Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ತೀತನಿಗೆ 3 - ಕನ್ನಡ ಸತ್ಯವೇದವು J.V. (BSI)

1 ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ,

2 ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣ ಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ ಅವರಿಗೆ ಜ್ಞಾಪಕಕೊಡು.

3 ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಕಾಲಕಳೆಯುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.

4 ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಜನೋಪಕಾರವೂ ಪ್ರತ್ಯಕ್ಷವಾದಾಗ

5 ನಾವು ಮಾಡಿದ ಪುಣ್ಯಕ್ರಿಯೆಗಳ ನಿವಿುತ್ತದಿಂದಲ್ಲ ಆತನ ಕರುಣೆಯಲ್ಲಿಯೇ ಪುನರ್ಜನ್ಮವನ್ನು ಸೂಚಿಸುವ ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನು ನಮ್ಮಲ್ಲಿ ನೂತನಸ್ವಭಾವವನ್ನು ಉಂಟುಮಾಡುವದರ ಮೂಲಕವಾಗಿಯೂ ಆತನು ನಮ್ಮನ್ನು ರಕ್ಷಿಸಿದನು.

6-7 ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಯನ್ನು ಪಡೆದು ಅದಕ್ಕೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. ಇದು ನಂಬತಕ್ಕ ಮಾತಾಗಿದೆ;

8 ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಇವು ಉತ್ತಮವೂ ಮನುಷ್ಯರಿಗೆ ಪ್ರಯೋಜನಕರವೂ ಆಗಿವೆ.

9 ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.

10 ಸಭೆಯಲ್ಲಿ ಭೇದಹುಟ್ಟಿಸುವ ಮನುಷ್ಯನನ್ನು ಎರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು;

11 ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ಅವನ ಮನಸ್ಸೇ ನಿರ್ಣಯಿಸುವದು.


ಕಡೇ ಮಾತುಗಳು

12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನಮಾಡು.

13 ನ್ಯಾಯಶಾಸ್ತ್ರಿ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು; ಅವರಿಗೇನೂ ಕೊರತೆಯಾಗಬಾರದು.

14 ನಮ್ಮ ಜನರು ಸತ್ಕ್ರಿಯಾಹೀನರಾಗದಂತೆ ಅವರೂ ಸಹೋದರರಿಗೆ ಬೇಕಾದದ್ದನ್ನು ಕೊಡುವವರಾಗಿ ಪರೋಪಕಾರವನ್ನು ಕಲಿತುಕೊಳ್ಳಲಿ.

15 ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನನ್ನು ನಂಬುವವರಾಗಿ ನಮ್ಮನ್ನು ಪ್ರೀತಿಸುವವರಿಗೆ ವಂದನೆ ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು