Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 5 - ಕನ್ನಡ ಸತ್ಯವೇದವು J.V. (BSI)


ಮೋಶೆಯ ಎರಡನೆಯ ಉಪನ್ಯಾಸ ( 5—28 ) ಏಕದೇವರಾಗಿರುವ ಯೆಹೋವನನ್ನು ಪೂರ್ಣಮನಸ್ಸಿನಿಂದ ಸೇವಿಸಬೇಕೆಂಬ ಪ್ರಬೋಧನೆ 5-11 ಯೆಹೋವನು ಹೋರೇಬಿನಲ್ಲಿ ಕೊಟ್ಟ ಹತ್ತು ಕಟ್ಟಳೆಗಳ ವಿಷಯ

1 ಮೋಶೆ ಇಸ್ರಾಯೇಲ್ಯರೆಲ್ಲರನ್ನು ಕರೆದು ಹೀಗಂದನು - ಇಸ್ರಾಯೇಲ್ಯರೇ, ನಾನು ಈಗ ನಿಮಗೆ ತಿಳಿಸುವ ಆಜ್ಞಾವಿಧಿಗಳನ್ನು ಕೇಳಿರಿ; ಇವುಗಳನ್ನು ಗ್ರಹಿಸಿಕೊಂಡು ಅನುಸರಿಸಿ ನಡೆಯಬೇಕು.

2 ನಮ್ಮ ದೇವರಾದ ಯೆಹೋವನು ಹೋರೇಬಿನಲ್ಲಿ ನಮ್ಮ ಸಂಗಡ ನಿಬಂಧನೆಯನ್ನು ಮಾಡಿದನು.

3 ಆತನು ನಮ್ಮ ಪೂರ್ವಿಕರ ಸಂಗಡ ಈ ನಿಬಂಧನೆಯನ್ನು ಮಾಡದೆ ಈಗ ಇಲ್ಲಿ ಜೀವದಿಂದಿರುವ ನಮ್ಮ ಸಂಗಡಲೇ ಇದನ್ನು ಮಾಡಿದನು.

4 ಯೆಹೋವನು ಆ ಬೆಟ್ಟದ ಮೇಲೆ ಬೆಂಕಿಯ ಜ್ವಾಲೆಯೊಳಗಿಂದ ಮುಖಾಮುಖಿಯಾಗಿ ನಿಮ್ಮ ಸಂಗಡ ಮಾತಾಡಲಾಗಿ

5 ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು ಬೆಟ್ಟವನ್ನು ಹತ್ತದೆಹೋಗಲಾಗಿ ನಾನು ಯೆಹೋವನಿಗೂ ನಿಮಗೂ ನಡುವೆ ನಿಂತು ಆತನು ಆಡಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನಂದರೆ -

6 ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆ ಮಾಡಿದ ಯೆಹೋವನೆಂಬ ನಿನ್ನ ದೇವರು ನಾನೇ.

7 ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.

8 ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂವಿುಯಲ್ಲಾಗಲಿ ಭೂವಿುಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು.

9 ಅವುಗಳಿಗೆ ಅಡ್ಡ ಬೀಳಲೂಬಾರದು, ಪೂಜೆಮಾಡಲೂಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನಾಗಿಯೂ

10 ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳವರೆಗೆ ದಯೆತೋರಿಸುವವನಾಗಿಯೂ ಇದ್ದೇನೆ.

11 ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವದಿಲ್ಲ.

12 ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನೀನು ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಿಸಬೇಕು.

13 ಆರು ದಿನಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.

14 ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿದಿನವಾಗಿದೆ; ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡುಮಕ್ಕಳು ಹೆಣ್ಣುಮಕ್ಕಳು ಗಂಡಾಳು ಹೆಣ್ಣಾಳು ಎತ್ತು ಕತ್ತೆ ಪಶುಗಳು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು. ನಿನ್ನಂತೆಯೇ ನಿನ್ನ ಗಂಡಾಳು ಹೆಣ್ಣಾಳುಗಳಿಗೂ ವಿಶ್ರಾಂತಿದೊರೆಯಬೇಕು.

15 ಐಗುಪ್ತದೇಶದಲ್ಲಿ ನೀವೂ ದಾಸತ್ವದಲ್ಲಿದ್ದದ್ದನ್ನೂ ನಿಮ್ಮ ದೇವರಾದ ಯೆಹೋವನು ಭುಜಪರಾಕ್ರಮದಿಂದಲೂ ಶಿಕ್ಷಾಹಸ್ತದಿಂದಲೂ ನಿಮ್ಮನ್ನು ಬಿಡುಗಡೆಮಾಡಿದ್ದನ್ನೂ ಜ್ಞಾಪಕಮಾಡಿಕೊಳ್ಳಿರಿ. ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂಬದನ್ನು ನಿಮ್ಮ ದೇವರಾದ ಯೆಹೋವನು ಇದಕ್ಕಾಗಿಯೇ ಆಜ್ಞಾಪಿಸಿದ್ದಾನೆ.

16 ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ, ಮತ್ತು ನಿನಗೆ ಮೇಲಾಗುವದು.

17 ನರಹತ್ಯಮಾಡಬಾರದು.

18 ವ್ಯಭಿಚಾರಮಾಡಬಾರದು.

19 ಕದಿಯಬಾರದು.

20 ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.

21 ಮತ್ತೊಬ್ಬನ ಹೆಂಡತಿಯನ್ನು ಅಪೇಕ್ಷಿಸಬಾರದು; ಮತ್ತೊಬ್ಬನ ಹೊಲ ಮನೆ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವದನ್ನೂ ಆಶಿಸಬಾರದು.

22 ಈ ಮಾತುಗಳನ್ನು ಯೆಹೋವನು ಆ ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು ಇವುಗಳ ಮಧ್ಯದೊಳಗಿಂದ ನಿಮ್ಮ ಸರ್ವಸಮೂಹಕ್ಕೆ ಕೇಳಿಸುವಂತೆ ಮಹಾ ಸ್ವರದಿಂದ ನುಡಿದನು; ಆಮೇಲೆ ಇನ್ನು ಮಾತಾಡಲಿಲ್ಲ. ಆತನು ಆ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಕೆತ್ತಿ ನನಗೆ ಕೊಟ್ಟನು.

23 ಆ ಬೆಟ್ಟವು ಬೆಂಕಿಯಿಂದ ಪ್ರಜ್ವಲಿಸುತ್ತಿರುವಾಗ ಆ ಕತ್ತಲೊಳಗಿಂದ ದೇವರ ಸ್ವರವನ್ನು ಕೇಳಿ ನೀವು ಅಂದರೆ ನಿಮ್ಮ ಕುಲಾಧಿಪತಿಗಳೂ ಹಿರಿಯರೂ ನನ್ನ ಬಳಿಗೆ ಬಂದು -

24 ನಮ್ಮ ದೇವರಾದ ಯೆಹೋವನು ತನ್ನ ಘನವನ್ನೂ ಮಹಿಮೆಯನ್ನೂ ನಮಗೆ ತೋರಿಸಿ ಅಗ್ನಿಜ್ವಾಲೆಯೊಳಗಿಂದ ತನ್ನ ಸ್ವರವನ್ನು ನಮಗೆ ಕೇಳಿಸಿದನಲ್ಲಾ. ಮನುಷ್ಯನು ತನ್ನ ಸಂಗಡ ದೇವರು ಮಾತಾಡಿದರೂ ಸಾಯದೆ ಬದುಕಿದ್ದುಂಟೆಂಬದು ಈ ಹೊತ್ತು ನಮಗೆ ತಿಳಿಯಬಂತು.

25 ಆದರೂ ಈ ಘೋರವಾದ ಅಗ್ನಿಜ್ವಾಲೆಯು ನಮ್ಮನ್ನು ದಹಿಸಿಬಿಟ್ಟೀತು, ಮತ್ತು ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರಿಗಿ ಕೇಳಿದರೆ ಸತ್ತೇವು.

26 ಬೆಂಕಿಯ ಜ್ವಾಲೆಯೊಳಗಿಂದ ಮಾತಾಡುವ ಚೈತನ್ಯಸ್ವರೂಪನಾದ ದೇವರ ಸ್ವರವನ್ನು ನಾವು ಕೇಳಿದಂತೆ ಎಲ್ಲಾ ಮನುಷ್ಯರೊಳಗೆ ಬೇರೆ ಯಾರು ಕೇಳಿ ಬದುಕಿದರು? ಹೀಗಿರುವದರಿಂದ ನಾವು ಯಾಕೆ ಸಾಯಬೇಕು?

27 ನೀನೇ ಹತ್ತಿರಕ್ಕೆ ಹೋಗಿ ನಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ತಿಳಿದುಕೊಂಡು ಬಂದು ನಮಗೆ ತಿಳಿಸು; ತಿಳಿಸಿದಾಗ ನಾವು ನಡಿಸುವೆವು ಎಂದು ಹೇಳಿದಿರಿ.

28 ನಿಮ್ಮ ಮಾತುಗಳನ್ನು ಯೆಹೋವನು ಕೇಳಿ ನನಗೆ - ಈ ಜನರು ನಿನಗೆ ಹೇಳಿದ ಮಾತುಗಳನ್ನು ಕೇಳಿದ್ದೇನೆ; ಆ ಮಾತುಗಳೆಲ್ಲಾ ಒಳ್ಳೆಯವೇ.

29 ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಎಷ್ಟೋ ಮೇಲು; ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವದು.

30 ನಿಮ್ಮ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ ಎಂದು ಅವರಿಗೆ ಆಜ್ಞಾಪಿಸು.

31 ನೀನಾದರೋ ಇಲ್ಲೇ ನನ್ನ ಹತ್ತಿರ ನಿಂತಿರು; ನೀನು ಅವರಿಗೆ ಬೋಧಿಸಬೇಕಾದ ಎಲ್ಲಾ ಧರ್ಮೋಪದೇಶವನ್ನೂ ವಿಧಿನಿರ್ಣಯಗಳನ್ನೂ ನಿನಗೆ ತಿಳಿಸುತ್ತೇನೆ. ನಾನು ಅವರಿಗೆ ಸ್ವಂತಕ್ಕಾಗಿ ಕೊಡುವ ದೇಶದಲ್ಲಿ ಅವರು ಇವುಗಳನ್ನು ಅನುಸರಿಸಬೇಕು ಎಂದು ಹೇಳಿದನು.

32 ಆದದರಿಂದ ನೀವು ಸ್ವಲ್ಪವಾದರೂ ತಪ್ಪದೆ ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆಯೇ ನಡೆದುಕೊಳ್ಳಬೇಕು.

33 ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಬಹುಕಾಲ ಶುಭವುಳ್ಳವರಾಗಿ ಬದುಕಿಕೊಳ್ಳುವಂತೆ ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ ಮಾರ್ಗದಲ್ಲೇ ನಡೆಯಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು