ಧರ್ಮೋಪದೇಶಕಾಂಡ 24 - ಕನ್ನಡ ಸತ್ಯವೇದವು J.V. (BSI)ಪರಿತ್ಯಾಗಮಾಡಿದ ಹೆಂಡತಿ ಮತ್ತೊಬ್ಬನನ್ನು ಸೇರಿದ ಪಕ್ಷಕ್ಕೆ ಅವಳನ್ನು ಪುನಃ ಇಟ್ಟುಕೊಳ್ಳಬಾರದೆಂಬ ವಿಧಿ 1 ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಸಂತೋಷಪಡದೆ ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಿಬಿಟ್ಟಾಗ 2-3 ಅವಳು ಮತ್ತೊಬ್ಬನನ್ನು ಮದುವೆಯಾಗಿ ಅವನಿಂದಲೂ ತಿರಸ್ಕರಿಸಲ್ಪಟ್ಟು ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಈ ಎರಡನೆಯ ಗಂಡನು ಸತ್ತರೆ 4 ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡನು ಅವಳನ್ನು ಪುನಃ ಪರಿಗ್ರಹಿಸಬಾರದು; ಅವಳು ಅಶುದ್ಧಳಾದಳು; ಅವಳನ್ನು ಪುನಃ ಪರಿಗ್ರಹಿಸುವದು ಯೆಹೋವನಿಗೆ ಹೇಯಕಾರ್ಯ. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶಕ್ಕೆ ದೋಷವುಂಟಾಗುವಂತೆ ಅವಕಾಶ ಕೊಡಬಾರದು. ಹೊಸದಾಗಿ ಮದುವೆಮಾಡಿಕೊಂಡವನ ಮೇಲೆ ಭಾರವಾದ ಕೆಲಸವನ್ನು ಹೊರಿಸಕೂಡದೆಂಬ ವಿಧಿ 5 ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನೂ ಅವನಿಗೆ ನೇವಿುಸಬಾರದು; ಅವನು ಒಂದು ವರುಷದವರೆಗೂ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ. ನಿರ್ದಯತ್ವ ನಿಷೇಧ 6 ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವದು. 7 ಯಾವನಾದರೂ ಸ್ವದೇಶದವನಾದ ಇಸ್ರಾಯೇಲ್ಯನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಮಾರಿಬಿಟ್ಟದ್ದಾಗಲಿ ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು. 8 ಕುಷ್ಠರೋಗಿಗಳ ವಿಷಯದಲ್ಲಿ ಯಾಜಕರಾದ ಲೇವಿಯರು ಬೋಧಿಸುವಂತೆಯೇ ಮಾಡುವದಕ್ಕೆ ನೀವು ಜಾಗರೂಕರಾಗಿರಬೇಕು; ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನೇ ನೀವು ಅನುಸರಿಸಬೇಕು. 9 ನೀವು ಐಗುಪ್ತದೇಶದಿಂದ ಬಂದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವನು ವಿುರ್ಯಾಮಳಿಗೆ ಮಾಡಿದ್ದನ್ನು ನೆನಪುಮಾಡಿಕೊಳ್ಳಿರಿ. 10 ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವದಕ್ಕೆ ಅವನ ಮನೆಯೊಳಕ್ಕೆ ಹೋಗದೆ ಹೊರಗೆ ಇರಬೇಕು; 11 ಸಾಲತೆಗೆದುಕೊಂಡವನೇ ಒತ್ತೆಯ ಸಾಮಾನನ್ನು ತಂದು ಕೊಡಬೇಕು. 12 ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ ಹೊತ್ತು ಮುಣುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು; 13 ಅದನ್ನು ಇಟ್ಟುಕೊಂಡು ರಾತ್ರಿ ಮಲಗಬಾರದು; ಅವನು ಅದನ್ನು ಹೊದ್ದುಕೊಂಡೇ ಮಲಗಿಕೊಳ್ಳಬೇಕಲ್ಲಾ; ಅದಲ್ಲದೆ ಅವನು ನಿಮ್ಮನ್ನು ಹರಸುವನು, ಮತ್ತು ನೀವು ಮಾಡಿದ್ದು ಧರ್ಮಕಾರ್ಯವೆಂದು ನಿಮ್ಮ ದೇವರಾದ ಯೆಹೋವನು ತಿಳಿದುಕೊಳ್ಳುವನು. 14 ನೀವು ಸ್ವದೇಶದವರಲ್ಲಿಯಾಗಲಿ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡಕೂಲಿಯವನಿಗೆ ಏನೂ ಅನ್ಯಾಯಮಾಡದೆ 15 ದಿನದ ಕೂಲಿಯನ್ನು ಆ ದಿನದಲ್ಲೇ ಹೊತ್ತು ಮುಣುಗುವದಕ್ಕೆ ಮುಂಚಿತವಾಗಿ ಅವನಿಗೆ ಕೊಡಬೇಕು. ಅವನಿಗೆ ಬೇರೆ ಗತಿಯಿಲ್ಲದ್ದರಿಂದ ಅದನ್ನೇ ಎದುರು ನೋಡುತ್ತಾನಲ್ಲಾ. ನೀವು ಕೊಡದಿದ್ದರೆ ಅವನು ಯೆಹೋವನಿಗೆ ಮೊರೆಯಿಟ್ಟಾನು; ಆಗ ನೀವು ದೋಷಿಗಳಾಗಿ ಕಂಡುಬಂದೀರಿ. 16 ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು. 17 ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪುಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು. 18 ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನೆಂಬದನ್ನು ನೆನಪುಮಾಡಿಕೊಳ್ಳಿರಿ; ಅದಕ್ಕಾಗಿಯೇ ಇದನ್ನು ಆಜ್ಞಾಪಿಸಿದ್ದೇನೆ. 19 ನೀವು ಪೈರುಗಳನ್ನು ಕೊಯ್ಯುವಾಗ ಒಂದು ಸಿವುಡನ್ನು ಹೊಲದಲ್ಲೇ ಮರೆತು ಬಂದರೆ ಅದನ್ನು ತರುವದಕ್ಕೆ ಹಿಂದಕ್ಕೆ ಹೋಗಬಾರದು; ಪರದೇಶಿ, ತಾಯಿತಂದೆಯಿಲ್ಲದವ, ವಿಧವೆ ಇಂಥವರಿಗೋಸ್ಕರ ಇರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು. 20 ಎಣ್ಣೆಯ ಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವದಕ್ಕೆ ಹೋಗಬಾರದು; ವಿುಕ್ಕ ಕಾಯಿಗಳು ಪರದೇಶಿ, ತಾಯಿತಂದೆಯಿಲ್ಲದವ, ವಿಧವೆ ಇಂಥವರಿಗೋಸ್ಕರ ಇರಲಿ. 21 ದ್ರಾಕ್ಷೆಯ ತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು; ಅದು ಪರದೇಶಿ, ತಾಯಿತಂದೆಯಿಲ್ಲದವ, ವಿಧವೆ ಇಂಥವರಿಗೋಸ್ಕರ ಇರಲಿ. 22 ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದದ್ದು ಜ್ಞಾಪಕದಲ್ಲಿರಬೇಕು; ಅದಕ್ಕಾಗಿಯೇ ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India