Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 32 - ಕನ್ನಡ ಸತ್ಯವೇದವು J.V. (BSI)

1 ಆಕಾಶಮಂಡಲವೇ, ನಾನು ಹೇಳುವದನ್ನು ಕೇಳು: ಭೂಮಂಡಲವೇ, ನನ್ನ ಮಾತುಗಳಿಗೆ ಕಿವಿಕೊಡು.

2 ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ [ತಣ್ಣಗಿರುವದು;] ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು].

3 ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು; ನಮ್ಮ ದೇವರನ್ನು ಮಹಾಮಹಿಮೆಯುಳ್ಳವನೆಂದು ಕೊಂಡಾಡಿರಿ.

4 ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.

5 ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು; ಅವರು ವಕ್ರಬುದ್ಧಿಯುಳ್ಳ ಮೂರ್ಖಜಾತಿಯವರು.

6 ದುರಾಚಾರಿಗಳಿರಾ, ಅವಿವೇಕಿಗಳಿರಾ, ಯೆಹೋವನ ವಿಷಯದಲ್ಲಿ ಈ ರೀತಿಯಾಗಿ ನಡೆಯಬಹುದೇ? ಆತನು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೇ; ನಿಮ್ಮನ್ನು [ಜನಾಂಗವನ್ನಾಗಿ] ಮಾಡಿ ಸ್ಥಾಪಿಸಿದನಲ್ಲವೇ.

7 ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ಪೂರ್ವಿಕರ ಚರಿತ್ರೆಯನ್ನು ಆಲೋಚಿಸಿರಿ. ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು; ಹೇಗಂದರೆ -

8 ಪರಾತ್ಪರನಾದ ದೇವರು ಜನಾಂಗಗಳನ್ನು ಬೇರೆ ಬೇರೆ ಮಾಡಿ ಅವರವರಿಗೆ ಸ್ವದೇಶಗಳನ್ನು ನೇವಿುಸಿಕೊಟ್ಟಾಗ ಇಸ್ರಾಯೇಲ್ಯರ ಸಂಖ್ಯೆಗೆ ತಕ್ಕಂತೆ ಆಯಾ ಜನಾಂಗಕ್ಕೆ ಒಂದೊಂದು ಪ್ರದೇಶವನ್ನು ಗೊತ್ತು ಮಾಡಿದ್ದೂ;

9 ಇಸ್ರಾಯೇಲ್ಯರು ಮಾತ್ರ ಯೆಹೋವನ ಸ್ವಂತ ಜನರಾದದ್ದೂ; ಯಾಕೋಬ್ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದದ್ದೂ;

10 ಆತನು ಅವರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದ್ದೂ;

11 ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ;

12 ಯಾವ ಅನ್ಯದೇವರಾದರೂ ಇಲ್ಲದೆ ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದದ್ದೂ;

13 ಆತನು ಅವರನ್ನು ಭೂವಿುಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ಅವರಿಗೆ ವ್ಯವಸಾಯವೃದ್ಧಿಯನ್ನುಂಟುಮಾಡಿ ಬಂಡೆಯಿಂದ ಜೇನೂ ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದ್ದೂ;

14 ಆಹಾರಕ್ಕಾಗಿ ಆಕಳಿನ ಮೊಸರು, ಆಡುಕುರಿಗಳ ಹಾಲು, ಕೊಬ್ಬಿದ ಕುರಿಟಗರುಗಳ ಮಾಂಸವು, ಬಾಷಾನ್ ಸೀಮೆಯ ಉತ್ತಮಪಶುಗಳು, ಹೋತಗಳು, ಶ್ರೇಷ್ಠವಾದ ಗೋದಿ ಇವುಗಳನ್ನೂ ಪಾನಕ್ಕಾಗಿ ದ್ರಾಕ್ಷೆಯ ರಕ್ತರಸವನ್ನೂ ಕೊಟ್ಟದ್ದೂ; ಇದನ್ನೆಲ್ಲಾ ನೆನಪಿಗೆ ತಂದುಕೊಳ್ಳಿರಿ.

15 ಆದರೆ ಯೆಶುರೂನು ಚೆನ್ನಾಗಿ ತಿಂದು ಕೊಬ್ಬಿ ಅಗಡಾಗಿ ತನ್ನನ್ನು ಸೃಷ್ಟಿಸಿದ ದೇವರನ್ನು ಬಿಟ್ಟು ತನ್ನ ಆಶ್ರಯದುರ್ಗವನ್ನು ತಿರಸ್ಕರಿಸಿತು.

16 ಅವರು ಅನ್ಯದೇವರುಗಳನ್ನು ಪೂಜಿಸಿ ಆತನನ್ನು ರೇಗಿಸಿದರು; ನಿಷಿದ್ಧಾಚಾರಗಳನ್ನು ನಡಿಸಿ ಆತನಿಗೆ ಸಿಟ್ಟೇರಿಸಿದರು.

17 ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ ಪಿತೃಗಳು ಭಜಿಸದೆಯೂ ತಮಗೆ ಮುಂಚಿತವಾಗಿ ಗೊತ್ತಿಲ್ಲದೆಯೂ ಇರುವ ನೂತನ ದೇವತೆಗಳಿಗೂ ಬಲಿಯನ್ನರ್ಪಿಸಿದರು.

18 [ಇಸ್ರಾಯೇಲ್ಯರೇ,] ನಿಮ್ಮನ್ನು ಹುಟ್ಟಿಸಿದ ತಂದೆಯಂತಿರುವ ಶರಣನನ್ನು ನೀವು ನೆನಸಲಿಲ್ಲ; ಹೆತ್ತ ತಾಯಿಯಂತಿರುವ ದೇವರನ್ನು ಮರೆತುಬಿಟ್ಟಿರಿ.

19 ಯೆಹೋವನು ಇದನ್ನು ಕಂಡು ಅವರ ವಿಷಯದಲ್ಲಿ ಬೇಸರಗೊಂಡನು; ತನ್ನ ಕುಮಾರ ಕುಮಾರ್ತೆಗಳ ವಿಷಯದಲ್ಲಿ ವ್ಯಥೆಪಟ್ಟನು.

20 ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು - ನಾನು ಅವರಿಗೆ ವಿಮುಖನಾಗಿ ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು. ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ.

21 ಅವರು ದೇವರಲ್ಲದವುಗಳ ಮೂಲಕ ನನ್ನನ್ನು ರೇಗಿಸಿದ್ದರಿಂದ ನಾನು ಜನಾಂಗವಲ್ಲದವರ ಮೂಲಕ ಅವರಲ್ಲಿ ಹುರುಡು ಹುಟ್ಟಿಸುವೆನು. ಅವರು ಅಚೇತನ ವಿಗ್ರಹಗಳ ಮೂಲಕ ನನ್ನನ್ನು ಸಿಟ್ಟಿಗೆಬ್ಬಿಸಿದ್ದರಿಂದ ನಾನು ಸದಾಚಾರವಿಲ್ಲದ ಜನರ ಮೂಲಕ ಅವರನ್ನು ಸಿಟ್ಟಿಗೆಬ್ಬಿಸುವೆನು.

22 ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದವರೆಗೂ ವ್ಯಾಪಿಸಿ ಬೆಳೆ ಸಹಿತವಾಗಿ ಭೂವಿುಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವದು.

23 ಅವರಿಗೆ ಒಂದರ ಮೇಲೊಂದಾಗಿ ವಿಪತ್ತುಗಳನ್ನು ಬರಮಾಡುವೆನು; ನನ್ನ ಎಲ್ಲಾ ಬಾಣಗಳನ್ನೂ ಅವರಿಗೆ ವಿರೋಧವಾಗಿ ಪ್ರಯೋಗಿಸುವೆನು.

24 ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು; ಅದಲ್ಲದೆ ನಾನು ದುಷ್ಟಮೃಗಗಳನ್ನೂ ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು.

25 ಮನೆಯ ಹೊರಗೆ ಕತ್ತಿಯೂ ಒಳಗೆ ಭಯವೂ ಇರುವವು. ಯೌವನಸ್ಥರು, ಕನ್ಯೆಯರು, ಮೊಲೆಕೂಸುಗಳು, ನರೇತಲೆಯವರು ಇವರೆಲ್ಲರೂ ಕತ್ತಿಯಿಂದ ಕೊಲ್ಲಲ್ಪಡುವರು.

26 ಅವರನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೆನು, ಅವರು ಮನುಷ್ಯರ ಜ್ಞಾಪಕದಲ್ಲೂ ಇಲ್ಲದಂತೆ ಮಾಡುತ್ತಿದ್ದೆನು;

27 ಆದರೆ ಅವರ ವಿರೋಧಿಗಳು ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು - ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಂಡಾರೆಂದು ನಾನು ಹಿಂದೆಗೆದೆನು ಎಂಬದೇ.

28 ಅವರು ಆಲೋಚನೆಯಿಲ್ಲದ ಜನರು; ಅವರಿಗೆ ಸ್ವಲ್ಪವಾದರೂ ವಿವೇಕವಿಲ್ಲ.

29 ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.

30 ಅವರ ಶರಣನು ಅವರನ್ನು ಶತ್ರುಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಮಂದಿ ಸೋತುಹೋಗುತ್ತಿದ್ದರೋ? ಯೆಹೋವನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತುಸಾವಿರ ಮಂದಿ ಓಡಿಹೋಗುತ್ತಿದ್ದರೋ?

31 ನಮ್ಮ ಶರಣನಿಗೆ ತಮ್ಮ ಶರಣರು ಸಮಾನರಲ್ಲವೆಂದು ನಮ್ಮ ಶತ್ರುಗಳೇ ತೀರ್ಮಾನಿಸುತ್ತಾರಲ್ಲಾ.

32 ಅವರು ಸೊದೋಮ್ಯರೆಂಬ ದ್ರಾಕ್ಷಾಲತೆಯ ಒಂದು ಬಳ್ಳಿಯಾಗಿದ್ದಾರೆ; ಅದು ಗೊಮೋರ ಪಟ್ಟಣದ ತೋಟಗಳಲ್ಲಿ ಬೆಳೆಯುವ ಜಾತಿ. ಅದರ ಹಣ್ಣಿನ ಗೊಂಚಲು ವಿಷ;

33 ಅದರ ರಸ ಸರ್ಪವಿಷದಂತೆ ಮರಣಕರವಾದದ್ದು.

34 ಇದನ್ನೆಲ್ಲಾ ಮುದ್ರೆಹಾಕಿ ನನ್ನ ಉಗ್ರಾಣದಲ್ಲಿಟ್ಟುಕೊಂಡಿದ್ದೇನೆ.

35 ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ; ಅವರು ಜಾರಿಬೀಳುವ ಸಮಯ ಬರುವದು. ಅವರಿಗೆ ಆಪತ್ಕಾಲವು ಸಮೀಪಿಸಿತು; ಅವರಿಗೋಸ್ಕರ ಸಿದ್ಧವಾಗಿರುವ ದುರ್ಗತಿ ಬೇಗ ಬರುವದು.

36 ಆಗ ಯೆಹೋವನು ತನ್ನ ಜನರಿಗೋಸ್ಕರ ನ್ಯಾಯತೀರಿಸುವನು. ಪರತಂತ್ರರಾಗಲಿ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಯರಾಗಿ ನಿಶ್ಶೇಷರಾದದ್ದನ್ನು ಆತನು ತಿಳಿದಾಗ ತನ್ನ ಸೇವಕರಾದ ಅವರ ವಿಷಯದಲ್ಲಿ ಪಶ್ಚಾತ್ತಾಪಪಡುವನು.

37 ಯೆಹೋವನು ಅವರ ವಿಷಯದಲ್ಲಿ ಹೇಳುವದೇನಂದರೆ - ಅವರು ಪೂಜಿಸುತ್ತಿದ್ದ ದೇವರುಗಳು ಎಲ್ಲಿ ಹೋದರು? ಅವರು ಆಶ್ರಯಿಸಿಕೊಂಡಿದ್ದ ಶರಣನು ಎಲ್ಲಿದ್ದಾನೆ?

38 ಅವರ ನೈವೇದ್ಯಗಳ ಕೊಬ್ಬನ್ನು ತಿಂದು ಅವರು ಸಮರ್ಪಿಸಿದ ಪಾನದ್ರವ್ಯಗಳನ್ನು ಕುಡಿದ ದೇವತೆಗಳು ಎಲ್ಲಿ? ಅವರೇ ನಿಮ್ಮ ಸಹಾಯಕ್ಕೆ ಬರಲಿ; ಅವರೇ ನಿಮ್ಮನ್ನು ಕಾಯಲಿ.

39 ನಾನೇ, ನಾನೊಬ್ಬನೇ ದೇವರಾಗಿರಲಾಗಿ ನನ್ನ ವಿನಾ ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ. ಬದುಕಿಸುವವನೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ವಾಸಿಮಾಡುವವನೂ ನಾನೇ; ನನ್ನ ಕೈಯಿಂದ ತಪ್ಪಿಸ ಶಕ್ತನು ಯಾವನೂ ಇಲ್ಲ.

40 ನಾನು ಆಕಾಶದ ಕಡೆಗೆ ಕೈಯೆತ್ತಿ ನಾನು ಸದಾಕಾಲ ಜೀವಿಸುವವನೆಂಬದು ಎಷ್ಟು ನಿಶ್ಚಯವೋ ಅಷ್ಟು ಖಂಡಿತವಾಗಿ ಪ್ರಮಾಣಮಾಡುವೆನು; ಏನಂದರೆ -

41 ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ ನ್ಯಾಯವನ್ನು ಸ್ಥಾಪಿಸುವದಕ್ಕೆ ಮುಂಗೊಂಡಾಗ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;

42 ನನ್ನ ಬಾಣಗಳು ರಕ್ತವನ್ನು ಕುಡಿಕುಡಿದು ಮತ್ತವಾಗುವವು; ನನ್ನ ಕತ್ತಿಯು ಕೊಲ್ಲಲ್ಪಟ್ಟವರ ಮತ್ತು ಸೆರೆಹಿಡಿದವರ ರಕ್ತಮಾಂಸಗಳನ್ನು ಭಕ್ಷಿಸಿ ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚಂಡಾಡುವದು ಎಂಬದೇ.

43 ಜನಾಂಗಗಳಿರಾ, ದೇವರ ಜನರನ್ನು ಹೊಗಳಿರಿ. ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಯೆಹೋವನು ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿತೀರಿಸುತ್ತಾನೆ; ತನ್ನ ಜನರಿಗೋಸ್ಕರವೂ ದೇಶಕ್ಕೋಸ್ಕರವೂ ದೋಷಪರಿಹಾರಮಾಡುತ್ತಾನೆ.

44 ಮೋಶೆಯೂ ನೂನನ ಮಗನಾದ ಯೆಹೋಶುವನೂ ಈ ಪದ್ಯದ ಮಾತುಗಳನ್ನೆಲ್ಲಾ ಜನರಿಗೆ ಕೇಳಿಸುವಂತೆ ಹೇಳಿದರು.


ಈ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂದು ಮೋಶೆ ಕಡೇ ಸಾರಿ ಇಸ್ರಾಯೇಲ್ಯರನ್ನು ಬೋಧಿಸಿದ್ದು

45 ಮೋಶೆ ಈ ಮಾತುಗಳನ್ನೆಲ್ಲಾ ಇಸ್ರಾಯೇಲ್ಯರಿಗೆ ಹೇಳಿ ಮುಗಿಸಿದನಂತರ ಅವರಿಗೆ -

46 ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.

47 ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ; ನೀವು ಯೊರ್ದನ್ ಹೊಳೆಯನ್ನು ದಾಟಿ ಸ್ವಾಧೀನ ಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಇದನ್ನು ಅನುಸರಿಸುವದರಿಂದಲೇ ಬಹುಕಾಲ ಇರುವಿರಿ ಎಂದು ಹೇಳಿದನು.


ಮೋಶೆ ಕಾನಾನ್ ದೇಶದಲ್ಲಿ ಪ್ರವೇಶಿಸದೆ ದೇಹವನ್ನು ಬಿಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು

48-49 ಆ ದಿನದಲ್ಲೇ ಯೆಹೋವನು ಮೋಶೆಗೆ - ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ ಮೋವಾಬ್ಯರ ದೇಶದಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ ನಾನು ಇಸ್ರಾಯೇಲ್ಯರಿಗೆ ಸ್ವದೇಶವಾಗುವದಕ್ಕೆ ಕೊಡುವ ಕಾನಾನ್ ದೇಶವನ್ನು ನೋಡು.

50 ಅನಂತರ ನಿನ್ನ ಅಣ್ಣನಾದ ಆರೋನನು ಹೇಗೆ ಹೋರೆಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳಲ್ಲಿ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪಿತೃಗಳಲ್ಲಿ ಸೇರಬೇಕು.

51 ನೀವಿಬ್ಬರೂ ಚಿನ್ ಅರಣ್ಯದಲ್ಲಿನ ಮೆರೀಬಾ ಕಾದೇಶಿನಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿ ಇಸ್ರಾಯೇಲ್ಯರ ಮಧ್ಯದಲ್ಲಿ ನನಗೆ ವಿರೋಧವಾಗಿ ದ್ರೋಹಮಾಡಿ ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆ ಹೋದದರಿಂದ ಹೀಗೆ ಆಗಬೇಕು.

52 ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು ಎಂದು ಆಜ್ಞಾಪಿಸಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು