Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 13 - ಕನ್ನಡ ಸತ್ಯವೇದವು J.V. (BSI)

1 ಜ್ಞಾನಿಯಾದ ಮಗನು ತಂದೆಯ ಶಿಕ್ಷೆಯನ್ನು ಕೇಳುವನು: ಧರ್ಮನಿಂದಕನೋ ಗದರಿಕೆಯನ್ನು ಕೇಳನು.

2 ಬಾಯ ಫಲವಾಗಿ ಮನುಷ್ಯನು ಸುಖವನ್ನನುಭವಿಸುವನು; ಬಲಾತ್ಕಾರವೇ ದ್ರೋಹಿಗಳ ಕೋರಿಕೆ.

3 ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.

4 ಸೋಮಾರಿಯ ಆಶೆಯು ವ್ಯರ್ಥ; ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.

5 ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಮಾಡಲೊಲ್ಲನು; ದುಷ್ಟನ ನಡತೆಯು ಹೇಸಿಕೆಗೂ ನಾಚಿಕೆಗೂ ಆಸ್ಪದ.

6 ಧರ್ಮವು ನಿರ್ದೋಷಿಯನ್ನು ಕಾಯುವದು; ಅಧರ್ಮವು ದೋಷಿಯನ್ನು ಕೆಡವಿಬಿಡುವದು.

7 ಒಬ್ಬನು ಧನವನ್ನು ಸಂಗ್ರಹಿಸಿದರೂ ಏನೂ ಇಲ್ಲದ ದರಿದ್ರನೇ; ಮತ್ತೊಬ್ಬನು ಧನವನ್ನೆಲ್ಲಾ ವ್ಯಯಮಾಡಿ ಬಡವನಾದರೂ ಬಹು ಐಶ್ವರ್ಯವಂತನೇ.

8 ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಈಡು; ಬಡವನಿಗೆ ಯಾವ ಬೆದರಿಕೆಯೂ ಇಲ್ಲ.

9 ಶಿಷ್ಟರ ಬೆಳಕು ಬೆಳಗುವದು; ದುಷ್ಟರ ದೀಪವು ಆರುವದು.

10 ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.

11 ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವದು; ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವದು.

12 ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.

13 [ದೇವರ] ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸುಫಲವನ್ನು ಹೊಂದುವನು.

14 ಜ್ಞಾನಿಯ ಬೋಧೆ ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.

15 ಸುಬುದ್ಧಿಯು ದಯಾಸ್ಪದವು; ದ್ರೋಹಿಯ ಮಾರ್ಗವು ನಾಶಕರ.

16 ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು; ಮೂಢನು ತನ್ನ ಮೂರ್ಖತನವನ್ನು ಡಂಭವಾಗಿ ತೋರ್ಪಡಿಸುವನು.

17 ಕೆಟ್ಟ ದೂತನು ಕೇಡಿಗೆ ಬೀಳುವನು; ನಂಬಿಕೆಯಾದ ರಾಯಭಾರಿಯು ಕ್ಷೇಮಕರನು.

18 ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ; ಗದರಿಕೆಯನ್ನು ಗಮನಿಸುವವನಿಗೆ ಮಾನ.

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವದು ಮೂಢರಿಗೆ ಕಹಿ.

20 ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.

21 ಅಮಂಗಳವು ಪಾಪಿಗಳನ್ನು ಹಿಂಬಾಲಿಸುವದು; ಮಂಗಳವು ಸಜ್ಜನರಿಗೆ ಪ್ರತಿಫಲವಾಗುವದು.

22 ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ; ಪಾಪಿಯ ಸೊತ್ತು ಸಜ್ಜನರಿಗೆ ಗಂಟು.

23 ಬಡವರಿಗೆ ಬಂಜರು ಭೂವಿುಯೂ ಬಹು ಬೆಳೆಯನ್ನೀಯುವದು; ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.

24 ಬೆತ್ತ ಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ವಿುತ್ರ.

25 ಶಿಷ್ಟನು ಹೊಟ್ಟೆತುಂಬಾ ಉಣ್ಣುವನು; ದುಷ್ಟನ ಹೊಟ್ಟೆ ಹಸಿದಿರುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು