ಜ್ಞಾನೋಕ್ತಿಗಳು 12 - ಕನ್ನಡ ಸತ್ಯವೇದವು J.V. (BSI)1 ತಿಳುವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ; ಪಶುಪ್ರಾಯನು ಗದರಿಕೆಯನ್ನು ದ್ವೇಷಿಸುತ್ತಾನೆ. 2 ಯೆಹೋವನು ಒಳ್ಳೆಯವನಿಗೆ ದಯೆಮಾಡುವನು; ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು. 3 ಯಾವನೂ ದುಷ್ಟತನದಿಂದ ಸ್ಥಿರನಾಗನು; ಶಿಷ್ಟನು ಯಾವಾಗಲೂ ದೃಢಮೂಲನೇ. 4 ಗುಣವಂತೆಯು ಪತಿಯ ತಲೆಗೆ ಕಿರೀಟ; ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ. 5 ಶಿಷ್ಟರ ಉದ್ದೇಶ ನ್ಯಾಯ; ದುಷ್ಟರ ಆಲೋಚನೆ ಮೋಸ. 6 ಕೆಟ್ಟವರ ಮಾತು ರಕ್ತಕ್ಕೆ ಹೊಂಚು; ಯಥಾರ್ಥವಂತರ ನುಡಿ ರಕ್ಷಣೆ. 7 ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು; ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವದು. 8 ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು; ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು. 9 ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯು ಲೇಸು. 10 ಶಿಷ್ಟನು ತನ್ನ ದನದ ಕ್ಷೇಮವನ್ನು ಲಕ್ಷಿಸುತ್ತಾನೆ; ದುಷ್ಟನ ವಾತ್ಸಲ್ಯವೋ ಕ್ರೂರತನವೇ. 11 ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು; ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ. 12 ಕೆಡುಕರ ಕೊಳ್ಳೆ ದುಷ್ಟರಿಗೆ ಇಷ್ಟ; ಶಿಷ್ಟರ ಬುಡ ಫಲದಾಯಕ. 13 ದುಷ್ಟನು ತುಟಿಗಳ ದೋಷದಿಂದ ಬೋನಿಗೆ ಬೀಳುವನು; ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು. 14 ಬಾಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನನುಭವಿಸುವನು; ಅವನ ಕೈಕೆಲಸದ ಫಲವು ಅವನಿಗೇ ಪ್ರಾಪ್ತವಾಗುವದು. 15 ಮೂರ್ಖನ ನಡತೆ ಅವನ ಗಣನೆಗೆ ಸರಿ; ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು. 16 ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವದು; ಜಾಣನು ಅವಮಾನವನ್ನು ಮರೆಮಾಡುವನು. 17 ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು; ಸುಳ್ಳು ಸಾಕ್ಷಿಯು ಅಸತ್ಯಮಾಡುವನು. 18 ಕತ್ತಿ ತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು. 19 ಸತ್ಯದ ತುಟಿ ಶಾಶ್ವತ; ಸುಳ್ಳಿನ ನಾಲಿಗೆ ಕ್ಷಣಿಕ. 20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ. 21 ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು; ದುರ್ಜನರಿಗೆ ಕೇಡು ತುಂಬಿತುಳುಕುವದು. 22 ಸುಳ್ಳುತುಟಿ ಯೆಹೋವನಿಗೆ ಹೇಸು; ಸತ್ಯವಂತರು ಆತನಿಗೆ ಲೇಸು. 23 ಜಾಣನು ತಿಳಿದದ್ದನ್ನು ಗುಪ್ತಪಡಿಸುವನು; ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವದು. 24 ಚುರುಕುಗೈಯವನಿಗೆ ರಾಜ್ಯಾಧಿಕಾರ; ಮೈಗಳ್ಳನಿಗೆ ಬಿಟ್ಟಿಯ ಬದುಕು. 25 ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು. 26 ಸನ್ಮಾರ್ಗಿಯು ನೆರೆಯವನಿಗೆ ಮಾರ್ಗ ತೋರಿಸುವನು; ದುರ್ಮಾರ್ಗಿಯು ಮಾರ್ಗತಪ್ಪಿಸುವನು. 27 ಮೈಗಳ್ಳನು ಹಿಡಿದ ಬೇಟೆಯನ್ನೂ ಬೇಯಿಸನು; ಚಟುವಟಿಕೆಯವನಿಗೆ ಅಮೂಲ್ಯಸಂಪತ್ತು ದೊರಕುವದು. 28 ಧರ್ಮಮಾರ್ಗದಿಂದ ಜೀವಲಾಭವು; ಆ ಸುಪಥಮಾರ್ಗವು ಅಮರಣವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India