ಜ್ಞಾನೋಕ್ತಿಗಳು 18 - ಕನ್ನಡ ಸತ್ಯವೇದವು J.V. (BSI)1 ಜನರಲ್ಲಿ ಸೇರದವನು ಸ್ವೇಚ್ಫಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು. 2 ಮೂಢನಿಗೆ ವಿವೇಕವು ಅನಿಷ್ಟ; ಸ್ವಭಾವವನ್ನು ಹೊರಪಡಿಸಿಕೊಳ್ಳುವದೇ ಅವನಿಗಿಷ್ಟ. 3 ದುರಾಚಾರವಿದ್ದಲ್ಲಿ ತಾತ್ಸಾರ; ಅವಮಾನವಿದ್ದಲ್ಲಿ ಧಿಕ್ಕಾರ. 4 ಸತ್ಪುರುಷನ ನುಡಿಯು ಆಳವಾದ ನೀರು, ಜ್ಞಾನದ ಬುಗ್ಗೆ, ಹರಿಯುವ ತೊರೆ. 5 ದುಷ್ಟನಿಗೆ ಪ್ರಸನ್ನನಾಗಿ ಶಿಷ್ಟನಿಗೆ ನ್ಯಾಯತಪ್ಪಿಸುವದು ಅಧರ್ಮ. 6 ಜ್ಞಾನಹೀನನ ತುಟಿಗಳು ಜಗಳವನ್ನು ಹೂಡುತ್ತವೆ; ಅವನ ಬಾಯಿ ಪೆಟ್ಟುತಿನ್ನುವದಕ್ಕೆ ಕೂಗಿಕೊಳ್ಳುತ್ತದೆ. 7 ಜ್ಞಾನಹೀನನಿಗೆ ಬಾಯಿ ನಾಶ; ತುಟಿಗಳು ಪಾಶ. 8 ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು; ಹೊಟ್ಟೆಯೊಳಕ್ಕೇ ಇಳಿಯುವವು. 9 ಕೆಲಸಗಳ್ಳನು ಕೆಡುಕನಿಗೆ ತಮ್ಮ. 10 ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು. 11 ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ. 12 ಭಂಗಕ್ಕೆ ಮೊದಲು ಗರ್ವದ ಹೃದಯ; ಮಾನಕ್ಕೆ ಮುಂಚೆ ದೈನ್ಯ. 13 ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು. 14 ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು? 15 ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುವದು; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುವದು. 16 ಕಾಣಿಕೆಯು ಅನುಕೂಲತೆಗೂ ಶ್ರೀಮಂತರ ಸಾನ್ನಿಧ್ಯಪ್ರವೇಶಕ್ಕೂ ಸಾಧನ. 17 ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು. 18 ಚೀಟುಹಾಕುವದರಿಂದ ವ್ಯಾಜ್ಯಶಮನವೂ, ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವದು. 19 ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ; ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ. 20 ಮನುಷ್ಯನು ತನ್ನ ಬಾಯ ಬೆಳೆಯನ್ನು ಹೊಟ್ಟೆತುಂಬಾ ಉಣ್ಣುವನು; ತನ್ನ ತುಟಿಗಳ ಫಲವನ್ನು ಸಾಕಾದಷ್ಟು ತಿನ್ನುವನು. 21 ಜೀವನಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು. 22 ಪತ್ನೀಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ. 23 ಬಡವನು ಬಿನ್ನೈಸುವನು; ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು. 24 ಬಹುಮಂದಿ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ; ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ವಿುತ್ರನುಂಟು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India