ಧರ್ಮೋಪದೇಶಕಾಂಡ 26 - ಕನ್ನಡ ಸತ್ಯವೇದವು J.V. (BSI)ಪ್ರತಿವರುಷದಲ್ಲಿಯೂ ಪ್ರಥಮಫಲಗಳನ್ನು ಸಮರ್ಪಿಸುವಾಗ ಮಾಡಬೇಕಾದ ಆರಾಧನಾಕ್ರಮ 1 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸುವಾಗ 2 ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿಯೂ ನೀವು ಕೆಲವು ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಿ 3 ಆ ಕಾಲದಲ್ಲಿ ಇರುವ ಮಹಾಯಾಜಕನಿಗೆ - ಯೆಹೋವನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಾವು ಸೇರಿದ್ದಾಯಿತೆಂದು ನೀನು ಸೇವಿಸುವ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈಗ ಒಪ್ಪಿಕೊಂಡಿದ್ದೇವೆ ಎಂದು ಹೇಳಬೇಕು. 4 ಯಾಜಕನು ಆ ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮುಂದೆ ಇಟ್ಟಾಗ 5 ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ - ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಐಗುಪ್ತದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು. 6 ಐಗುಪ್ತ್ಯರು ನಮ್ಮನ್ನು ಉಪದ್ರವಪಡಿಸಿ ಬಾಧಿಸಿ ನಮ್ಮಿಂದ ಕಠಿಣವಾಗಿ ದುಡಿಸಿಕೊಂಡಾಗ 7 ನಾವು ನಮ್ಮ ಪಿತೃಗಳ ದೇವರಾದ ಯೆಹೋವನಿಗೆ ಮೊರೆಯಿಡಲಾಗಿ ಆತನು ಕೇಳಿ ನಮ್ಮ ದುರವಸ್ಥೆಯನ್ನೂ ಕಷ್ಟವನ್ನೂ ಉಪದ್ರವವನ್ನೂ ನೋಡಿ 8 ಭುಜಬಲವನ್ನೂ ಶಿಕ್ಷಾಹಸ್ತವನ್ನೂ ಮಹಾಭೀತಿಗಳನ್ನೂ ಮಹತ್ಕಾರ್ಯಗಳನ್ನೂ ಉತ್ಪಾತಗಳನ್ನೂ ಪ್ರಯೋಗಿಸಿ 9 ನಮ್ಮನ್ನು ಬಿಡಿಸಿ ಐಗುಪ್ತದೇಶದಿಂದ ಕರತಂದು ಹಾಲೂ ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿದ್ದಾನೆ. 10 ಆದದರಿಂದ ಯೆಹೋವನೇ, ನೀನು ಅನುಗ್ರಹಿಸಿರುವ ಭೂವಿುಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕು ಎಂದು ಹೇಳಿ ಆ ಪ್ರಥಮಫಲಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿಟ್ಟು ಆತನನ್ನು ಆರಾಧಿಸಬೇಕು. 11 ಆತನು ನಿಮಗೂ ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ ಲೇವಿಯರೂ ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು. ಪ್ರತಿ ಮೂರನೆಯ ವರುಷದಲ್ಲಿ ದಶಮಾಂಶವನ್ನು ಸಮರ್ಪಿಸುವಾಗ ಮಾಡಬೇಕಾದ ಆರಾಧನಾಕ್ರಮ 12 ದಶಮಾಂಶವನ್ನು ಕೊಡಬೇಕಾದ ಮೂರನೆಯ ಸಂವತ್ಸರದಲ್ಲಿ ನಿಮಗುಂಟಾದ ಆದಾಯದ ದಶಮಭಾಗವನ್ನು ಪ್ರತ್ಯೇಕಿಸಿದಾಗ ನಿಮ್ಮನಿಮ್ಮ ಊರುಗಳಲ್ಲಿರುವ ಲೇವಿಯರೂ ಪರದೇಶಿಗಳೂ ತಾಯಿತಂದೆಯಿಲ್ಲದವರೂ ವಿಧವೆಯರೂ ಉಂಡು ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕಲ್ಲಾ. 13 ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ - ನಾವು ಮೀಸಲಾದ ವಸ್ತುಗಳನ್ನು ಮನೆಯಿಂದ ತೆಗೆದುಬಿಟ್ಟಿದ್ದೇವೆ; ನೀನು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯ, ಪರದೇಶಿ, ತಾಯಿತಂದೆಯಿಲ್ಲದವ, ವಿಧವೆ ಇಂಥವರಿಗೆ ಕೊಟ್ಟಿದ್ದೇವೆ; ನಿನ್ನ ಆಜ್ಞೆಗಳಲ್ಲಿ ಒಂದನ್ನೂ ಮೀರಲೂ ಇಲ್ಲ ಮರೆಯಲೂ ಇಲ್ಲ. 14 ನಾವು [ಸತ್ತವರಿಗೋಸ್ಕರ] ದುಃಖಿಸುವ ಕಾಲದಲ್ಲೆಲ್ಲಾ ಅದರಲ್ಲಿ ಏನೂ ತಿನ್ನಲಿಲ್ಲ; ಅಶುದ್ಧರಾಗಿ ಅದನ್ನು ತೆಗೆದುಹಾಕಲಿಲ್ಲ; ಸತ್ತವರಿಗೋಸ್ಕರ ಅದರಲ್ಲಿ ಏನೂ ಕೊಡಲಿಲ್ಲ; ನಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಟ್ಟು ನೀನು ನೇವಿುಸಿದ್ದನ್ನೆಲ್ಲಾ ಅನುಸರಿಸಿದ್ದೇವೆ. 15 ನೀನು ನಿನ್ನ ಪರಿಶುದ್ಧವಾಸಸ್ಥಾನವಾಗಿರುವ ಪರಲೋಕದಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ ನಿನ್ನ ಜನರಾದ ಇಸ್ರಾಯೇಲ್ಯರನ್ನೂ ಹಾಲೂ ಜೇನೂ ಹರಿಯುವ ದೇಶವೆಂದು ನೀನು ನಮ್ಮ ಪಿತೃಗಳಿಗೆ ವಾಗ್ದಾನಮಾಡಿದ ಮೇರೆಗೆ ನಮಗೆ ಕೊಟ್ಟಿರುವ ಈ ಭೂವಿುಯನ್ನೂ ಆಶೀರ್ವದಿಸು ದೇವರೇ ಎಂದು ಹೇಳಬೇಕು. ಮೋಶೆಯ ಎರಡನೆಯ ಉಪನ್ಯಾಸದ ಸಮಾಪ್ತಿ ( 26.16—28.68 ) ಯೆಹೋವನು ಇಸ್ರಾಯೇಲ್ಯರೊಡನೆ ಮಾಡಿಕೊಂಡ ಒಡಂಬಡಿಕೆಯ ವಿಷಯ 16 ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನಿಮಗೆ ಈಗ ಆಜ್ಞಾಪಿಸಿದ್ದಾನೆ. ಆದದರಿಂದ ನೀವು ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. 17 ನಮಗೆ ಯೆಹೋವನೇ ದೇವರಾಗಿರುವನೆಂದೂ ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಆತನ ಮಾತಿಗೆ ಲಕ್ಷ್ಯವಿಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. 18 ಯೆಹೋವನೋ ನಿಮ್ಮ ವಿಷಯದಲ್ಲಿ - ಇವರು ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸುವ ಪಕ್ಷಕ್ಕೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರೆಂದೂ 19 ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India