Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 4 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ವಿಗ್ರಹಾರಾಧನೆಯನ್ನು ಮಾಡದೆ ಯೆಹೋವನನ್ನೇ ಹೊಂದಿಕೊಂಡು ಆತನ ಆಜ್ಞಾವಿಧಿಗಳನ್ನು ಮನಃಪೂರ್ವಕವಾಗಿ ಅನುಸರಿಸಬೇಕೆಂಬದು

1 ಇಸ್ರಾಯೇಲ್ಯರೇ, ಕೇಳಿರಿ; ನೀವು ಬದುಕಿಕೊಂಡು ನಿಮ್ಮ ಪಿತೃಗಳ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಂತೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನಿಸಿ ಅನುಸರಿಸಬೇಕು.

2 ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು.

3 ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ನೋಡೇ ಇದ್ದೀರಷ್ಟೆ; ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶಮಾಡಿದನಲ್ಲಾ;

4 ನಿಮ್ಮ ದೇವರಾದ ಯೆಹೋವನನ್ನು ಹೊಂದಿಕೊಂಡವರಾದ ನೀವಾದರೋ ಇಂದಿನವರೆಗೂ ಉಳಿದುಕೊಂಡಿದ್ದೀರಿ.

5 ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.

6 ಇವುಗಳನ್ನು ಕೈಕೊಂಡು ಅನುಸರಿಸಿರಿ. ಅನುಸರಿಸಿದರೇ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ - ಈ ದೊಡ್ಡ ಜನಾಂಗವು ಜ್ಞಾನ ವಿವೇಕವುಳ್ಳ ಜನಾಂಗ ಎಂದು ಮಾತಾಡಿಕೊಳ್ಳುವರು.

7 ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು?

8 ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?

9 ಹೀಗಿರುವದರಿಂದ ನೀವು ಬಹು ಜಾಗರೂಕತೆಯಿಂದ ನಿಮ್ಮನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ ನೀವು ನೋಡಿದ ಸಂಗತಿಗಳನ್ನು ಎಷ್ಟು ಮಾತ್ರವೂ ಮರೆಯದೆ ಜೀವದಿಂದಿರುವವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು.

10 ಆ ಸಂಗತಿಗಳು ಯಾವವಂದರೆ - ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ - ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂವಿುಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ ಎಂದು ಹೇಳಿದ ದಿನದ ವಿಷಯಗಳೇ.

11 ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಮೊಬ್ಬೂ ಮೋಡವೂ ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿದದ್ದೂ;

12 ಯೆಹೋವನು ಆ ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತಾಡಿದ್ದೂ; ಮಾತಾಡಿದ ಸ್ವರ ನಿಮಗೆ ಕೇಳಿಸಿತೇ ಹೊರತು ಯಾವ ಆಕಾರವೂ ಕಾಣಿಸದೆ ಹೋದದ್ದೂ;

13 ನೀವು ಅನುಸರಿಸಬೇಕೆಂದು ಆತನು ನೇವಿುಸಿದ ನಿಬಂಧನೆಯನ್ನು ಅಂದರೆ ಹತ್ತು ಕಟ್ಟಳೆಗಳನ್ನು ನಿಮಗೆ ವಿವರಿಸಿ ಎರಡುಕಲ್ಲಿನ ಹಲಗೆಗಳಲ್ಲಿ ಕೆತ್ತಿಸಿದ್ದೂ;

14 ನೀವು ಹೊಳೆ ದಾಟಿ ಸ್ವಾಧೀನಮಾಡಿಕೊಳ್ಳುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನಿಮಗೆ ಬೋಧಿಸಬೇಕೆಂದು ಯೆಹೋವನು ಆ ಕಾಲದಲ್ಲಿ ನನಗೆ ಆಜ್ಞಾಪಿಸಿದ್ದೂ; ಇವುಗಳನ್ನೆಲ್ಲಾ ನೀವು ನೆನಪಿನಲ್ಲಿಟ್ಟುಕೊಂಡು ನಿಮ್ಮ ಸಂತತಿಯವರಿಗೆ ತಿಳಿಸಬೇಕು.

15 ಹೋರೇಬಿನಲ್ಲಿ ಯೆಹೋವನು ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತಾಡಿದಾಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲವಷ್ಟೆ. ಆದದರಿಂದ ನೀವು ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.

16 ನೀವು ಸ್ತ್ರೀ ಪುರುಷರ ರೂಪವನ್ನಾಗಲಿ

17 ಭೂವಿುಯ ಮೇಲೆ ಸಂಚರಿಸುವ ಮೃಗದ ರೂಪವನ್ನಾಗಲಿ ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ

18 ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳ ರೂಪವನ್ನಾಗಲಿ ಭೂವಿುಯ ಕೆಳಗಣ ನೀರಿನಲ್ಲಿರುವ ಮೀನಿನ ರೂಪವನ್ನಾಗಲಿ ದೇವರ ಸ್ವರೂಪವೆಂದು ಮಾಡಿಕೊಂಡು ಭ್ರಷ್ಟರಾಗಬಾರದು.

19 ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶ ಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂಬಾರದು ನಮಸ್ಕರಿಸಲೂಬಾರದು.

20 ನಿಮ್ಮನ್ನಾದರೋ ಯೆಹೋವನು ತನಗೆ ಸ್ವಕೀಯಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತದೇಶದಿಂದ ತಪ್ಪಿಸಿದನು; ಆ ಸಂಕಲ್ಪವು ಈಗ ನೆರವೇರಿತಲ್ಲಾ.

21 ಅದಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಗೊಂಡು ನಾನು ಯೊರ್ದನ್ ಹೊಳೆಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ಆ ಒಳ್ಳೆಯ ದೇಶವನ್ನು ಸೇರದೆ

22 ಇಲ್ಲಿಯೇ ಸಾಯಬೇಕೆಂದು ಖಂಡಿತವಾಗಿ ಹೇಳಿದನು. ನೀವಾದರೋ ಹೊಳೆ ದಾಟಿ ಆ ಒಳ್ಳೇ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

23 ಎಚ್ಚರಿಕೆಯಾಗಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ನೀವು ಮರೆತು ಪೂಜಿಸಬೇಡಿರೆಂದು ಆತನು ನಿಷೇಧಿಸಿದ ಯಾವ ವಸ್ತುವಿನ ವಿಗ್ರಹವನ್ನೂ ಮಾಡಿಕೊಳ್ಳಬಾರದು.

24 ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದೆ ಉರಿಯುವ ಬೆಂಕಿಯಂತೆ [ದ್ರೋಹಿಗಳನ್ನು] ದಹಿಸಿ ಬಿಡುವವನಾಗಿದ್ದಾನೆಂದು ತಿಳಿಯಿರಿ.

25 ನೀವು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದು ಬಹುಕಾಲ ಆ ದೇಶದಲ್ಲಿದ್ದ ಮೇಲೆ ದ್ರೋಹಿಗಳಾಗಿ ಯಾವ ವಿಗ್ರಹವನ್ನಾದರೂ ಮಾಡಿಕೊಂಡು ನಿಮ್ಮ ದೇವರಾದ ಯೆಹೋವನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ

26 ಆತನನ್ನು ಕೋಪಗೊಳಿಸಿದರೆ ನೀವು ಯೊರ್ದನ್ ಹೊಳೆಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವ ಆ ದೇಶದಲ್ಲಿ ಉಳಿಯದೆ ಬೇಗನೆ ನಾಶವಾಗಿ ಹೋಗುವಿರಿ ಎಂದು ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆದು ಎಚ್ಚರಿಸುತ್ತೇನೆ. ನೀವು ಆ ದೇಶದಲ್ಲಿ ಬಹುದಿವಸ ಇರದೆ ನಾಶವಾಗಿಯೇ ಹೋಗುವಿರಿ.

27 ಯೆಹೋವನು ನಿಮ್ಮನ್ನು ಅನ್ಯಜನಗಳಲ್ಲಿ ಚದರಿಸುವನು; ಆತನು ನಿಮ್ಮನ್ನು ಓಡಿಸುವ ದೇಶಗಳ ಜನರ ಮಧ್ಯದಲ್ಲಿ ನೀವು ಸ್ವಲ್ಪ ಮಂದಿ ಮಾತ್ರ ಉಳಿಯುವಿರಿ.

28 ನೀವು ಆ ದೇಶಗಳಲ್ಲಿ ಮನುಷ್ಯರು ಮಾಡಿಕೊಂಡ ದೇವರುಗಳನ್ನು ಅಂದರೆ ಮರದಲ್ಲಾಗಲಿ ಕಲ್ಲಿನಲ್ಲಾಗಲಿ ಕೆತ್ತಲ್ಪಟ್ಟು ನೋಡಲಾರದೆ ಕೇಳಲಾರದೆ ತಿನ್ನಲಾರದೆ ವಾಸನೆ ತಿಳುಕೊಳ್ಳಲಾರದೆ ಇರುವ ದೇವರುಗಳನ್ನು ಪೂಜಿಸುವವರಾಗುವಿರಿ.

29 ಅಲ್ಲಿಂದಲಾದರೂ ನೀವು ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ನಿಮ್ಮ ದೇವರಾದ ಯೆಹೋವನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು.

30 ಮೇಲೆ ಹೇಳಿದ ಎಲ್ಲಾ ಕಷ್ಟಗಳು ನಿಮಗೆ ಸಂಭವಿಸಿ ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.

31 ನಿಮ್ಮ ದೇವರಾದ ಯೆಹೋವನು ಕನಿಕರವುಳ್ಳ ದೇವರಾದದರಿಂದ ಆತನು ನಿಮ್ಮನ್ನು ಅಲಕ್ಷ್ಯಮಾಡುವದಿಲ್ಲ, ನಾಶನಕ್ಕೆ ಬಿಡುವದಿಲ್ಲ; ತಾನು ನಿಮ್ಮ ಪಿತೃಗಳ ಸಂಗಡ ಪ್ರಮಾಣಪೂರ್ವಕವಾಗಿ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವದಿಲ್ಲ.

32 ದೇವರು ಮನುಷ್ಯರನ್ನು ಸೃಷ್ಟಿಸಿ ಭೂವಿುಯ ಮೇಲೆ ಇರಿಸಿದ ದಿನ ಮೊದಲುಗೊಂಡು ಇಂದಿನವರೆಗೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೂ ಅಂಥ ದೊಡ್ಡ ಕಾರ್ಯವು ನಡೆದದ್ದುಂಟೋ, ಇಲ್ಲವೆ ಅಂಥದರ ಸುದ್ದಿ ಕೇಳಿದ್ದುಂಟೋ ಎಂದು ವಿಚಾರಿಸಿಕೊಳ್ಳಿರಿ.

33 ದೇವರು ಬೆಂಕಿಯ ಜ್ವಾಲೆಯೊಳಗಿಂದ ಮಾತಾಡಿದ ಸ್ವರವು ನಿಮಗೆ ಕೇಳಿಸಿತಲ್ಲಾ; ಬೇರೆ ಯಾವ ಜನರಾದರೂ ದೇವರ ಸ್ವರವನ್ನು ಕೇಳಿ ಬದುಕಿದ್ದುಂಟೋ?

34 ಬೇರೆ ಯಾವ ದೇವರಾದರೂ ಮನಶ್ಶೋಧನೆ, ಮಹತ್ಕಾರ್ಯ, ಉತ್ಪಾತ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಮಹಾಭೀತಿ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯೊಳಗಿಂದ ತಪ್ಪಿಸುವದಕ್ಕೆ ಪ್ರಯತ್ನಿಸಿದ್ದುಂಟೋ? ನಿಮ್ಮ ದೇವರಾದ ಯೆಹೋವನಾದರೋ ಐಗುಪ್ತದೇಶದಲ್ಲಿ ನಿಮಗೋಸ್ಕರ ಇದನ್ನೆಲ್ಲಾ ನಿಮ್ಮ ಕಣ್ಣಿಗೆದುರಾಗಿ ನಡಿಸಿದನಲ್ಲಾ.

35 ಯೆಹೋವನೊಬ್ಬನೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ತಿಳಿದುಕೊಳ್ಳುವದಕ್ಕಾಗಿ ಇದೆಲ್ಲಾ ನಿಮಗೆ ಮಾತ್ರ ತೋರಿಸಲ್ಪಟ್ಟಿತು.

36 ಆತನು ನಿಮ್ಮ ಶಿಕ್ಷಣಕ್ಕೋಸ್ಕರ ಆಕಾಶದಿಂದ ತನ್ನ ಸ್ವರವನ್ನು ನಿಮಗೆ ಕೇಳಿಸುವಂತೆ ಮಾಡಿದನು; ಮತ್ತು ಭೂವಿುಯ ಮೇಲೆ ತಾನಿದ್ದ ಮಹಾ ಅಗ್ನಿಜ್ವಾಲೆಯನ್ನು ನೋಡಿಸಿದನು; ಅದಲ್ಲದೆ ಆ ಅಗ್ನಿಜ್ವಾಲೆಯೊಳಗಿಂದ ಆತನು ಆಡಿದ ಮಾತುಗಳನ್ನು ಕೇಳಿಸುವಂತೆ ಮಾಡಿದನು.

37 ಆತನು ನಿಮ್ಮ ಪಿತೃಗಳನ್ನು ಪ್ರೀತಿಸಿ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೂ ಆದುಕೊಂಡು

38 ಈಗ ನಿಮ್ಮ ಅನುಭವಕ್ಕೆ ಬಂದ ಪ್ರಕಾರ ನಿಮಗಿಂತ ಮಹಾಬಲಿಷ್ಠವಾದ ಜನಾಂಗಗಳನ್ನು ಹೊರಡಿಸಲೂ ಅವರ ದೇಶದಲ್ಲಿ ನಿಮ್ಮನ್ನು ಸೇರಿಸಿ ಆ ದೇಶವನ್ನು ನಿಮಗೇ ಸ್ವದೇಶವಾಗಿ ಕೊಡಲೂಬೇಕೆಂದು ಸಂಕಲ್ಪಿಸಿ ತಾನೇ ನಿಮ್ಮೊಂದಿಗಿದ್ದು ತನ್ನ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದನಲ್ಲಾ.

