Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 17 - ಕನ್ನಡ ಸತ್ಯವೇದವು J.V. (BSI)

1 ಕುಂದು ಕೊರತೆಯಾಗಲಿ ಯಾವ ದುರ್ಲಕ್ಷಣವಾಗಲಿ ಇರುವ ದನಕುರಿಗಳನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು. ಅಂಥವುಗಳನ್ನು ಸಮರ್ಪಿಸುವದು ಆತನಿಗೆ ಅಸಹ್ಯವಾಗಿದೆ.

2 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವ ಊರಲ್ಲಿಯಾದರೂ ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ

3 ಅನ್ಯದೇವರುಗಳನ್ನಾಗಲಿ ಇಲ್ಲವೆ ಪೂಜಿಸಬಾರದೆಂದು ಆತನು ನಿಷೇಧಿಸಿರುವ ಸೂರ್ಯಚಂದ್ರನಕ್ಷತ್ರಗಳನ್ನಾಗಲಿ ಸೇವಿಸಿ ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದುಷ್ಟವಾದದ್ದನ್ನು ನಡಿಸಿದರೆ

4 ನೀವು ಆ ಸಂಗತಿಯನ್ನು ಕೇಳಿದಾಗ ಸೂಕ್ಷ್ಮವಾಗಿ ವಿಚಾರಣೆಯನ್ನು ಮಾಡಬೇಕು. ಆಗ ಇಸ್ರಾಯೇಲ್ಯರಲ್ಲಿ ಯಾರಿಂದಲಾದರೂ ಆ ನಿಷಿದ್ಧಕಾರ್ಯವು ನಡೆದದ್ದು ನಿಜವೆಂದು ತಿಳಿದುಬಂದರೆ

5 ಆ ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಹಿಡಿದು ಊರ ಹೊರಗೆ ತಂದು ಕಲ್ಲುಗಳಿಂದ ಕೊಲ್ಲಬೇಕು.

6 ಒಬ್ಬನೇ ಒಬ್ಬನ ಸಾಕ್ಷಿಯ ಮಾತಿನ ಮೇಲೆ ಯಾರಿಗೂ ಮರಣಶಿಕ್ಷೆಯಾಗಬಾರದು; ಮರಣಶಿಕ್ಷೆಯನ್ನು ವಿಧಿಸುವದಕ್ಕೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು ಬೇಕು.

7 ಅಪರಾಧಿಯನ್ನು ಕೊಲ್ಲುವದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಹಾಕಬೇಕು; ತರುವಾಯ ಜನರೆಲ್ಲರೂ ಹಾಕಲಿ. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.


ತೀರ್ಮಾನಿಸಲು ಅಶಕ್ಯವಾದ ಕಾರ್ಯವುಂಟಾದಾಗ ನಡಿಸಬೇಕಾದದ್ದು

8 ವಿಧವಿಧವಾದ ಜೀವಹತ್ಯ, ನ್ಯಾಯ, ಹೊಡೆದಾಟ ಇವುಗಳ ವಿಷಯದಲ್ಲಿ ಅನುಮಾನ ಚರ್ಚೆಗಳು ನಿಮ್ಮ ಊರಲ್ಲಿ ಉಂಟಾದಾಗ, ಸರಿಯಾಗಿ ವಿವೇಚಿಸುವದು ನಿಮ್ಮ ಶಕ್ತಿಗೆ ಮೀರಿದ ಪಕ್ಷಕ್ಕೆ ನೀವು ಊರಿನಿಂದ ಹೊರಟು ನಿಮ್ಮ ದೇವರಾದ ಯೆಹೋವನು ಆದುಕೊಳ್ಳುವ ಸ್ಥಳಕ್ಕೆ

9 ಯಾಜಕಸೇವೆಮಾಡುವ ಲೇವಿಯರ ಮತ್ತು ಆ ಕಾಲದ ನ್ಯಾಯಾಧಿಪತಿಯ ಬಳಿಗೆ ಹೋಗಿ ವಿಚಾರಿಸಲು ನೀವು ಕೊಡಬೇಕಾದ ತೀರ್ಪನ್ನು ಅವರು ತಿಳಿಸುವರು.

10 ಯೆಹೋವನು ಆದುಕೊಂಡ ಆ ಸ್ಥಳದಿಂದ ಅವರು ನಿಮಗೆ ತಿಳಿಸುವ ಮಾತಿನ ಪ್ರಕಾರ ನೀವು ಮಾಡಬೇಕು; ಅವರು ಬೋಧಿಸುವದನ್ನೇ ನೀವು ಅನುಸರಿಸಬೇಕು.

11 ಅವರು ಬೋಧಿಸುವ ಬೋಧನೆಯಂತೆಯೂ ಅವರು ಹೇಳಿಕೊಡುವ ತೀರ್ಪಿನಂತೆಯೂ ನೀವು ಮಾಡಬೇಕು; ಅವರು ತಿಳಿಸುವ ಮಾತನ್ನು ಬಿಟ್ಟು ಎಡಬಲಕ್ಕೆ ತಿರುಗಬಾರದು.

12 ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ಯಾಜಕರ ಅಥವಾ ನ್ಯಾಯಾಧಿಪತಿಯ ಮಾತನ್ನು ಯಾವನು ಅಹಂಕಾರದಿಂದ ನಿರಾಕರಿಸುತ್ತಾನೋ ಅವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.

13 ಜನರೆಲ್ಲರೂ ಕೇಳಿ ಭಯಪಟ್ಟು ಇನ್ನು ಅಹಂಕಾರದಿಂದ ನಡೆಯದೆ ಇರುವರು.


ಅರಸನನ್ನು ನೇವಿುಸುವ ವಿಷಯ; ಅರಸನು ನಡೆಯಬೇಕಾದ ರೀತಿ

14 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಸೇರಿ ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿರುವಾಗ - ಸುತ್ತಲಿರುವ ಎಲ್ಲಾ ಜನಾಂಗಗಳಂತೆ ನಾವೂ ಅರಸನನ್ನು ನೇವಿುಸಿಕೊಳ್ಳೋಣ ಎಂದು ಹೇಳಿಕೊಳ್ಳುವ ಪಕ್ಷಕ್ಕೆ

15 ನೀವು ಅಗತ್ಯವಾಗಿ ನಿಮ್ಮ ದೇವರಾದ ಯೆಹೋವನು ಆದುಕೊಂಡವನನ್ನೇ ನೇವಿುಸಿಕೊಳ್ಳಬೇಕು. ನಿಮ್ಮ ಬಂಧುಗಳಾದ ಸ್ವಜನರಲ್ಲೇ ಒಬ್ಬನನ್ನು ಅರಸನನ್ನಾಗಿ ನೇವಿುಸಿಕೊಳ್ಳಬೇಕೇ ಹೊರತು ಅನ್ಯದೇಶದವನನ್ನು ನೇವಿುಸಬಾರದು.

16 ಅವನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಯೆಹೋವನು ಆಜ್ಞಾಪಿಸಿದ್ದಾನಲ್ಲಾ.

17 ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು. ಅವನು ಬೆಳ್ಳಿಬಂಗಾರವನ್ನು ವಿಶೇಷವಾಗಿ ಗಳಿಸಿಕೊಳ್ಳಬಾರದು.

18 ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗೋಸ್ಕರ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು.

19 ಅವನು ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ ಯೆಹೋವನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳದೆ ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಈ ಧರ್ಮಶಾಸ್ತ್ರದ ಎಲ್ಲಾ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸುವದಕ್ಕೆ ಅಭ್ಯಾಸ ಮಾಡಿಕೊಳ್ಳುವಂತೆ ಈ ಗ್ರಂಥವು ಅವನ ಬಳಿಯಲ್ಲೇ ಇರಬೇಕು; ಅವನು ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.

20 ಹೀಗಾದರೆ ಅವನೂ ಅವನ ಸಂತತಿಯವರೂ ಬಹುಕಾಲ ರಾಜ್ಯಾಧಿಕಾರವನ್ನು ನಡಿಸುತ್ತಾ ಇಸ್ರಾಯೇಲ್ಯರ ನಡುವೆ ಬಾಳುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು