ಧರ್ಮೋಪದೇಶಕಾಂಡ 21 - ಕನ್ನಡ ಸತ್ಯವೇದವು J.V. (BSI)ನರಹತ್ಯಮಾಡಿದವನು ಇಂಥವನೆಂದು ತಿಳಿಯದ ಪಕ್ಷಕ್ಕೆ ನಡಿಸಬೇಕಾದ ಕ್ರಮ 1 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ಹತನಾದ ಮನುಷ್ಯನ ಶವವು ಅಡವಿಯಲ್ಲಿ ಬಿದ್ದಿರುವದನ್ನು ನೀವು ಕಂಡರೆ ಮತ್ತು ಅವನನ್ನು ಕೊಂದವನು ಯಾರೆಂಬದು ತಿಳಿಯದೆಹೋದರೆ 2 ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಬಂದು ಹತನಾದವನ ಶವದ ಸುತ್ತಲಿರುವ ಊರುಗಳಲ್ಲಿ ಯಾವದು ಹತ್ತಿರವೆಂದು ತಿಳಿದುಕೊಳ್ಳುವದಕ್ಕೆ ಅಳತೆಮಾಡಬೇಕು. 3 ಯಾವ ಊರು ಹತ್ತಿರವಾಗಿದೆಯೋ ಆ ಊರಿನ ಹಿರಿಯರು ಇನ್ನೂ ನೊಗಕ್ಕೆ ಕಟ್ಟಲ್ಪಡದೆಯೂ ಯಾವ ಕೆಲಸವನ್ನೂ ಮಾಡದೆಯೂ ಇರುವ ಒಂದು ಮಣಕವನ್ನು ತೆಗೆದುಕೊಂಡು ಎಂದಿಗೂ ವ್ಯವಸಾಯವಿಲ್ಲದಂಥ, 4 ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ಹೋಗಿ ಅಲ್ಲಿ ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು. 5 ಲೇವಿಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರವಿರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಆದುಕೊಂಡಿದ್ದಾನಲ್ಲ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸಬೇಕು. 6 ಹತನಾದವನ ಶವಕ್ಕೆ ಹತ್ತಿರವಿರುವ ಗ್ರಾಮದ ಹಿರಿಯರು ತಗ್ಗಿನಲ್ಲಿ ಕುತ್ತಿಗೆ ಮುರಿಯಲ್ಪಟ್ಟ ಆ ಮಣಕದ ಮೇಲೆ ಕೈಗಳನ್ನು ತೊಳೆದುಕೊಂಡು - 7 ನಮ್ಮ ಕೈಗಳು ಈ ಹತ್ಯವನ್ನು ಮಾಡಲಿಲ್ಲ. ನಮ್ಮ ಕಣ್ಣುಗಳು ನೋಡಲಿಲ್ಲ; 8 ಯೆಹೋವನೇ, ನೀನು ಬಿಡುಗಡೆಮಾಡಿದ ನಿನ್ನ ಜನರನ್ನು ಕ್ಷವಿುಸಬೇಕು; ಅನ್ಯಾಯವಾದ ನರಹತ್ಯದೋಷಫಲವು ನಿನ್ನ ಜನರಾದ ಇಸ್ರಾಯೇಲ್ಯರಿಗೆ ತಗಲದಿರಲಿ ಎಂದು ಹೇಳಬೇಕು. 9 ಆಗ ಆ ರಕ್ತಾಪರಾಧವು ಕ್ಷವಿುಸಲ್ಪಡುವದು. ಹೀಗೆ ಯೆಹೋವನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡುವದರಿಂದ ನೀವೇ ಅನ್ಯಾಯವಾದ ನರಹತ್ಯದೋಷವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವಿರಿ. ಸೆರೆಯವಳಾದ ಸ್ತ್ರೀಯನ್ನು ಮದುವೆಮಾಡಿಕೊಳ್ಳುವ ವಿಷಯ 10 ನೀವು ಶತ್ರುಗಳೊಡನೆ ಯುದ್ಧಮಾಡಲಾಗಿ ನಿಮ್ಮ ದೇವರಾದ ಯೆಹೋವನ ಅನುಗ್ರಹದಿಂದ ಅವರನ್ನು ನಿಮ್ಮಿಂದ ಅಪಜಯಪಡಿಸಿ ಸೆರೆಹಿಡಿದಾಗ 11 ನಿಮ್ಮಲ್ಲಿ ಯಾವನಾದರೂ ಸೆರೆಯವರಲ್ಲಿ ಸುಂದರಸ್ತ್ರೀಯನ್ನು ಕಂಡು ಮೋಹಿಸಿ ಮದುವೆಮಾಡಿಕೊಳ್ಳಬೇಕೆಂದು ಅಪೇಕ್ಷಿಸಿದರೆ 12 ಅವಳನ್ನು ಮನೆಗೆ ಕರಕೊಂಡು ಬರಲಿ; ತರುವಾಯ ಅವಳು ಕ್ಷೌರಮಾಡಿಸಿಕೊಂಡು ಉಗುರುಗಳನ್ನು ತೆಗೆದುಕೊಂಡು 13 ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು ಅವನ ಮನೆಯಲ್ಲಿ ಒಂದು ತಿಂಗಳಿನವರೆಗೆ ತಾಯಿತಂದೆಗಳ ವಿಯೋಗದ ನಿವಿುತ್ತ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು. 