39 ನೀವು ಇದನ್ನೆಲ್ಲಾ ಆಲೋಚಿಸಿ ಆಕಾಶದಲ್ಲಿಯೂ ಭೂವಿುಯಲ್ಲಿಯೂ ಯೆಹೋವನೊಬ್ಬನೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿಡಬೇಕು.

40 ನಿಮಗೂ ನಿಮ್ಮ ಸಂತತಿಯವರಿಗೂ ಶುಭವುಂಟಾಗುವಂತೆಯೂ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸದಾಕಾಲ ಬಾಳುವಂತೆಯೂ ನಾನು ನಿಮಗೆ ಈಗ ತಿಳಿಸಿದ ಆತನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು.


ಕೈತಪ್ಪಿ ನರಹತ್ಯಮಾಡಿದವರಿಗೋಸ್ಕರ ಮೋಶೆಯು ಮೂರು ಆಶ್ರಯ ಪಟ್ಟಣಗಳನ್ನು ನೇವಿುಸಿದ್ದು

41 ಆ ಕಾಲದಲ್ಲಿ ಮೋಶೆ ಯೊರ್ದನ್ ಹೊಳೆಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯನಗರಗಳನ್ನು ಗೊತ್ತುಮಾಡಿದನು.

42 ಮೊದಲು ಯಾವ ದ್ವೇಷವೂ ಇಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಲಿ ಎಂದು ಆ ಪಟ್ಟಣಗಳನ್ನು ನೇವಿುಸಿದನು.

43 ಅವು ಯಾವವಂದರೆ - ರೂಬೇನ್ಯರಿಗೋಸ್ಕರ ಮೀಶೋರ್ ಎಂಬ ಎತ್ತರವಾದ ಬೈಲುಸೀಮೆಯ ಅರಣ್ಯದಲ್ಲಿರುವ ಬೆಚೆರ್; ಗಾದ್ಯರಿಗೋಸ್ಕರ ಗಿಲ್ಯಾದಿನಲ್ಲಿರುವ ರಾಮೋತ್; ಮನಸ್ಸೆಯವರಿಗೋಸ್ಕರ ಬಾಷಾನಿನಲ್ಲಿರುವ ಗೋಲಾನ್ ಇವುಗಳೇ.


ಮೋಶೆ ಮಾಡಿದ ಎರಡನೆಯ ಉಪನ್ಯಾಸದ ಕಾಲ ಮತ್ತು ಸ್ಥಳ ಇವುಗಳ ವಿಷಯ

44 ಮೋಶೆ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವು ಇದೇ.

45-46 ಇಸ್ರಾಯೇಲ್ಯರು ಐಗುಪ್ತದೇಶದಿಂದ ಬಂದಾಗ ಯೊರ್ದನ್ ಹೊಳೆಯ ಆಚೆ ಬೇತ್‍ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೆಷ್ಬೋನಿನಲ್ಲಿ ವಾಸಿಸಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಮೋಶೆ ಇಸ್ರಾಯೇಲ್ಯರಿಗೆ ತಿಳಿಸಿದ ಆಜ್ಞಾವಿಧಿನಿರ್ಣಯಗಳು ಇವೇ. (ಮೋಶೆಯೂ ಇಸ್ರಾಯೇಲ್ಯರೂ ಐಗುಪ್ತದೇಶದಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.

47-48 ಅವನ ರಾಜ್ಯವನ್ನೂ ಬಾಷಾನ್ ದೇಶದ ಅರಸನಾದ ಓಗನ ರಾಜ್ಯವನ್ನೂ ಅಂತು ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ ಯೊರ್ದನ್ ಹೊಳೆಯ ಆಚೆ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ರಾಜ್ಯಗಳನ್ನು ಮತ್ತು

49 ಅರಾಬಾ ಎಂಬ ತಗ್ಗಿನಲ್ಲಿ ಪಿಸ್ಗಾ ಬೆಟ್ಟದ ಬುಡದಲ್ಲಿರುವ ಅರಾಬದ ಸಮುದ್ರದವರೆಗೆ ಯೊರ್ದನ್ ಹೊಳೆಯ ಆಚೆ ಇರುವ ಭಾಗವನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದರು.)

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು