ಜ್ಞಾನೋಕ್ತಿಗಳು 7 - ಕನ್ನಡ ಸತ್ಯವೇದವು J.V. (BSI)1 ಕಂದಾ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿಟ್ಟುಕೋ. 2 ನನ್ನ ಉಪದೇಶವನ್ನು ಕಣ್ಣುಗುಡ್ಡಿನಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು. 3 ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ, ಹೃದಯದ ಹಲಗೆಯಲ್ಲಿ ಬರೆ. 4 ಜ್ಞಾನವನ್ನು ಅಕ್ಕಾ ಎಂದು ಹೇಳು, ವಿವೇಕವನ್ನು ಆಪ್ತವಿುತ್ರಳೇ ಎಂದು ಕರೆ. 5 ಅವು ಜಾರಳಿಂದ, ಸವಿಮಾತನಾಡುವ ಪರಸ್ತ್ರೀಯಿಂದ, ನಿನ್ನನ್ನು ರಕ್ಷಿಸುವವು. 6 ನಾನು ನನ್ನ ಮನೆಯ ಜಾಲರಿಯಿಂದ ಇಣಿಕಿ ನೋಡಲು 7 ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. 8 ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, 9 ಅವಳ [ಮನೆಯ] ಮೂಲೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು. 10 ಇಗೋ ವೇಶ್ಯಾವೇಷವನ್ನು ಧರಿಸಿರುವ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಳ್ಳುತ್ತಾಳೆ. 11 (ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ; 12 ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚುಹಾಕುವಳು). 13 ಅವನನ್ನು ಹಿಡಿದು ಮುದ್ದಾಡಿ ನಾಚಿಕೆಗೆಟ್ಟವಳಾಗಿ - 14 ಎಲೈ, ಈ ದಿವಸ ನನ್ನ ಹರಿಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನಯಜ್ಞಶೇಷವು ನನ್ನಲ್ಲಿದೆ, 15 ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆ, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು. 16 ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ ಐಗುಪ್ತದೇಶದ ನೂಲಿನ ವಿಚಿತ್ರವಸ್ತ್ರಗಳನ್ನೂ ಹಾಸಿದ್ದೇನೆ. 17 ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ, ಇವುಗಳ ಚೂರ್ಣವನ್ನು ಉದರಿಸಿದ್ದೇನೆ. 18 ಬಾ, ಬೆಳಗಿನ ತನಕ ಬೇಕಾದಷ್ಟು ರವಿುಸುವ, ಕಾಮವಿಲಾಸಗಳಿಂದ ಸಂತೋಷಿಸುವ. 19 ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ. 20 ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು ಎಂಬದಾಗಿ 21 ಅವನನ್ನು ತನ್ನ ಸವಿಮಾತುಗಳಿಂದ ಬಲಾತ್ಕರಿಸಿ ಬಹಳವಾಗಿ ಪ್ರೇರಿಸಿ ಸಮ್ಮತಿಪಡಿಸುತ್ತಾಳೆ. 22 ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ ಪಕ್ಷಿಯು ಬಲೆಯ ಕಡೆಗೆ ಓಡುವ ಮೇರೆಗೂ 23 ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ ಬಾಣವು ತನ್ನ ಕಾಳಿಜವನ್ನು ತಿವಿಯುವ ಕಡೆಗೆ ತಟ್ಟನೆ ಅವಳ ಹಿಂದೆ ಹೋಗುತ್ತಾನೆ. 24 ಈಗ, ಕಂದಾ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳನ್ನು ಆಲಿಸು. 25 ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿ ಅವಳ ಮಾರ್ಗದಲ್ಲಿ ನಡೆಯಬೇಡ. 26 ಅವಳಿಂದ ಗಾಯಪಟ್ಟು ಬಿದ್ದವರು ಬಹುಮಂದಿ, ಹತರಾದವರೋ ಲೆಕ್ಕವೇ ಇಲ್ಲ. 27 ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದು ಹೋಗುತ್ತದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India