Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 2 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ಎದೋಮ ಮೋವಾಬ್ಯರ ದೇಶಗಳನ್ನು ದಾಟಿ ಸೀಹೋನನ ಮತ್ತು ಓಗನ ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡದ್ದು

1 ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಹಿಂದಿರುಗಿ ಅರಣ್ಯಕ್ಕೆ ಹೊರಟು ಸಮುದ್ರದ ಮಾರ್ಗದಲ್ಲಿ ನಡೆದು ಅನೇಕ ದಿನಗಳು ಸೇಯೀರ್ ಬೆಟ್ಟದ ಸೀಮೆಯನ್ನು ಸುತ್ತುತ್ತಿದ್ದೆವು.

2 ಆಮೇಲೆ ಯೆಹೋವನು ನನಗೆ -

3 ನೀವು ಈ ಬೆಟ್ಟದ ಸೀಮೆಯನ್ನು ಸುತ್ತಿದ್ದು ಸಾಕು; ಉತ್ತರದಿಕ್ಕಿಗೆ ತಿರುಗಿಕೊಳ್ಳಿರಿ. ಮತ್ತು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು -

4 ಸೇಯೀರ್ ದೇಶದಲ್ಲಿ ವಾಸವಾಗಿರುವ ನಿಮ್ಮ ಬಂಧುಗಳಾದ ಏಸಾವನ ವಂಶದವರ ದೇಶವನ್ನು ದಾಟುವದಕ್ಕಿದ್ದೀರಷ್ಟೆ. ಅವರು ನಿಮಗೆ ಅಂಜುವರು; ನೀವು ಅವರ ಸಂಗಡ ಯುದ್ಧಕ್ಕೆ ಹೋಗದೆ ಬಹಳ ಜಾಗರೂಕತೆಯಿಂದಿರಬೇಕು.

5 ನಾನು ಸೇಯೀರ್‍ಬೆಟ್ಟದ ಸೀಮೆಯನ್ನು ಏಸಾವ್ಯರಿಗೇ ಸ್ವದೇಶವಾಗ ಕೊಟ್ಟಿರುವದರಿಂದ ಅದರಲ್ಲಿ ನಿಮಗೆ ಹೆಜ್ಜೆಯಿಡುವಷ್ಟು ನೆಲವನ್ನಾದರೂ ಕೊಡುವದಿಲ್ಲ.

6 ನೀವು ಅಲ್ಲಿ ರೊಕ್ಕಕೊಟ್ಟು ಆಹಾರ ಪದಾರ್ಥಗಳನ್ನು ಕೊಂಡು ತಿನ್ನಬೇಕು; ನೀರನ್ನೂ ಕೊಂಡುಕೊಂಡು ಕುಡಿಯಬೇಕು.

7 ನೀವು ಕೈಹಾಕಿದ ಎಲ್ಲಾ ಕೆಲಸಗಳನ್ನೂ ನಿಮ್ಮ ದೇವರಾದ ಯೆಹೋವನು ಸಫಲಪಡಿಸಿದ್ದಾನಲ್ಲಾ. ಈ ದೊಡ್ಡ ಅರಣ್ಯದಲ್ಲಿ ನೀವು ಸಂಚರಿಸುತ್ತಿರುವಾಗೆಲ್ಲಾ ಆತನು ನಿಮ್ಮನ್ನು ಪರಾಂಬರಿಸುತ್ತಾ ಬಂದನು. ಈ ನಾಲ್ವತ್ತು ವರುಷ ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದದರಿಂದ ನಿಮಗೆ ಏನೂ ಕಡಿಮೆಯಾಗಲಿಲ್ಲ ಎಂದು ಹೇಳಿದನು.

8 ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.

9 ಆಗ ಯೆಹೋವನು ನನಗೆ - ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವದಕ್ಕೆ ಕೊಟ್ಟಿರುವದರಿಂದ ಅದರಲ್ಲಿ ನಿಮಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನೀವು ಎದ್ದು ಜೆರೆದ್ ಹಳ್ಳವನ್ನು ದಾಟಬೇಕೆಂದು ಆಜ್ಞಾಪಿಸಿದನು.

10 (ತತ್ಪೂರ್ವದಲ್ಲಿ ಏವಿುಯರು ಆ ದೇಶದಲ್ಲಿ ವಾಸವಾಗಿದ್ದರು. ಅವರು ಬಲಿಷ್ಠರೂ ಬಹುಮಂದಿಯೂ ಅನಾಕ್ಯರಂತೆ ಉನ್ನತರೂ ಆಗಿದ್ದರು.

11 ಅವರು ಅನಾಕ್ಯರಂತೆ ರೆಫಾಯರಿಗೆ ಸೇರಿದವರೆಂದು ಹೇಳುವದುಂಟು; ಆದರೆ ಮೋವಾಬ್ಯರು ಅವರನ್ನು ಏವಿುಯರೆಂದು ಹೇಳುತ್ತಾರೆ.

12 ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲ್ಯರು ತಮಗೆ ಯೆಹೋವನು ಕೊಟ್ಟ ದೇಶವನ್ನು ಹೇಗೆ ಸ್ವಾಧೀನ ಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ದೇಶದಲ್ಲಿ ವಾಸಮಾಡಿದರು.)

13-14 ಆಗ ನಾವು ಜೆರೆದ್ ಹಳ್ಳವನ್ನು ದಾಟಿದೆವು. ನಾವು ಕಾದೇಶ್‍ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಿದವರೆಗೆ ಮೂವತ್ತೆಂಟು ವರುಷ ಕಾಲ. ಯೆಹೋವನು ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಯ ಸೈನಿಕರೆಲ್ಲರೂ ಸತ್ತು ಹೋಗಿದ್ದರು.

15 ಯೆಹೋವನ ಹಸ್ತವು ಅವರಿಗೆ ವಿರೋಧವಾದದರಿಂದ ಪಾಳೆಯದಲ್ಲಿ ಒಬ್ಬನೂ ಉಳಿಯದಂತೆ ನಾಶವಾದರು.

16-18 ಆ ಸೈನಿಕರೆಲ್ಲರೂ ಸತ್ತುಹೋದನಂತರ ಯೆಹೋವನು ನನಗೆ - ನೀವು ಈಗ ಮೋವಾಬ್ಯರ ಪ್ರಾಂತ್ಯವಾಗಿರುವ ಆರ್ ಎಂಬ ಪ್ರದೇಶವನ್ನು ದಾಟುವವರಾಗಿದ್ದೀರಿ.

19 ಮುಂದೆ ನೀವು ಅಮ್ಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿರುವದರಿಂದ ನಿಮಗೆ ಅದರಲ್ಲಿ ಎಷ್ಟು ಭಾಗವನ್ನಾದರೂ ಕೊಡುವದಿಲ್ಲ.

20 (ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದದರಿಂದ ಅದೂ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಹೇಳುತ್ತಾರೆ;

21 ಅವರು ಬಲಿಷ್ಠರೂ ಬಹುಜನವೂ ಅನಾಕ್ಯರಂತೆ ಉನ್ನತರಾದವರೂ ಆಗಿದ್ದರು.

22 ಆದರೆ ಹೇಗೆ ಯೆಹೋವನು ಸೇಯೀರಿನಲ್ಲಿರುವ ಏಸಾವ್ಯರಿಗೋಸ್ಕರ ಹೋರಿಯರನ್ನು ಹೊರಡಿಸಿದಾಗ ಏಸಾವ್ಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,

23 ಮತ್ತು ಹೇಗೆ ಕಫ್ತೋರಿಂದ ಬಂದ ಕಫ್ತೋರ್ಯರು ಗಾಜಾ ಪಟ್ಟಣದವರೆಗೂ ಹಳ್ಳಿಗಳಲ್ಲಿದ್ದ ಅವ್ವಿಯರನ್ನು ನಾಶಮಾಡಿ ಅವರ ಸ್ಥಳದಲ್ಲಿ ವಾಸಮಾಡಿದರೋ ಹಾಗೆಯೇ ಯೆಹೋವನು ರೆಫಾಯರನ್ನು ಅಮ್ಮೋನಿಯರ ಎದುರಿನಿಂದ ಹೊರಡಿಸಿದನು; ಅಮ್ಮೋನಿಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು.)

24 ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸನಾದ ಸೀಹೋನನು ನಿಮ್ಮಿಂದ ಸೋತು ಹೋಗಿ ಅವನ ರಾಜ್ಯವು ನಿಮಗೇ ವಶವಾಗಬೇಕೆಂದು ನಿಮಗೆ ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರಾರಂಭಿಸಿರಿ.

25 ಲೋಕದಲ್ಲಿರುವ ಎಲ್ಲಾ ಜನಗಳಿಗೂ ನಿವ್ಮಿುಂದ ದಿಗಿಲೂ ಹೆದರಿಕೆಯೂ ಉಂಟಾಗುವಂತೆ ಇಂದಿನಿಂದ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಗಡಗಡನೆ ನಡುಗಿ ಸಂಕಟಪಡುವರು ಎಂದು ಹೇಳಿದನು.

26 ಆಗ ನಾನು ಕೆದೇಮೋತಿನ ಅರಣ್ಯದಿಂದ ಹೆಷ್ಬೋನಿನ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ -

27 ನಿನ್ನ ದೇಶವನ್ನು ದಾಟಿಹೋಗುವದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಬಲಕ್ಕೆ ತಿರುಗದೆ ದಾರಿಹಿಡಿದು ನಡೆದುಹೋಗುವೆವು.

28 ನವ್ಮಿುಂದ ಕ್ರಯತೆಗೆದುಕೊಂಡು ಆಹಾರಪದಾರ್ಥಗಳನ್ನೂ ಕುಡಿಯಲಿಕ್ಕೆ ನೀರನ್ನೂ ಕೊಡಿರಿ.

29 ನಾವು ಯೊರ್ದನ್ ಹೊಳೆಯನ್ನು ದಾಟಿ ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ದೇಶವನ್ನು ಸೇರಬೇಕೆಂದಿದ್ದೇವೆ. ಸೇಯೀರಿನಲ್ಲಿರುವ ಏಸಾವ್ಯರೂ ಆರ್ ಪ್ರದೇಶದಲ್ಲಿರುವ ಮೋವಾಬ್ಯರೂ ನಮಗೆ ದಾರಿಕೊಟ್ಟಂತೆ ನೀನೂ ಕೊಡಬೇಕು. ಕಾಲ್ನಡೆಯಾಗಿ ನಿನ್ನ ದೇಶವನ್ನು ದಾಟಿಹೋಗುವದಕ್ಕೆ ನಿನ್ನ ಅಪ್ಪಣೆಯಾಗಬೇಕೇ ಹೊರತು ಬೇರೆ ಏನೂ ಬೇಕಿಲ್ಲವೆಂದು ವಿನಯಪೂರ್ವಕವಾದ ಮಾತುಗಳಿಂದ ಹೇಳಿಸಿದೆನು.

30 ಆದರೆ ಯೆಹೋವನು ಅವನಿಗೆ ಮೂರ್ಖಬುದ್ಧಿಯನ್ನು ಕೊಟ್ಟು ಹಟವನ್ನು ಹುಟ್ಟಿಸಿದದರಿಂದ ಅವನು ಸಮ್ಮತಿಸಲಿಲ್ಲ. ಅವನು ನಿವ್ಮಿುಂದ ಸೋತುಹೋಗಬೇಕೆಂಬದೇ ನಿಮ್ಮ ದೇವರಾದ ಯೆಹೋವನ ಸಂಕಲ್ಪ; ಅದು ಈಗಾಗಲೇ ನೆರವೇರಿತಲ್ಲಾ.

31 ತರುವಾಯ ಯೆಹೋವನು ನನಗೆ - ಈಗ ನಾನು ಸೀಹೋನನನ್ನೂ ಅವನ ದೇಶವನ್ನೂ ನಿಮಗೆ ವಶಪಡಿಸುವದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರಾರಂಭಮಾಡಿರಿ ಎಂದು ಹೇಳಿದನು.

32 ಸೀಹೋನನು ತನ್ನ ಜನರೆಲ್ಲರ ಸಮೇತ ನಮ್ಮೊಡನೆ ಯುದ್ಧಮಾಡುವದಕ್ಕೆ ಯಹಜಿಗೆ ಹೊರಟುಬರಲಾಗಿ

33 ನಮ್ಮ ದೇವರಾದ ಯೆಹೋವನು ಅವನನ್ನು ನಮ್ಮಿಂದ ಪರಾಜಯಪಡಿಸಿದನು. ನಾವು ಅವನನ್ನೂ ಅವನ ಮಕ್ಕಳನ್ನೂ ಜನರೆಲ್ಲರನ್ನೂ ಸಂಹರಿಸಿದೆವು.

34 ಆ ಕಾಲದಲ್ಲಿ ನಾವು ಅವನ ಎಲ್ಲಾ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಂಡು ಅವುಗಳಲ್ಲಿದ್ದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ನಿಶ್ಶೇಷವಾಗಿ ಹತಮಾಡಿದೆವು; ಒಬ್ಬನನ್ನೂ ಉಳಿಸಲಿಲ್ಲ.

35 ಪಶುಗಳನ್ನು ಮಾತ್ರ ಉಳಿಸಿ ನಮ್ಮ ಸ್ವಂತಕ್ಕಾಗಿ ತೆಗೆದುಕೊಂಡು ಊರುಗಳನ್ನು ಸೂರೆಮಾಡಿಬಿಟ್ಟೆವು.

36 ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇರುವ ಪಟ್ಟಣವು ಇವುಗಳು ಮೊದಲುಗೊಂಡು ಗಿಲ್ಯಾದ್ ಸೀಮೆಯವರೆಗೂ ಯಾವ ಪಟ್ಟಣವೂ ನಮಗೆ ಅಸಾಧ್ಯವಾಗಲಿಲ್ಲ. ನಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲಾ ನಮ್ಮ ಕೈಗೆ ಸಿಕ್ಕುವಂತೆ ಮಾಡಿದನು.

37 ಅಮ್ಮೋನಿಯರ ದೇಶವನ್ನು ಮಾತ್ರ ಅಂದರೆ ಯಬ್ಬೋಕ್ ಹೊಳೆಯ ಬಳಿಯಲ್ಲಿರುವ ಪ್ರದೇಶವು ಮತ್ತು ಬೆಟ್ಟದ ಸೀಮೆಯ ಊರುಗಳು ಇವೇ ಮೊದಲಾದ ಸ್ಥಳಗಳನ್ನು ನೀವು ಅತಿಕ್ರವಿುಸಲಿಲ್ಲ; ಅಲ್ಲಿಗೆ ಹೋಗಲೇಬಾರದೆಂದು ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ್ದನಷ್ಟೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು