ಜ್ಞಾನೋಕ್ತಿಗಳು 4 - ಕನ್ನಡ ಸತ್ಯವೇದವು J.V. (BSI)1 ಮಕ್ಕಳಿರಾ, ತಂದೆಯ ಶಿಕ್ಷಣವನ್ನು ಕೇಳಿರಿ, ವಿವೇಕವನ್ನು ಗ್ರಹಿಸಲಿಕ್ಕೆ ಕಿವಿಗೊಡಿರಿ. 2 ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ. 3 ನಾನೂ ನನ್ನ ತಂದೆಗೆ [ಅಧೀನನಾದ] ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು. 4 ತಂದೆಯು ನನಗೆ ಬೋಧಕನಾಗಿ ಹೀಗೆಂದನು - ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು. 5 ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಓರೆಯಾಗಬೇಡ. 6 ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವದು, ಪ್ರೀತಿಸಿದರೆ, ನಿನ್ನನ್ನು ಕಾಯುವದು. 7 ಜ್ಞಾನವನ್ನು ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ. 8 ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು; ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು. 9 ಆಕೆಯು ನಿನ್ನ ತಲೆಗೆ ಅಂದದ ಪುಷ್ಪ ಮಾಲೆಯನ್ನಿಟ್ಟು ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು. 10 ಕಂದಾ, ಆಲಿಸಿ ನನ್ನ ಮಾತುಗಳನ್ನು ಕೇಳು; ಕೇಳಿದರೆ, ನಿನ್ನ ಜೀವಮಾನದ ವರುಷಗಳು ಹೆಚ್ಚುವವು. 11 ನಾನು ಜ್ಞಾನಮಾರ್ಗವನ್ನು ಉಪದೇಶಿಸಿ ಧರ್ಮಮಾರ್ಗದಲ್ಲಿ ನಿನ್ನನ್ನು ನಡಿಸುವೆನು. 12 ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು, ಓಡಿದರೆ, ಮುಗ್ಗರಿಸುವದಿಲ್ಲ. 13 ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು. 14 ದುಷ್ಟರ ಮಾರ್ಗದಲ್ಲಿ ಸೇರದಿರು; ಕೆಟ್ಟವರ ದಾರಿಯಲ್ಲಿ ನಡೆಯಬೇಡ. 15 ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯದೆ ಓರೆಯಾಗು; ಮುಂದೆ ಮುಂದೆ ನಡೆ. 16 ಕೇಡುಮಾಡದಿದ್ದರೆ ಅವರಿಗೆ ನಿದ್ರೆಹತ್ತದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವದು. 17 ದುಷ್ಟತನವೇ ಅವರ ಅನ್ನ; ಬಲಾತ್ಕಾರವೇ ಅವರ ದ್ರಾಕ್ಷಾರಸಪಾನ. 18 ನೀತಿವಂತರ ಮಾರ್ಗವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ. 19 ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು. 20 ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. 22 ಅವುಗಳನ್ನು ಹೊಂದುವವರಿಗೆ ಅವು ಜೀವವು. ದೇಹಕ್ಕೆಲ್ಲಾ ಅವೇ ಆರೋಗ್ಯವು. 23 ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು. 24 ಸೊಟ್ಟ ಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ತುಟಿಗಳ ವಕ್ರತೆಯನ್ನು ದೂರಮಾಡು. 25 ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ. 26 ನೀನು ನಡೆಯುವ ದಾರಿಯನ್ನು ಸಮಮಾಡು; ನಿನ್ನ ಮಾರ್ಗಗಳೆಲ್ಲಾ ದೃಢವಾಗಿರಲಿ. 27 ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ; ನಿನ್ನ ಕಾಲನ್ನು ಕೇಡಿಗೆ ದೂರಮಾಡು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India