14 ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ ಅವನು ಅವಳನ್ನು ಅವಳ ಮನಸ್ಸು ಬಂದಲ್ಲಿಗೆ ಕಳುಹಿಸಿಬಿಡಬೇಕು. ಅವಳನ್ನು ಕೂಡಿದ್ದರಿಂದ ದಾಸತ್ವಕ್ಕೆ ಮಾರಲೂಬಾರದು, ದಾಸಿಯಂತೆ ನಡಿಸಲೂ ಬಾರದು. ಚೊಚ್ಚಲು ಮಗನಿಗೆ ಜ್ಯೇಷ್ಠಾಂಶವು ದೊರೆಯಬೇಕೆಂಬ ವಿಧಿ 15 ಯಾವನಾದರೂ ಇಬ್ಬರು ಹೆಂಡತಿಯರನ್ನು ಮಾಡಿಕೊಂಡು ಅವರಲ್ಲಿ ಒಬ್ಬಳನ್ನು ಪ್ರೀತಿಸಿ ಮತ್ತೊಬ್ಬಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಅವರಿಬ್ಬರೂ ಅವನಿಂದ ಮಕ್ಕಳನ್ನು ಪಡೆದವರಾಗಿರಲಾಗಿ ಚೊಚ್ಚಲುಮಗನು ತಿರಸ್ಕರಿಸಲ್ಪಟ್ಟವಳಲ್ಲಿಯೇ ಹುಟ್ಟಿದ ಪಕ್ಷಕ್ಕೆ 16 ತಂದೆಯು ತನ್ನ ಆಸ್ತಿಯನ್ನು ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಾಗ ಆ ತಿರಸ್ಕರಿಸಲ್ಪಟ್ಟವಳ ಮಗನನ್ನು ತಳ್ಳಿಬಿಟ್ಟು ಪ್ರೀತಿಯ ಹೆಂಡತಿಯ ಮಗನನ್ನೇ ಚೊಚ್ಚಲವನೆಂದು ಭಾವಿಸಕೂಡದು. 17 ತಿರಸ್ಕರಿಸಲ್ಪಟ್ಟವಳ ಮಗನೇ ಚೊಚ್ಚಲವನೆಂದು ಒಪ್ಪಿ ಅವನಿಗೆ ಎರಡು ಭಾಗಗಳನ್ನು ಕೊಡಬೇಕು. ಅವನೇ ತಂದೆಯ ವೀರ್ಯಕ್ಕೆ ಪ್ರಥಮಫಲವೂ ಚೊಚ್ಚಲುತನದ ಹಕ್ಕಿಗೆ ಬಾಧ್ಯನೂ ಆಗಿದ್ದಾನಲ್ಲಾ, ದುಷ್ಟ ಪುತ್ರನ ಶಿಕ್ಷಾ ಕ್ರಮ 18 ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ ಮೊಂಡನೂ ಅವಿಧೇಯನೂ ಆಗಿ 19 ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು ಊರುಬಾಗಿಲಿಗೆ ಹಿರಿಯರ ಮುಂದೆ ತಂದು ಅವರಿಗೆ - 20 ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವದೇ ಇಲ್ಲ. ಆಜ್ಞೆಗೆ ಒಳಗಾಗುವದಿಲ್ಲ; ಇವನು ಮೊಂಡ ಕುಡಿಕ ತುಂಟ ಎಂದು ಸಾಕ್ಷಿ ಹೇಳಬೇಕು. ಆಗ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. 21 ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಿಬಿಡಬೇಕು. ಇಸ್ರಾಯೇಲ್ಯರೆಲ್ಲರೂ ಕೇಳಿ ಭಯಪಡುವರು. ಮರಕ್ಕೆ ತೂಗಹಾಕಲ್ಪಟ್ಟ ಅಪರಾಧಿಯ ಶವವನ್ನು ಅದೇ ದಿನದಲ್ಲಿ ಹೂಣಬೇಕೆಂಬ ವಿಧಿ 22 ಅಪರಾಧ ಮಾಡಿದವನು ಮರಣಶಿಕ್ಷೆಯನ್ನು ಹೊಂದಿದ ಮೇಲೆ ನೀವು ಅವನ ಶವವನ್ನು ಮರಕ್ಕೆ ತೂಗಹಾಕಿದರೆ ಅದು ರಾತ್ರಿಯಲ್ಲಿಯೂ ಮರದ ಮೇಲೆ ಇರಬಾರದು; 23 ಅದೇ ದಿನದಲ್ಲಿ ಅದನ್ನು ನೆಲದಲ್ಲಿ ಹೂಣಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶವು ಅಪವಿತ್ರವಾಗಬಾರದು. ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವನಲ್ಲವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India