಅಪ್ಪಣೆಪಡಕೊಂಡು

7 ತಿರಿಗಿ ಯೆರೂಸಲೇವಿುಗೆ ಬಂದಾಗ ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವಾಲಯ ಪ್ರಾಕಾರದೊಳಗೆ ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನೋಡಿ

8 ಈ ದುಷ್ಕೃತ್ಯದ ದೆಸೆಯಿಂದ ಬಹಳವಾಗಿ ವ್ಯಸನಗೊಂಡು ಟೋಬೀಯನ ಮನೆಯ ಸಾಮಾನುಗಳನ್ನು ಆ ಕೊಠಡಿಯಿಂದ ಹೊರಗೆ ಹಾಕಿಸಿ

9 ಕೊಠಡಿಯನ್ನು ಶುದ್ಧಿಮಾಡುವದಕ್ಕೆ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯ ದ್ರವ್ಯ, ಧೂಪ ಇವುಗಳನ್ನು ತಿರಿಗಿ ಅಲ್ಲಿಡಿಸಿದೆನು.

10 ಇದಲ್ಲದೆ ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡಿಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಭೂಸ್ವಾಸ್ತ್ಯಗಳಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.

11 ಇದರ ದೆಸೆಯಿಂದ ನಾನು ಅಧಿಕಾರಿಗಳೊಡನೆ - ದೇವಾಲಯವನ್ನು ಅಲಕ್ಷ್ಯಮಾಡಿದ್ದೇಕೆ ಎಂಬದಾಗಿ ವಾದಿಸಿ ಬಿಟ್ಟುಹೋದವರನ್ನು ತಿರಿಗಿ ಕರಿಸಿ ಅವರನ್ನು ಅವರವರ ಉದ್ಯೋಗಗಳಲ್ಲಿರಿಸಿದೆನು.

12 ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.

13 ಆಮೇಲೆ ಉಗ್ರಾಣಗಳನ್ನು ನೋಡುವದಕ್ಕೋಸ್ಕರ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಕುಲದವನಾದ ಪೆದಾಯ ಇವರನ್ನೂ ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇವಿುಸಿದೆನು; ಇವರೆಲ್ಲರೂ ನಂಬಿಗಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ಸಿಕ್ಕತಕ್ಕದ್ದನ್ನು ಹಂಚಿಕೊಡುವದು ಇವರ ಕರ್ತವ್ಯ.

14 ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ನೆನಪುಮಾಡಿಕೋ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು [ನಿನ್ನ ಪುಸ್ತಕದಿಂದ] ಅಳಿಸಿಬಿಡಬೇಡ.

15 ಆ ಕಾಲದಲ್ಲಿ ಜನರು ಸಬ್ಬತ್‍ದಿವಸ ಯೆಹೂದ ದೇಶದಲ್ಲಿ ತೊಟ್ಟಿಯೊಳಗೆ ದ್ರಾಕ್ಷೆತುಳಿಯುವದನ್ನೂ ಕಣದ ಕಾಳನ್ನು ಕೂಡಿಸಿ ಆ ಕಾಳು ದ್ರಾಕ್ಷಾರಸ ದ್ರಾಕ್ಷೆ ಅಂಜೂರದ ಹಣ್ಣು ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಯೆರೂಸಲೇವಿುಗೆ ತರುವದನ್ನೂ ಕಂಡು ಅವರು ಆ ಆಹಾರಪದಾರ್ಥಗಳನ್ನು ಮಾರುವದಕ್ಕೆ ಬಂದಾಗ ಅವರನ್ನು ಗದರಿಸಿದೆನು.

16 ಇದಲ್ಲದೆ ದೇಶದಲ್ಲಿ ವಾಸಿಸುತ್ತಿದ್ದ ತೂರ್ಯರೂ ಮೀನು ಮುಂತಾದ ಸರಕುಗಳನ್ನು ತಂದು ಯೆಹೂದ್ಯರಿಗೆ ಸಬ್ಬತ್‍ದಿನದಲ್ಲಿ ಯೆರೂಸಲೇವಿುನಲ್ಲೇ ಮಾರುತ್ತಿದ್ದರು.

17 ಆಗ ನಾನು ಯೆಹೂದ ಶ್ರೀಮಂತರಿಗೆ - ನೀವು ಮಾಡುವದು ಎಂಥ ದುಷ್ಕೃತ್ಯ! ನೀವು ಸಬ್ಬತ್‍ದಿನವನ್ನು ಅಶುದ್ಧಮಾಡುತ್ತೀರಿ.

18 ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದ ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ ನಮ್ಮ ಪಟ್ಟಣದ ಮೇಲೆಯೂ ಬರಮಾಡಿದನಲ್ಲವೇ. ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲ್ಯರ ಮೇಲಿದ್ದ ದೇವಕೋಪವನ್ನು ಹೆಚ್ಚಿಸುತ್ತೀರೇನು ಎಂದು ಹೇಳಿ ಅವರನ್ನು ಗದರಿಸಿದೆನು.

19 ಇದಲ್ಲದೆ ಸಬ್ಬತ್‍ದಿನ ಪ್ರಾರಂಭವಾಗುವದಕ್ಕಿಂತ ಮೊದಲು ಯೆರೂಸಲೇವಿುನ ಬಾಗಲುಗಳಲ್ಲಿ ಕತ್ತಲಾಗಿರುವಾಗಲೇ ಕದಗಳನ್ನು ಮುಚ್ಚಿಸಿ ಸಬ್ಬತ್ ದಿನವು ಗತಿಸುವದಕ್ಕಿಂತ ಮುಂಚೆ ಅವುಗಳನ್ನು ತೆರೆಯಬಾರದೆಂದು ಆಜ್ಞಾಪಿಸಿ ಯಾವ ಹೊರೆಯೂ ಒಳಗೆ ಬಾರದಂತೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಕಾವಲಿರಿಸಿದೆನು.

20 ಆದದರಿಂದ ವರ್ತಕರೂ ಎಲ್ಲಾ ತರದ ದಿನಸುಗಳನ್ನು ಮಾರುವದಕ್ಕೆ ಬಂದವರೂ ಒಂದೆರಡು ಸಾರಿ ಯೆರೂಸಲೇವಿುನ ಹೊರಗೆ ಇಳುಕೊಂಡರು.

21 ಕಡೆಯಲ್ಲಿ ನಾನು ಅವರನ್ನು - ನೀವು ಗೋಡೆಯ ಹೊರಗೇಕೆ ಇಳುಕೊಂಡಿದ್ದೀರಿ? ನೀವು ತಿರಿಗಿ ಹೀಗೆ ಮಾಡಿದರೆ ನಿಮ್ಮನ್ನು ಹಿಡಿಸುವೆನು ಎಂದು ಗದರಿಸಲು ಅವರು ಅಂದಿನಿಂದ ಸಬ್ಬತ್‍ದಿನದಲ್ಲಿ ತಿರಿಗಿ ಬರಲಿಲ್ಲ.

22 ಆಮೇಲೆ ನಾನು ಲೇವಿಯರಿಗೆ - ಸಬ್ಬತ್‍ದಿನವನ್ನು ಪರಿಶುದ್ಧದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಬಂದು ಬಾಗಲುಗಳನ್ನು ಕಾಯಬೇಕು ಎಂದು ಆಜ್ಞಾಪಿಸಿದೆನು. ನನ್ನ ದೇವರೇ ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು ನಿನ್ನ ಮಹಾಕೃಪೆಗನುಸಾರವಾಗಿ ನನ್ನನ್ನು ಕನಿಕರಿಸು.

23 ಅದೇ ಕಾಲದಲ್ಲಿ ನಾನು ಅಷ್ಡೋದ್ ಅಮ್ಮೋನಿಯ ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ವಿಚಾರಮಾಡಿ

24 ಅವರ ಮಕ್ಕಳಲ್ಲಿ ಅರ್ಧಮಂದಿ ಯೂದಾಯ ಭಾಷೆಯಲ್ಲಿ ಮಾತಾಡಲರಿಯದೆ ಅಷ್ಡೋದ್ಯ ಮುಂತಾದ ಜನರ ಭಾಷೆಯನ್ನಾಡುತ್ತಾರೆಂದು ತಿಳಿಯಲು

25 ಕೋಪಗೊಂಡು ಅವರನ್ನು ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕಿತ್ತು -

26 ಅಂಥ ಸ್ತ್ರೀಯರ ದೆಸೆಯಿಂದ ಇಸ್ರಾಯೇಲ್‍ರಾಜನಾದ ಸೊಲೊಮೋನನು ದೋಷಿಯಾದನಲ್ಲವೇ. ಅನೇಕಾನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ; ಅವನು ತನ್ನ ದೇವರಿಗೆ ವಿಶೇಷ ಪ್ರಿಯನು; ಆದದರಿಂದ ದೇವರು ಅವನನ್ನು ಎಲ್ಲಾ ಇಸ್ರಾಯೇಲ್ಯರ ಮೇಲೆ ಅರಸನನ್ನಾಗಿ ನೇವಿುಸಿದನು. ಆದರೂ ಅನ್ಯದೇಶಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿದರು.

27 ಹೀಗಿರಲಾಗಿ ನೀವು ಅನ್ಯಸ್ತ್ರೀಯರನ್ನು ಮದುವೆಮಾಡಿಕೊಂಡು ಅದೇ ಘೋರವಾದ ದುಷ್ಟತ್ವವನ್ನು ನಡಿಸಿ ದೇವರಿಗೆ ದ್ರೋಹಿಗಳಾಗುವದನ್ನು ನಾವು ಒಪ್ಪಿಕೊಳ್ಳಬೇಕೋ ಎಂದು ಅವರನ್ನು ಗದರಿಸಿ ಅವರಿಂದ - ಅನ್ಯರ ಮಕ್ಕಳಿಗೆ ಹೆಣ್ಣುಕೊಡಬಾರದು, ನಿಮಗಾಗಲಿ ನಿಮ್ಮ ಮಕ್ಕಳಿಗಾಗಲಿ ಅವರಿಂದ ತರಲೂಬಾರದು ಎಂಬ ಧರ್ಮವಿಧಿಯನ್ನು ಕೈಕೊಳ್ಳುವದಾಗಿ ದೇವರ ಹೆಸರಿನಲ್ಲಿ ಪ್ರಮಾಣಮಾಡಿಸಿದೆನು.

28 ಮಹಾಯಾಜಕ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆನು.

29 ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರಲ್ಲಾ; ಇದನ್ನು ನೆನಪು ಮಾಡಿಕೋ.

30 ನಾನು ಈ ಪ್ರಕಾರ ಅನ್ಯವಾದದ್ದನ್ನೆಲ್ಲಾ ತೆಗಿಸಿ ಅವರನ್ನು ಶುದ್ಧಪಡಿಸಿದೆನಲ್ಲದೆ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಪ್ರತಿಯೊಬ್ಬನಿಗಿರುವ ಕೆಲಸದ ವಿಷಯವಾಗಿಯೂ

31 ನೇವಿುತ ಕಾಲಗಳಲ್ಲಿ ಸಲ್ಲತಕ್ಕ ಕಾಷ್ಠದಾನದ ಮತ್ತು ಪ್ರಥಮ ಫಲದ ವಿಷಯವಾಗಿಯೂ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪು ಮಾಡಿಕೋ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು