ಜ್ಞಾನೋಕ್ತಿಗಳು 17 - ಕನ್ನಡ ಸತ್ಯವೇದವು J.V. (BSI)1 ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ ಸಮಾಧಾನದ ಒಣತುತ್ತೇ ಮೇಲು. 2 ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು; ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು. 3 ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು; ಹೃದಯಗಳನ್ನು ಶೋಧಿಸುವವನು ಯೆಹೋವನೇ. 4 ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು; ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು. 5 ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು; [ಪರರ] ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು. 6 ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ; ಹೆತ್ತವರು ಮಕ್ಕಳಿಗೆ ಭೂಷಣ. 7 ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ; ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ. 8 ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ. 9 ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು. 10 ಮಂದನಿಗೆ ನೂರು ಪೆಟ್ಟು ಹೊಡೆಯುವದಕ್ಕಿಂತಲೂ ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ. 11 ದುರಾತ್ಮನಿಗೆ ದಂಗೆಯ ಮೇಲೇ ಮನಸ್ಸು; ಕ್ರೂರದೂತನು ಅವನ ಮೇಲೆ ಬರುವನು. 12 ಮೂರ್ಖತನದಲ್ಲಿ ಮುಣುಗಿರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು. 13 ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡುತಪ್ಪದು. 14 ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು. 15 ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು. 16 ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ. 17 ವಿುತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ. 18 ನೆರೆಯವನಿಗಾಗಿ ಕೈ ಮೇಲೆ ಕೈ ಹಾಕಿ ಹೊಣೆಯಾದವನು ಬುದ್ಧಿಹೀನನೇ ಸರಿ. 19 ಪಾಪಪ್ರಿಯನು ಕಲಹಪ್ರಿಯ; ತನ್ನ ಬಾಗಿಲನ್ನು ಎತ್ತರಿಸುವವನು ಹಾಳಾಗುವನು. 20 ವಕ್ರಹೃದಯನು ಶುಭವನ್ನು ಪಡೆಯನು; ಕೆಟ್ಟನಾಲಿಗೆಯವನು ವಿಪತ್ತಿಗೆ ಸಿಕ್ಕಿಬೀಳುವನು. 21 ಹೆಡ್ಡನನ್ನು ಹೆತ್ತವನಿಗೆ ವ್ಯಥೆ, ಮೂರ್ಖನ ತಂದೆಗೆ ವ್ಯಸನ. 22 ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ. 23 ದುಷ್ಟನು ಲಂಚವನ್ನು ಮಡಲಿನಿಂದ ತೆಗೆದುಕೊಂಡು ನ್ಯಾಯವನ್ನು ತಪ್ಪಿಸುವನು. 24 ವಿವೇಕಿಗೆ ಜ್ಞಾನವೇ ಗುರಿಯಾಗಿರುವದು; ಮೂಢನ ದೃಷ್ಟಿಯು ದಿಗಂತಗಳಲ್ಲಿಯೂ ಅಲೆಯುವದು. 25 ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ. 26 ಶಿಷ್ಟನಿಗೆ ದಂಡ ಅಯುಕ್ತ; ಧರ್ಮಿಷ್ಟನಿಗೆ ಪೆಟ್ಟು ಅಧರ್ಮ. 27 ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ. 28 ಮೂಢನು ಕೂಡ ಸುಮ್ಮನಿದ್ದರೆ, ಜ್ಞಾನಿಯೆಂತಲೂ ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India