ಜ್ಞಾನೋಕ್ತಿಗಳು 21 - ಕನ್ನಡ ಸತ್ಯವೇದವು J.V. (BSI)1 ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ. 2 ನರನ ನಡತೆಯು ಸ್ವಂತ ದೃಷ್ಟಿಗೆ ನೆಟ್ಟಗೆ; ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು. 3 ಯಜ್ಞಕ್ಕಿಂತಲೂ ನೀತಿನ್ಯಾಯಗಳು ಯೆಹೋವನಿಗೆ ಇಷ್ಟ. 4 ಗರ್ವದ ದೃಷ್ಟಿ ಕೊಬ್ಬಿದ ಹೃದಯ, ದುಷ್ಟರ ಭಾಗ್ಯ, ಇವು ಧರ್ಮವಿರುದ್ಧ. 5 ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ. 6 ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ [ನಾಶಕರ]. 7 ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ ಅವರ ಬಲಾತ್ಕಾರವು ಅವರನ್ನೇ ಎಳೆದುಕೊಂಡು ಹೋಗುವದು. 8 ದೋಷಿಯ ದಾರಿಡೊಂಕು; ಶುದ್ಧನ ನಡತೆ ಸರಲ. 9 ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವದಕ್ಕಿಂತಲೂ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದೇ ಲೇಸು. 10 ದುರಾತ್ಮನು ಕೇಡಿನ ಮೇಲೆ ಮನಸ್ಸಿಡುವನು; ನೆರೆಯವನಿಗೂ ದಯೆತೋರಿಸನು. 11 ಧರ್ಮನಿಂದಕನಿಗೆ ದಂಡನೆಯಾದರೆ [ನೋಡಿದ] ಮಂದಮತಿಯು ಜ್ಞಾನವನ್ನು ಪಡೆಯುವನು; ಜ್ಞಾನಿಗೆ ಶಿಕ್ಷೆಯಾದರೆ ತಾನೇ ತಿಳುವಳಿಕೆಯನ್ನು ಹೊಂದುವನು. 12 ಧರ್ಮಸ್ವರೂಪನು ಅಧರ್ಮಿಯ ಮನೆಯನ್ನು ಲಕ್ಷ್ಯಕ್ಕೆತಂದು ಅಧರ್ಮಿಗಳನ್ನು ಕೆಡವಿ ಕೇಡಿಗೆ ದೊಬ್ಬುವನು. 13 ಬಡವನ ಮೊರೆಗೆ ಕಿವಿಮುಚ್ಚಿಕೊಳ್ಳುವವನು ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು. 14 ಗುಪ್ತ ಬಹುಮಾನವು ಕೋಪವನ್ನಾರಿಸುವದು; ಮಡಲಲ್ಲಿಟ್ಟ ಲಂಚವು ಬಲು ಸಿಟ್ಟನ್ನಣಗಿಸುವದು. 15 ನ್ಯಾಯಮಾರ್ಗವು ಶಿಷ್ಟರಿಗೆ ಸಂತೋಷ; ಕೆಡುಕರಿಗೆ ಕೇಡು. 16 ಜ್ಞಾನಮಾರ್ಗದಿಂದ ತಪ್ಪಿದವನಿಗೆ ಪ್ರೇತ ಸಮೂಹವೇ ವಿಶ್ರಾಂತಿಸ್ಥಾನ. 17 ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ [ಸುಗಂಧ] ತೈಲವನ್ನೂ ಆಶಿಸುವವನು ನಿರ್ಭಾಗ್ಯನಾಗುವನು. 18 ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡು. 19 ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ ಕಾಡಿನ ವಾಸವೇ ಲೇಸು. 20 ಜ್ಞಾನಿಯ ನಿವಾಸದಲ್ಲಿ ಎಣ್ಣೆಯೂ ಶ್ರೇಷ್ಠ ಸಂಪತ್ತೂ ಇರುವವು, ಜ್ಞಾನಹೀನನು ಇದ್ದದ್ದನ್ನೆಲ್ಲಾ ನುಂಗಿಬಿಡುವನು. 21 ನೀತಿ ಕೃಪೆಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು. 22 ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಲಗ್ಗೆ ಹತ್ತಿ ಅವರು ನಂಬಿದ್ದ ಬಲವಾದ ಕೋಟೆಯನ್ನು ಕೆಡವಿ ಹಾಕುವನು. 23 ತನ್ನ ಬಾಯನ್ನೂ ನಾಲಿಗೆಯನ್ನೂ ಕಾಯುವವನು ತೊಂದರೆಗಳಿಂದ ರಕ್ಷಿಸಿಕೊಳ್ಳುವನು. 24 ಧರ್ಮನಿಂದಕನೆನಿಸಿಕೊಳ್ಳುವ ಸೊಕ್ಕೇರಿದ ಅಹಂಕಾರಿಯು ಗರ್ವಮದದಿಂದ ಪ್ರವರ್ತಿಸುವನು. 25 ಸೋಮಾರಿಯ ಆಶೆಯು ಅವನನ್ನು ಕೊಲ್ಲುವದು, ಅವನ ಕೈಗಳು ದುಡಿಯಲೊಲ್ಲವಷ್ಟೆ. 26 ಧರ್ಮಿಯು ಹಿಂತೆಗೆಯದೆ ಕೊಡುವನು, ಲೋಭಿಯು ದಿನವೆಲ್ಲಾ ಆಶಿಸುತ್ತಲೇ ಇರುವನು. 27 ದುಷ್ಟರ ಯಜ್ಞವೇ ಅಸಹ್ಯ, ಅದನ್ನು ದುರ್ಬುದ್ಧಿಯಿಂದ ಅರ್ಪಿಸುವದು ಮತ್ತೂ ಅಸಹ್ಯ. 28 ಸುಳ್ಳುಸಾಕ್ಷಿಯು ಅಳಿದುಹೋಗುವದು; ಕೇಳಿದ್ದದ್ದನ್ನೇ ಹೇಳುವವನ ಸಾಕ್ಷಿಯು ಶಾಶ್ವತವಾಗಿರುವದು. 29 ದುಷ್ಟನ ಮುಖದಲ್ಲಿ ಲಜ್ಜೆಯಿಲ್ಲ; ಸತ್ಯವಂತನು ತನ್ನ ನಡತೆಯನ್ನು ಸರಿಪಡಿಸಿಕೊಳ್ಳುತ್ತಿರುವನು. 30 ಯಾವ ಜ್ಞಾನವೂ ಯಾವ ವಿವೇಕವೂ ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವದಿಲ್ಲ. 31 ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನಿಂದಲೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India