ಜ್ಞಾನೋಕ್ತಿಗಳು 5 - ಕನ್ನಡ ಸತ್ಯವೇದವು J.V. (BSI)1 ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ನನ್ನ ವಿವೇಕಬೋಧೆಗೆ ಕಿವಿಗೊಡು. 2 ಹೀಗಾದರೆ ನೀನು ಸುಬುದ್ಧಿಯನ್ನು ಕೈಗೊಳ್ಳುವಿ, ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು. 3 ಜಾರಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. 4 ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು. 5 ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು. ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು. 6 ಅವಳ ನಡತೆಯು ಚಂಚಲವಾಗಿರುವದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ಗೊತ್ತೇ ಇಲ್ಲ. 7 ಹೀಗಿರಲು, ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ತೊಲಗಬಾರದು. 8 ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ. ಅವಳ ಮನೆಬಾಗಿಲ ಹತ್ತಿರ ಹೋದೀಯೆ. 9 ನೋಡಿಕೋ, ನಿನ್ನ ಪುರುಷತ್ವವು ಪರಾಧೀನವಾದೀತು, ನಿನ್ನ ಆಯುಷ್ಯವು ಕ್ರೂರರ ವಶವಾದೀತು. 10 ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ. 11 ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚಿಕೊಂಡು - 12 ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರ ಮಾಡಿತು, 13 ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ! 14 ನಾನು ಮಹಾಜನಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು ಎಂದು ಅಂದುಕೊಳ್ಳುವಿ. 15 ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. 16 ನಿನ್ನ ಒರತೆಗಳು ಬೈಲಿನಲ್ಲಿಯೂ ನಿನ್ನ ಕಾಲುವೆಗಳು ಚೌಕದಲ್ಲಿಯೂ ಹರಡಿ ಹರಿಯುವದು ವಿಹಿತವೇ? 17 ಅವು ನಿನಗೊಬ್ಬನಿಗೋಸ್ಕರವೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು. 18 ನಿನ್ನ ಬುಗ್ಗೆಯು [ದೇವರ] ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. 19 ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ; ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು. 20 ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವದೇಕೆ? 21 ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ. ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ. 22 ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರವಿುಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು. 23 ಸದುಪದೇಶದ ಕೊರತೆಯಿಂದಲೇ ಸಾಯುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India