Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 25 - ಕನ್ನಡ ಸತ್ಯವೇದವು J.V. (BSI)

1 ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.

2 ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿಯು ಅವನನ್ನು ಮಲಗಿಸಿ ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.

3 ಪೆಟ್ಟುಗಳ ಶಿಕ್ಷೆಯು ನಾಲ್ವತ್ತಕ್ಕಿಂತ ಹೆಚ್ಚಿರಬಾರದು. ಅಷ್ಟಕ್ಕಿಂತ ಮೀರಿ ನೀವು ಹೆಚ್ಚು ಪೆಟ್ಟುಗಳನ್ನು ಹೊಡಿಸಿದರೆ ನಿಮ್ಮ ಸ್ವದೇಶದವನು ನಿಮಗೆ ಕೇವಲ ನೀಚನಾಗಿ ಕಾಣಿಸಾನು.

4 ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು.


ಮೈದುನನಿಂದ ವಂಶಾಭಿವೃದ್ಧಿ ಆಗಬೇಕೆಂಬ ವಿಷಯ

5 ಅಣ್ಣ ತಮ್ಮಂದಿರು ಒಂದೇ ಕುಟುಂಬದಲ್ಲಿರುವಾಗ ಅಣ್ಣನು ಮಗನಿಲ್ಲದೆ ಸತ್ತರೆ ಅವನ ಹೆಂಡತಿ ಬೇರೆ ಪುರುಷನನ್ನು ಮದುವೆಯಾಗಬಾರದು. ಅವಳ ಮೈದುನ ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನ ಧರ್ಮವನ್ನು ನೆರವೇರಿಸಬೇಕು.

6 ಅವಳಲ್ಲಿ ಹುಟ್ಟುವ ಚೊಚ್ಚಲುಮಗನು ಸತ್ತವನ ಮಗನೆಂದು ಎಣಿಸಲ್ಪಡಬೇಕು; ಹೀಗೆ ಆಗುವದರಿಂದ ಸತ್ತವನ ಹೆಸರು ಇಸ್ರಾಯೇಲ್ಯರೊಳಗಿಂದ ನಾಶವಾಗಿ ಹೋಗುವದಿಲ್ಲ.

7 ತಮ್ಮನು ಅಣ್ಣನ ಹೆಂಡತಿಯನ್ನು ಪರಿಗ್ರಹಿಸಲೊಲ್ಲದೆ ಹೋದರೆ ಅವಳು ಚಾವಡಿಗೆ ಹೋಗಿ ಹಿರಿಯರಿಗೆ - ನನ್ನ ಗಂಡನ ತಮ್ಮನು ತನ್ನ ಅಣ್ಣನ ಹೆಸರನ್ನು ಉಳಿಸಲೊಲ್ಲನು; ಮೈದುನ ಧರ್ಮವನ್ನು ನಡಿಸುವದಿಲ್ಲ ಅನ್ನುತ್ತಾನೆ ಎಂದು ತಿಳಿಸಬೇಕು.

8 ಆಗ ಆ ಊರಿನ ಹಿರಿಯರು ಅವನನ್ನು ಕರಿಸಿ ವಿಚಾರಿಸಿದಲ್ಲಿ ಅವನು ಅವರ ಮುಂದೆ ನಿಂತು - ಈಕೆಯನ್ನು ಪರಿಗ್ರಹಿಸುವದಕ್ಕೆ ನನಗೆ ಇಷ್ಟವಿಲ್ಲ ಎಂದು ಹೇಳುವ ಪಕ್ಷಕ್ಕೆ

9 ಅವನ ಅತ್ತಿಗೆ ಹಿರಿಯರ ಎದುರಿನಲ್ಲಿ ಅವನ ಕೆರವನ್ನು ಅವನ ಕಾಲಿನಿಂದ ತೆಗೆದುಬಿಟ್ಟು ಅವನ ಮುಖದ ಮೇಲೆ ಉಗುಳಿ - ಅಣ್ಣನಿಗೋಸ್ಕರ ಸಂತಾನವನ್ನು ಹುಟ್ಟಿಸಲೊಲ್ಲದವರೆಲ್ಲರಿಗೂ ಇಂಥ ಅವಮಾನವಾಗಲಿ ಎಂದು ಹೇಳಬೇಕು.

10 ಆ ಮನುಷ್ಯನ ಮನೆಯವರಿಗೆ - ಕೆರವನ್ನು ಬಿಚ್ಚಿಸಿಕೊಂಡವನ ಮನೆಯವರು ಎಂದು ಹೆಸರುಂಟಾಗುವದು.


ಲಜ್ಜಾಹೀನಳಾದ ಸ್ತ್ರೀಗೆ ವಿಧಿಸಬೇಕಾದ ಶಿಕ್ಷಾಕ್ರಮ

11 ಇಬ್ಬರು ಜಗಳವಾಡುತ್ತಿರಲಾಗಿ ಅವರಲ್ಲಿ ಒಬ್ಬನ ಹೆಂಡತಿ ಬಂದು ತನ್ನ ಗಂಡನನ್ನು ಬಿಡಿಸಬೇಕೆಂದು

12 ಆ ಪರಪುರುಷನ ಪ್ರಧಾನ ಸ್ಥಾನವನ್ನು ಹಿಡಿದುಕೊಂಡರೆ ಕನಿಕರಿಸದೆ ಅವಳ ಕೈ ಕಡಿದುಹಾಕಿಸಬೇಕು.


ವ್ಯಾಪಾರದಲ್ಲಿ ಅಳತೆತೂಕಗಳು ಸರಿಯಾಗಿಯೇ ಇರಬೇಕೆಂಬ ವಿಧಿ

13 ಹೆಚ್ಚು ಕಡಮೆಯಾಗಿರುವ ಎರಡು ವಿಧವಾದ ತೂಕದ ಕಲ್ಲುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬಾರದು. ಹೆಚ್ಚು ಕಡಿಮೆಯಾದ ಎರಡು ವಿಧವಾದ ಸೇರುಗಳು ನಿಮ್ಮ ಮನೆಯಲ್ಲಿರಬಾರದು.

14 ನಿಮ್ಮ ತೂಕದ ಕಲ್ಲೂ ನಿಮ್ಮ ಅಳತೆಯ ಸೇರೂ ನ್ಯಾಯವಾಗಿಯೇ ಇರಬೇಕು.

15 ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.

16 ನ್ಯಾಯವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರೂ ನಿಮ್ಮ ದೇವರಾದ ಯೆಹೋವನಿಗೆ ಹೇಯವಾಗಿದ್ದಾರೆ.


ಅಮಾಲೇಕ್ಯರನ್ನು ನಿಶ್ಶೇಷವಾಗಿ ಸಂಹಾರಮಾಡಬೇಕೆಂಬ ವಿಧಿ

17 ನೀವು ಐಗುಪ್ತದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ.

18 ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ ನೀವು ದಣಿದು ಬಳಲಿ ಇದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರಲ್ಲಾ.

19 ಆದಕಾರಣ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನಿಮ್ಮನ್ನು ಸೇರಿಸಿ ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ ಭೂವಿುಯ ಮೇಲೆ ಅಮಾಲೇಕ್ಯರ ಹೆಸರೇ ಉಳಿಯದಂತೆ ನೀವು ಮಾಡಬೇಕು; ಇದನ್ನು ಮರೆಯಬಾರದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು