Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ದಾನಿಯೇಲ 8 - ಕನ್ನಡ ಸತ್ಯವೇದವು J.V. (BSI)


ಟಗರಿನ ಮತ್ತು ಹೋತದ ವಿಷಯವಾದ ಕನಸು

1 ಮೊದಲು ನನಗೆ ಕಾಣಿಸಿದ ಕನಸಲ್ಲದೆ ಅರಸನಾದ ಬೇಲ್ಶಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿಯೂ ಇನ್ನೊಂದು ಕನಸು ದಾನಿಯೇಲನಾದ ನನಗೆ ಕಾಣಿಸಿತು.

2 ನಾನು ಕಂಡ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿದ್ದೆನು; ಕನಸಿನಲ್ಲಿ ಊಲಾ ಕಾಲುವೆಯ ದಡದ ಮೇಲೆ ನಿಂತುಕೊಂಡಿದ್ದ ಹಾಗೆ ತೋರಿತು.

3 ನಾನು ಕಣ್ಣೆತ್ತಿ ನೋಡಲು ಇಗೋ, ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿತ್ತು; ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದು, ಆ ದೊಡ್ಡದು ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.

4 ನಾನು ನೋಡುತ್ತಿದ್ದ ಹಾಗೆ ಆ ಟಗರು ಪಡುವಲಿಗೂ ಬಡಗಲಿಗೂ ತೆಂಕಲಿಗೂ ಹಾದಾಡುತ್ತಿತ್ತು; ಯಾವ ಜಂತುವೂ ಅದರೆದುರಿಗೆ ನಿಲ್ಲಲಾರದೆ ಹೋಯಿತು; ಅದರ ಕೈಯಿಂದ ಬಿಡಿಸಲು ಯಾವ ಪ್ರಾಣಿಗೂ ಶಕ್ತಿಯಿರಲಿಲ್ಲ; ಅದು ಮನಸ್ಸು ಬಂದಂತೆ ನಡೆದು ತನ್ನನ್ನು ಹೆಚ್ಚಿಸಿಕೊಂಡಿತು.

5 ನಾನು ಗಮನಿಸುತ್ತಿರುವಾಗ ಇಗೋ, ಒಂದು ಹೋತವು ಪಡುವಲಿಂದ ಭೂಮಂಡಲವನ್ನೆಲ್ಲಾ ದಾಟಿಕೊಂಡು ನೆಲವನ್ನು ಸೋಕದೆ ಓಡಿಬಂತು; ಅದರ ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿತ್ತು.

6 ನಾನು ಕಾಲುವೆಯ ಹತ್ತಿರ ಕಂಡ ಎರಡು ಕೊಂಬಿನ ಟಗರಿನ ಬಳಿಗೆ ಆ ಹೋತವು ಬಂದು ಪರಾಕ್ರಮದಿಂದ ಉಬ್ಬಿ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು.

7 ಅದು ನನ್ನ ಕನಸಿನಲ್ಲಿ ಟಗರನ್ನು ಸಮೀಪಿಸಿ ಅದರ ಮೇಲಣ ಕ್ರೋಧದಿಂದುರಿಯುತ್ತಾ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು; ಅದಕ್ಕೆ ಎದುರುಬೀಳಲು ಟಗರಿಗೆ ಏನೂ ಶಕ್ತಿಯಿರಲಿಲ್ಲ; ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು; ಟಗರನ್ನು ಅದರ ಕೈಯಿಂದ ಬಿಡಿಸುವ ಪ್ರಾಣಿ ಯಾವದೂ ಇರಲಿಲ್ಲ;

8 ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು; ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.

9 ಅವುಗಳೊಳಗೆ ಒಂದರಲ್ಲಿ ಒಂದು ಚಿಕ್ಕ ಕೊಂಬು ಮೊಳೆತು ಬಹು ದೊಡ್ಡದಾಗಿ ಬೆಳೆದು ತೆಂಕಲಲ್ಲಿಯೂ ಮೂಡಲಲ್ಲಿಯೂ ಅಂದಚಂದದ ದೇಶದಲ್ಲಿಯೂ ಪ್ರಬಲವಾಯಿತು.

10 ಅದು ನಕ್ಷತ್ರಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು.

11 ಇದಲ್ಲದೆ ಆ ಗಣದ ಅಧಿಪತಿಯನ್ನೂ ಎದುರಿಸುವಷ್ಟು ಉಬ್ಬಿಕೊಂಡು ನಿತ್ಯಹೋಮವನ್ನು ಆತನಿಗೆ ಸಲ್ಲದಂತೆ ಮಾಡಿ

12 ಆತನ ಪವಿತ್ರಸ್ಥಾನವನ್ನು ಕೆಡವಿ ನಿತ್ಯಹೋಮವನ್ನು ಅಡಗಿಸುವದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು.

13 ಆಗ ಒಬ್ಬ ದೇವದೂತನು ಮಾತಾಡುವದನ್ನು ಕೇಳಿದೆನು; ಮಾತಾಡುವವನನ್ನು ಮತ್ತೊಬ್ಬ ದೇವದೂತನು ಸಂಬೋಧಿಸಿ - ನಿತ್ಯಹೋಮವನ್ನು ನಿಲ್ಲಿಸುವದು, ಭಯಂಕರವಾದ ದೇವದ್ರೋಹಮಾಡುವದು, ಪವಿತ್ರಾಲಯವನ್ನೂ ದೇವಭಕ್ತಗಣವನ್ನೂ ತುಳಿಯುವದು ಎಂಬ ಕನಸಿನ ಕಾರ್ಯಗಳು ಎಷ್ಟು ಕಾಲ ನಡೆಯುವವು ಎಂದು ಪ್ರಶ್ನೆ ಮಾಡಲು

14 ಅವನು ಇವನಿಗೆ - ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರರವರೆಗೆ ನಡೆಯುವವು; ಅನಂತರ ಪವಿತ್ರಾಲಯಕ್ಕೆ ಪುನಃ ನ್ಯಾಯಸ್ಥಾಪನೆಯಾಗುವದು ಎಂದು ಹೇಳಿದನು.

15 ದಾನಿಯೇಲನಾದ ನಾನು ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ಇಗೋ, ಮನುಷ್ಯಸದೃಶನೊಬ್ಬನು ನನ್ನೆದುರಿಗೆ ನಿಂತಿದ್ದನು.

16 ಆಗ - ಗಬ್ರಿಯೇಲನೇ, ಕನಸಿನ ಅರ್ಥವನ್ನು ಇವನಿಗೆ ತಿಳಿಯಪಡಿಸು ಎಂದು ಮನುಷ್ಯಧ್ವನಿಯಂಥ ಒಂದು ವಾಣಿಯು ಊಲಾಕಾಲುವೆಯ ದಡಗಳ ನಡುವೆ ನನಗೆ ಕೇಳಿಸಿತು.

17 ಅದರಂತೆ ಅವನು ನನ್ನ ಬಳಿಗೆ ಬಂದನು; ಅವನು ಬರಲು ನಾನು ಭಯಭ್ರಾಂತನಾಗಿ ಅಡ್ಡಬಿದ್ದೆನು; ನನಗೆ ಅವನು - ನರಪುತ್ರನೇ, ಇದು ಮಂದಟ್ಟಾಗಿರಲಿ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು ಎಂದು ಹೇಳಿದನು.

18 ಅವನು ನನ್ನೊಡನೆ ಮಾತಾಡುತ್ತಿರುವಲ್ಲಿ ನಾನು ಮೈಮರೆತು ಅಡಿಮೊಗವಾಗಿ ಬಿದ್ದಿದ್ದೆನು; ಆಗ ಅವನು ನನ್ನನ್ನು ಮುಟ್ಟಿ ನಿಲ್ಲಿಸಿ ನನಗೆ -

19 ಇಗೋ, ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುವೆನು; ಅದು ಕ್ಲುಪ್ತವಾದ ಅಂತ್ಯಕಾಲದ್ದೇ.

20 ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ.

21 ಆ ಹೋತವು ಗ್ರೀಕ್ ರಾಜ್ಯ, ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ.

22 ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ.

23 ಆ ರಾಜ್ಯಗಳ ಕಡೆಯ ಕಾಲದಲ್ಲಿ, ಅಧರ್ಮಿಗಳ ಅಧರ್ಮವು ಪೂರ್ತಿಯಾದಾಗ ಕಠಿನಮುಖನೂ ದ್ವಂದ್ವಾರ್ಥವಚನನಿಪುಣನು ಆದ ಒಬ್ಬ ರಾಜನು ತಲೆದೋರುವನು.

24 ಅವನು ಪ್ರಬಲನಾಗುವನು, ಆದರೆ ಬಲದಿಂದಲ್ಲ; ಅತ್ಯಧಿಕವಾಗಿ ಹಾಳುಮಾಡಿ ವೃದ್ಧಿಗೆ ಬಂದು ಇಷ್ಟಾರ್ಥವನ್ನು ತೀರಿಸಿಕೊಳ್ಳುವನು; ಬಲಿಷ್ಠರನ್ನೂ ದೇವರ ಜನರನ್ನೂ ಧ್ವಂಸಮಾಡುವನು.

25 ಯುಕ್ತಿಯಿಂದಲೇ ತನ್ನ ಮೋಸವನ್ನು ಸಿದ್ಧಿಗೆ ತಂದು ಮನದಲ್ಲಿ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹುಜನರನ್ನು ನಾಶಪಡಿಸಿ ಪ್ರಭುಗಳ ಪ್ರಭುವಿಗೂ ವಿರುದ್ಧವಾಗಿ ಏಳುವನು. ಆಹಾ, ಯಾರ ಕೈಯೂ ಸೋಕದೆ ಹಾಳಾಗುವನು.

26 ಕನಸಿನಲ್ಲಿ ತಿಳಿಸಲ್ಪಟ್ಟ ಉದಯಾಸ್ತಮಾನಗಳ ವಿಷಯವು ನಿಜವೇ ಸರಿ; ಆದರೆ ಆ ಕನಸು ಗುಟ್ಟಾಗಿರಲಿ; ಅದು ಬಹು ದೂರದ ಕಾಲದ್ದು ಎಂದು ಹೇಳಿದನು.

27 ಆಗ ದಾನಿಯೇಲನಾದ ನಾನು ಬೆಂಡಾಗಿ ಕೆಲವು ದಿವಸ ಕಾಯಿಲೆಬಿದ್ದೆನು; ಆಮೇಲೆ ಎದ್ದು ರಾಜಕಾರ್ಯವನ್ನು ನಡಿಸಿದೆನು; ಆ ಕನಸಿಗೆ ಬೆಚ್ಚಿಬೆರಗಾದೆನು; ಅದು ಯಾರಿಗೂ ತಿಳಿಯಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು