Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 15 - ಕನ್ನಡ ಸತ್ಯವೇದವು J.V. (BSI)

1 ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.

2 ಜ್ಞಾನಿಗಳ ನಾಲಿಗೆಯು ತಿಳುವಳಿಕೆಯನ್ನು ಸಾರ್ಥಕ ಮಾಡುವದು; ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಕ್ಕುವದು.

3 ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.

4 ಸಂತೈಸುವ ನಾಲಿಗೆ ಜೀವವೃಕ್ಷವು; ಬಲಾತ್ಕರಿಸುವ ನಾಲಿಗೆ ಮನಮುರಿಯುವದು.

5 ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು; ಗದರಿಕೆಯನ್ನು ಗಮನಿಸುವವನು ಜಾಣನು.

6 ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ; ದುಷ್ಟನ ಆದಾಯವು ಕಳವಳವೇ.

7 ಜ್ಞಾನಿಗಳ ತುಟಿಗಳು ತಿಳುವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವದೇ ಇಲ್ಲ.

8 ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ; ಶಿಷ್ಟರ ಬಿನ್ನಪ ಆತನಿಗೆ ಒಪ್ಪಿತ.

9 ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ; ಧರ್ಮಾಸಕ್ತನು ಆತನಿಗೆ ಪ್ರಿಯ.

10 ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ; ಗದರಿಕೆಯನ್ನು ಕೇಳಲೊಲ್ಲದವನಿಗೆ ಸಾವು.

11 ಪಾತಾಳವೂ ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಮತ್ತೂ ಸ್ಪಷ್ಟ.

12 ಧರ್ಮನಿಂದಕನು ಗದರಿಕೆಯನ್ನೊಲ್ಲನು; ಜ್ಞಾನಿಗಳ ಸಂಗಡ ಸೇರನು.

13 ಹರ್ಷಹೃದಯದಿಂದ ಹಸನ್ಮುಖ; ಮನೋವ್ಯಥೆಯಿಂದ ಆತ್ಮಭಂಗ.

14 ವಿವೇಕಿಯ ಹೃದಯ ತಿಳುವಳಿಕೆಯನ್ನು ಹುಡುಕುವದು; ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವದು.

15 ದೀನನ ದಿನಗಳೆಲ್ಲಾ ದುಃಖಭರಿತ; ಹರ್ಷಹೃದಯನಿಗೆ ನಿತ್ಯವೂ ಔತಣ.

16 ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪಧನವೇ ಲೇಸು.

17 ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.

18 ಕೋಪಿಷ್ಟನು ವ್ಯಾಜ್ಯವನ್ನೆಬ್ಬಿಸುವನು; ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.

19 ಸೋಮಾರಿಯ ದಾರಿ ಮುಳ್ಳುಬೇಲಿ; ಯಥಾರ್ಥವಂತನ ಮಾರ್ಗ ರಾಜಮಾರ್ಗ.

20 ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು; ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.

21 ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು; ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು.

22 ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹುಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.

23 ತಕ್ಕ ಉತ್ತರಕೊಡುವವನಿಗೆ ಎಷ್ಟೋ ಉಲ್ಲಾಸ! ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!

24 ವಿವೇಕಿಗೆ ಜೀವದ ಮಾರ್ಗವು ಮೇಲು ಮೇಲಕ್ಕೆ ಹೋಗುತ್ತದೆ; ಅದನ್ನು ಹಿಡಿದವನು ಪಾತಾಳದಿಂದ ತಪ್ಪಿಸಿಕೊಳ್ಳುವನು.

25 ಯೆಹೋವನು ಗರ್ವಿಷ್ಠನ ಮನೆಯನ್ನು ಕಿತ್ತುಹಾಕುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು.

26 ಕುಯುಕ್ತಿಯು ಯೆಹೋವನಿಗೆ ಅಸಹ್ಯ; ನಯನುಡಿಯು ನಿರ್ಮಲ.

27 ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.

28 ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.

29 ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.

30 ಕಣ್ಣಿಗೆ ಬಿದ್ದ ಬೆಳಕು ಹೃದಯಕ್ಕೆ ಆನಂದ; ಕಿವಿಗೆ ಬಿದ್ದ ಒಳ್ಳೇ ಸುದ್ದಿ ಎಲುಬಿಗೆ ಪುಷ್ಟಿ.

31 ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು ಜ್ಞಾನಿಗಳ ನಡುವೆ ನೆಲೆಗೊಳ್ಳುವನು.

32 ಶಿಕ್ಷೆಯನ್ನೊಲ್ಲದವನು ತನ್ನನ್ನೇ ನಿರಾಕರಿಸುವನು; ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು.

33 ಯೆಹೋವನ ಭಯವೇ ಜ್ಞಾನೋಪದೇಶ; ಗೌರವಕ್ಕೆ ಮೊದಲು ವಿನಯ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು