ಧರ್ಮೋಪದೇಶಕಾಂಡ 16 - ಕನ್ನಡ ಸತ್ಯವೇದವು J.V. (BSI)ಪ್ರತಿ ವರುಷದಲ್ಲಿಯೂ ನಡಿಸಬೇಕಾದ ಮೂರು ಜಾತ್ರೆಗಳ ವಿಷಯ 1 ನೀವು ಚೈತ್ರಮಾಸದಲ್ಲಿ ಪಸ್ಕ ಹಬ್ಬವನ್ನು ನಿಮ್ಮ ದೇವರಾದ ಯೆಹೋವನಿಗೋಸ್ಕರ ಆಚರಿಸಬೇಕು. ಆ ಮಾಸದಲ್ಲಿಯೇ ರಾತ್ರಿಕಾಲದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಐಗುಪ್ತದೇಶದಿಂದ ಬಿಡಿಸಿದನಲ್ಲವೇ. 2 ನೀವು ಆಡುಕುರಿಗಳಲ್ಲಾಗಲಿ ದನಗಳಲ್ಲಾಗಲಿ ಪಸ್ಕದ ಪಶುವನ್ನು ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ಆತನಿಗಾಗಿ ವಧಿಸಬೇಕು. 3 ಅದರೊಂದಿಗೆ ಹುಳಿಹಾಕಿದ ರೊಟ್ಟಿಯನ್ನು ತಿನ್ನಬಾರದು; ಯಾಕಂದರೆ ನೀವು [ರೊಟ್ಟಿಗೆ ಹುಳಿಹಾಕುವದಕ್ಕೆ ಅವಕಾಶವಿಲ್ಲದೆ] ಅವಸರದಿಂದ ಐಗುಪ್ತದೇಶವನ್ನು ಬಿಟ್ಟುಬಂದಿರಿ. ಐಗುಪ್ತದೇಶದಿಂದ ನಿಮಗೆ ಬಿಡುಗಡೆಯಾದ ದಿನವು ನಿಮ್ಮ ಜೀವಮಾನವೆಲ್ಲಾ ನೆನಪಿನಲ್ಲಿರುವಂತೆ ನೀವು ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಗಳನ್ನು ಏಳು ದಿವಸಗಳವರೆಗೂ ತಿನ್ನಬೇಕು. 4 ಆ ಏಳು ದಿವಸವೂ ನಿಮ್ಮ ದೇಶದಲ್ಲೆಲ್ಲಾ ಹುಳಿಬೆರೆದ ಯಾವ ಪದಾರ್ಥವೂ ನಿಮ್ಮ ಬಳಿಯಲ್ಲಿ ಇರಲೇಬಾರದು. ಮೊದಲನೆಯ ದಿನದ ಸಂಜೆಯಲ್ಲಿ ನೀವು ವಧಿಸಿದ ಪಶುಮಾಂಸದಲ್ಲಿ ಸ್ವಲ್ಪವನ್ನಾದರೂ ಮರುದಿನದವರೆಗೆ ಉಳಿಸಬಾರದು. 5 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವ ಊರಲ್ಲಿಯಾದರೂ ಪಸ್ಕದ ಪಶುವನ್ನು ವಧಿಸದೆ 6 ಆತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀವು ಐಗುಪ್ತದೇಶದಿಂದ ಹೊರಟುಬಂದ ಕಾಲವಾದ ಸೂರ್ಯಾಸ್ತಮಾನಕಾಲದಲ್ಲಿ ಅದನ್ನು ವಧಿಸಬೇಕು. 7 ಆ ಸ್ಥಳದಲ್ಲಿಯೇ ನೀವು ಅದನ್ನು ಅಡಿಗೆಮಾಡಿ ತಿನ್ನಬೇಕು. ಮರುದಿವಸ ನಿಮ್ಮ ನಿಮ್ಮ ಮನೆಗಳಿಗೆ ನೀವು ಹೊರಟುಹೋಗಬಹುದು. 8 ಆರು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು; ಏಳನೆಯ ದಿನದಲ್ಲಿ ನಿಮ್ಮ ದೇವರಾದ ಯೆಹೋವನ ಘನಕ್ಕಾಗಿ ಸಭೆಕೂಡಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಕೂಡದು. 9 ಬೆಳೆ ಕೊಯ್ಯುವದಕ್ಕೆ ಕುಡುಗೋಲು ಹಾಕುವ ಕಾಲ ಮೊದಲುಗೊಂಡು ಏಳು ವಾರಗಳನ್ನು ಎಣಿಸಿ 10 ಆ ಏಳು ವಾರಗಳಾದನಂತರ ಪಂಚಾಶತ್ತಮ ದಿನದ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿದ ಬೆಳೆಗೆ ತಕ್ಕಷ್ಟು ಕಾಣಿಕೆಯನ್ನು ನೀವು ಆಗ ಆತನಿಗೋಸ್ಕರ ತರಬೇಕು. 11 ಮತ್ತು ಆತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಾಯಿ ತಂದೆಯಿಲ್ಲದವರೂ ವಿಧವೆಯರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು. 12 ಐಗುಪ್ತದೇಶದಲ್ಲಿ ದಾಸರಾಗಿದ್ದೇವೆಂಬದನ್ನು ನೀವು ನೆನಪಿಗೆ ತಂದುಕೊಂಡು ಈ ವಿಧಿಗಳನ್ನು ಅನುಸರಿಸಿ ನಡೆಯಬೇಕು. 13 ನೀವು ಕಣದ ಕೆಲಸವನ್ನೂ ಆಲೆಯ ಕೆಲಸವನ್ನೂ ಪೂರೈಸಿ ಬೆಳೆಯನ್ನು ಮನೆಗೆ ತಂದಾಗ ಏಳು ದಿನಗಳವರೆಗೂ ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸಬೇಕು. 14 ಅದರಲ್ಲಿ ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ಸಂಭ್ರಮದಿಂದಿರಬೇಕು. 15 ನಿಮ್ಮ ದೇವರಾದ ಯೆಹೋವನು ಆದುಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲವಾಗಿ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು. 16 ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯಲ್ಲಿಯೂ ಪಂಚಾಶತ್ತಮದಿನದ ಜಾತ್ರೆಯಲ್ಲಿಯೂ ಪರ್ಣಶಾಲೆಗಳ ಜಾತ್ರೆಯಲ್ಲಿಯೂ ಅಂತು ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಕೂಡದು. 17 ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯನುಸಾರ ಕೊಡಬೇಕು. ನ್ಯಾಯಾಧಿಪತಿಗಳೂ ಅಧಿಕಾರಿಗಳೂ ನಡೆಯಬೇಕಾದ ರೀತಿ 18 ಪ್ರತಿಯೊಂದು ಕುಲವು ಇರುವ ಪ್ರದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಎಲ್ಲಾ ಊರುಗಳಲ್ಲಿಯೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ನೀವು ನೇವಿುಸಬೇಕು. ಅವರು ಜನರಿಗೋಸ್ಕರ ನ್ಯಾಯವನ್ನು ವಿಚಾರಿಸಿ ಸರಿಯಾದ ತೀರ್ಪುಕೊಡಬೇಕು. 19 ನೀವು ನ್ಯಾಯವನ್ನು ಬಿಟ್ಟು ತೀರ್ಮಾನಮಾಡಬಾರದು; ಪಕ್ಷಪಾತಮಾಡಬಾರದು; ಲಂಚತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನೂ ಕುರುಡರಂತೆ ಮಾಡುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ. 20 ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು. ಹಾಗೆ ನಡೆದರೆ ನೀವು ಬದುಕಿಕೊಂಡು ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ. ವಿಗ್ರಹಾರಾಧನೆಗೆ ಎಷ್ಟು ಮಾತ್ರವೂ ಸಮ್ಮತಿಸದೆ ಯೆಹೋವನನ್ನು ಯೋಗ್ಯವಾದ ರೀತಿಯಲ್ಲಿಯೇ ಆರಾಧಿಸಬೇಕೆಂಬ ವಿಧಿ 21 ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಟ್ಟಿಸಿಕೊಳ್ಳುವ ಯಜ್ಞವೇದಿಯ ಬಳಿಯಲ್ಲಿ ಯಾವ ವಿಧವಾದ ಮರದ ಅಶೇರವೆಂಬ ವಿಗ್ರಹ ಸ್ತಂಭವನ್ನೂ ನೆಡಬಾರದು; 22 ಕಲ್ಲಿನ ಕಂಬವನ್ನೂ ನಿಲ್ಲಿಸಬಾರದು; ಇದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India