ಜ್ಞಾನೋಕ್ತಿಗಳು 16 - ಕನ್ನಡ ಸತ್ಯವೇದವು J.V. (BSI)1 ಹೃದಯದ ಸಂಕಲ್ಪವು ಮನುಷ್ಯನ ವಶವು; ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವದು. 2 ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು. 3 ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು. 4 ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನುಂಟುಮಾಡಿದ್ದಾನೆ. 5 ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ; ಅವರಿಗೆ ದಂಡನೆ ಖಂಡಿತ. 6 ಕೃಪಾಸತ್ಯತೆಗಳಿಂದ ಪಾಪನಿವಾರಣೆ; ಯೆಹೋವನ ಭಯಭಕ್ತಿಯಿಂದ ಹಾನಿ ನಿವಾರಣೆ. 7 ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ವಿುತ್ರರನ್ನಾಗಿ ಮಾಡುವನು. 8 ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು. 9 ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಂಡರೂ ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು. 10 ರಾಜನ ತುಟಿಗಳಲ್ಲಿ ದೈವೋಕ್ತಿ; ನ್ಯಾಯತೀರಿಸುವದರಲ್ಲಿ ಅವನ ಬಾಯಿ ತಪ್ಪಿಹೋಗದು. 11 ನ್ಯಾಯದ ತ್ರಾಸುತಕ್ಕಡಿಗಳು ಯೆಹೋವನ ಏರ್ಪಾಡು; ಕಟ್ಲೆಚೀಲದ ಕಲ್ಲುಗಳೆಲ್ಲಾ ಆತನ ಕೈಕೆಲಸವೇ. 12 ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು ಅಧರ್ಮವನ್ನಾಚರಿಸಲು ಅಸಹ್ಯಪಡುವರು. 13 ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು; ಯಥಾರ್ಥವಾದಿಯನ್ನು ಪ್ರೀತಿಸುವರು. 14 ಭೂಪನ ಕೋಪ ಮೃತ್ಯುವಿನ ದೂತ; ಜಾಣನು ಅದನ್ನು ಶಮನಪಡಿಸುವನು. 15 ಪ್ರಭುವಿನ ಮುಖಪ್ರಸನ್ನತೆ ಜೀವ; ಆತನ ದಯೆ ಮುಂಗಾರುಮುಗಿಲು. 16 ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು; ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವದು ಲೇಸು. 17 ಸತ್ಯವಂತನ ರಾಜಮಾರ್ಗ ಹಾನಿಗೆ ದೂರ; ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು. 18 ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು. 19 ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ ದೀನರ ಸಂಗಡ ದೈನ್ಯದಿಂದಿರುವದು ವಾಸಿ. 20 [ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು; ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು. 21 ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವದು; ಸವಿತುಟಿಯಿಂದ ಉಪದೇಶಶಕ್ತಿಯು ಹೆಚ್ಚುವದು. 22 ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ದಂಡನೆ. 23 ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವದು. 24 ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ. 25 ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ. 26 ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವದು; ಅವನನ್ನು [ದುಡಿಯಲಿಕ್ಕೆ], ಅವನ ಬಾಯೇ ಒತ್ತಾಯ ಮಾಡುವದು. 27 ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ; ಅವನ ತುಟಿಗಳಲ್ಲಿ ಬೆಂಕಿಯುರಿಯುತ್ತದೆ. 28 ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ. 29 ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ ದುರ್ಮಾರ್ಗಕ್ಕೆ ಎಳೆಯುವನು. 30 ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಗಳನ್ನು ಕಲ್ಪಿಸುವನು; ತುಟಿಯನ್ನು ಮಡಸಿಕೊಳ್ಳುವವನು ಕೇಡನ್ನು ಸಾಧಿಸುವನು. 31 ನರೆಗೂದಲೇ ಸುಂದರ ಕಿರೀಟವು; ಅದು ಧರ್ಮಮಾರ್ಗದಲ್ಲಿ ದೊರಕುವದು. 32 ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ; ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ. 33 ಉಡಿಯಲ್ಲಿ ಚೀಟು ಹಾಕಬಹುದು; ಅದರ ತೀರ್ಪು ಯೆಹೋವನದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India