Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 29 - ಕನ್ನಡ ಸತ್ಯವೇದವು J.V. (BSI)

1 ಬಹಳವಾಗಿ ಗದರಿಸಿದರೂ ತಗ್ಗದವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.

2 ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ; ದುಷ್ಟನ ಆಳಿಕೆ ಜನರಿಗೆ ನರಳಾಟ.

3 ಜ್ಞಾನಾಸಕ್ತನು ತಂದೆಯನ್ನು ಹರ್ಷಗೊಳಿಸುವನು; ವೇಶ್ಯಾಸಂಗಿಯು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.

4 ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು; ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.

5 ನೆರೆಯವನೊಂದಿಗೆ ವಂಚಿಸುವ ಸವಿನುಡಿಗಳನ್ನಾಡುವವನು ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.

6 ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು; ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.

7 ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು; ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.

8 ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು; ಜ್ಞಾನಿಗಳೋ ರೋಷಾಗ್ನಿಯನ್ನಾರಿಸುವರು.

9 ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ ರೇಗಿದರೂ ನಕ್ಕರೂ ಜಗಳವು ತೀರುವದಿಲ್ಲ.

10 ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು; ಯಥಾರ್ಥವಂತರ ಪ್ರಾಣಕ್ಕೂ ಹೊಂಚುಹಾಕುವರು.

11 ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.

12 ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.

13 ತಗ್ಗುವವನು ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ; ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.

14 ಬಡವರನ್ನು ನ್ಯಾಯವಾಗಿ ಆಳುವ ರಾಜನ ಸಿಂಹಾಸನವು ಶಾಶ್ವತವು.

15 ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.

16 ದುಷ್ಟರ ವೃದ್ಧಿ ಪಾಪವೃದ್ಧಿ; ಶಿಷ್ಟರೋ ಅವರ ಪತನವನ್ನು ಕಣ್ಣಾರೆ ನೋಡುವರು.

17 ಮಗನನ್ನು ಶಿಕ್ಷಿಸು; ನಿನ್ನನ್ನು ಸುಧಾರಿಸುವನು; ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.

18 ದೇವದರ್ಶಕರಿಲ್ಲದಿರುವಲ್ಲಿ ಜನರು ಅಂಕೆಮೀರುವರು; ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.

19 ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು; ಅವನು ತಿಳಿದುಕೊಂಡರೂ ಗಮನಿಸನು.

20 ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.

21 ಆಳನ್ನು ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯು ಅವನು ಎದುರುಬೀಳುವನು.

22 ಕೋಪಿಷ್ಠನು ಜಗಳವನ್ನೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.

23 ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವದು; ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.

24 ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು; ಆಣೆಯಿಡುವದನ್ನು ಕೇಳಿದರೂ ಸುಮ್ಮನಿರುವನು.

25 ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.

26 ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು; ನ್ಯಾಯತೀರ್ಪು ಯೆಹೋವನಿಂದಲೇ ಆಗುವದು.

27 ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು; ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು