Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನಹೂಮ 3 - ಕನ್ನಡ ಸತ್ಯವೇದವು J.V. (BSI)


ನಿನೆವೆಯ ಧ್ವಂಸವು ನ್ಯಾಯ

1 ಅಯ್ಯೋ, ರಕ್ತಮಯಪುರಿಯ ಗತಿಯನ್ನು ಏನೆಂದು ಹೇಳಲಿ! ಅದು ಸುಳ್ಳಿನಿಂದಲೂ ಸುಲಿಗೆಯಿಂದಲೂ ತುಂಬಿದೆ; ಕೊಳ್ಳೆಹೊಡೆಯುವದನ್ನು ಬಿಡುವದೇ ಇಲ್ಲ.

2 ಆಹಾ, ಚಾಟಿಯ ಚಟಚಟ ಶಬ್ದ, ಚಕ್ರಗಳ ಚೀತ್ಕಾರ, ಕುದುರೆಗಳ ಭರಧೌಡು, ರಥಗಳ ಹಾರಾಟ,

3 ರಾಹುತರ ರಭಸ, ಥಳಥಳಿಸುವ ಕತ್ತಿ, ವಿುಂಚುವ ಈಟಿ, ಅಸಂಖ್ಯಾತ ಹತರು, ಶವಗಳ ಮಹಾರಾಶಿ! ಸತ್ತವರು ಲೆಕ್ಕವೇ ಇಲ್ಲ, [ನುಗ್ಗುವವರು] ಅವರ ಹೆಣಗಳನ್ನು ಎಡವುತ್ತಾರೆ.

4 ಅತಿಸುಂದರಿಯೂ ಮಂತ್ರತಂತ್ರನಿಪುಣಳೂ ಜನಾಂಗಗಳನ್ನು ತನ್ನ ಸೂಳೆತನದಿಂದ, ಕುಲಗಳನ್ನು ತನ್ನ ಮಂತ್ರತಂತ್ರಗಳಿಂದ ಗುಲಾಮತನಕ್ಕೆ ತಂದವಳೂ ಆದ ಸೂಳೆಯ ಲೆಕ್ಕವಿಲ್ಲದ ಸೂಳೆತನಗಳ ನಿವಿುತ್ತ ಇದೆಲ್ಲಾ ಆಗುವದು.

5 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ನಿನಗೆ ವಿರುದ್ಧನಾಗಿದ್ದೇನೆ, ನಿನ್ನ ನೆರಿಗೆಯನ್ನು ನಿನ್ನ ಕಣ್ಣ ಮುಂದೆಯೇ ಕೀಳಿಸುವೆನು, ನಿನ್ನ ಬೆತ್ತಲೆತನವನ್ನು ಜನಾಂಗಗಳಿಗೆ ತೋರಿಸುವೆನು, ನಿನ್ನ ಅವಮಾನವನ್ನು ರಾಜ್ಯಗಳಿಗೆ ಕಾಣಿಸುವೆನು.

6 ನಿನ್ನ ಮೇಲೆ ಹೊಲಸನ್ನು ಹಾಕಿ ಮಾನಕಳೆದು ನಿನ್ನನ್ನು ನೋಟವನ್ನಾಗಿ ಮಾಡುವೆನು.

7 ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ - ನಿನೆವೆಯೂ ಹಾಳಾಯಿತಲ್ಲಾ, ಯಾರು ಗೋಳಾಡಾರು, ನಿನ್ನನ್ನು ಸಂತೈಸತಕ್ಕವರು ನನಗೆ ಎಲ್ಲಿ ಸಿಕ್ಕಾರು ಅಂದುಕೊಳ್ಳುವನು.


ನಿನೆವೆಯ ನಾಶನವು ಖಂಡಿತ

8 ನೀನು ನೋ ಆಮೋನಿಗಿಂತ ಭದ್ರವಾಗಿದ್ದೀಯೋ? ಅದು ನೈಲಿನ ಪ್ರವಾಹಗಳಲ್ಲಿ ನೆಲೆಯಾಗಿತ್ತು, ನೀರು ಅದನ್ನು ಸುತ್ತಿಕೊಂಡಿತ್ತು, ಮಹಾ ನದಿಯು ಅದಕ್ಕೆ ಪೌಳಿಗೋಡೆ, ಜಲಾಶಯವು ಅದರ ದುರ್ಗ.

9 ಕೂಷ್ ಮತ್ತು ಐಗುಪ್ತವು ಅದರ ಅಪಾರಬಲ; ಪೂಟರೂ ಲೂಬ್ಯರೂ ಅದಕ್ಕೆ ಸಹಾಯಕರು.

10 ಆದರೂ ಅದು ಗಡೀಪಾರಾಗಿ ಸೆರೆಹೋಯಿತು; ಅದರ ಮಕ್ಕಳನ್ನು ಪ್ರತಿ ಬೀದಿಯ ಕೊನೆಯಲ್ಲಿ ಬಂಡೆಗೆ ಅಪ್ಪಳಿಸಿಬಿಟ್ಟರು; ಅದರ ಘನವಂತರಿಗೋಸ್ಕರ ಚೀಟುಹಾಕಿದರು, ಅದರ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಬಂಧಿಸಿದರು.

11 ನೀನೂ ಓಲಾಡುವಿ, ಬಳಲಿಹೋಗುವಿ; ನೀನೂ ಶತ್ರುವಿನ ನಿವಿುತ್ತ ಆಶ್ರಯವನ್ನು ಹುಡುಕುವಿ.

12 ನಿನ್ನ ಕೋಟೆಗಳೆಲ್ಲಾ ಮೊದಲು ಮಾಗಿದ ಹಣ್ಣುಳ್ಳ ಅಂಜೂರದ ಮರಗಳಂತಿರುವವು; ಆ ಮರಗಳನ್ನು ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವದು.

13 ಆಹಾ, ನಿನ್ನಲ್ಲಿನ ಜನರು ಹೆಣ್ಣಿಗರು; ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ತೆರೆದು ಹಾಕಿವೆ; ಬೆಂಕಿಯು ನಿನ್ನ ಅಗುಳಿಗಳನ್ನು ನುಂಗಿಬಿಟ್ಟಿದೆ.

14 ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಬುರುಜುಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಯನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ,

15 ಇದ್ದಲ್ಲಿಯೇ ಬೆಂಕಿಯು ನಿನ್ನನ್ನು ನುಂಗುವದು, ಕತ್ತಿಯು ನಿನ್ನನ್ನು ಕಡಿದುಬಿಡುವದು, ವಿುಡತೆಗಳೋಪಾದಿಯಲ್ಲಿ ನುಂಗಲ್ಪಡುವಿ; ನಿನ್ನ ಜನಸಂಖ್ಯೆಯು ವಿುಡತೆಗಳಷ್ಟು ಅಸಂಖ್ಯಾತವಾಗಲಿ. ಗುಂಪುವಿುಡತೆಗಳಷ್ಟು ಅಪರಿವಿುತವಾಗಲಿ;

16 ನಿನ್ನ ವರ್ತಕರ ಸಂಖ್ಯೆಯನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿಸಿದ್ದೀ; [ಆದರೇನು,] ವಿುಡತೆಯು [ರೆಕ್ಕೆಗಳ ಪರೆಯನ್ನು] ಹರಿದುಕೊಂಡು ಹಾರಿಹೋಗಿಬಿಡುವದಷ್ಟೆ.

17 ನಿನ್ನ ಪ್ರಭುಗಳು ವಿುಡತೆಗಳಂತಿದ್ದಾರೆ, ವಿುಡತೆಯ ದಂಡು ಶೀತದಿನದಲ್ಲಿ ಬೇಲಿಗಳೊಳಗೆ ಇಳಿದಿದ್ದು ಹೊತ್ತು ಹುಟ್ಟಿದಾಗ ಓಡಿಹೋಗಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ಅಡಗುವ ಪ್ರಕಾರ ನಿನ್ನ ಸೇನಾಪತಿಗಳು ಮಾಯವಾಗುತ್ತಾರೆ.

18 ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘನಿದ್ರೆಮಾಡುತ್ತಿದ್ದಾರೆ; ನಿನ್ನ ಮಹನೀಯರು ಒರಗಿಹೋಗಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸತಕ್ಕವರು ಯಾರೂ ಇಲ್ಲ.

19 ನಿನ್ನ ಗಾಯವು ಗುಣಹೊಂದದು, ನಿನ್ನ ಪೆಟ್ಟು ಗಡಸು; ನಿನ್ನ ಸುದ್ದಿಯನ್ನು ಕೇಳಿದವರೆಲ್ಲರೂ ನಿನಗೆ ಚಪ್ಪಾಳೆಹಾಕುತ್ತಾರೆ; ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಎಲ್ಲಿದ್ದಾರೆ?

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು