ಜ್ಞಾನೋಕ್ತಿಗಳು 11 - ಕನ್ನಡ ಸತ್ಯವೇದವು J.V. (BSI)1 ಮೋಸದ ತ್ರಾಸು ಯೆಹೋವನಿಗೆ ಅಸಹ್ಯ; ನ್ಯಾಯದ ತೂಕ ಆತನಿಗೆ ಸಂತೋಷ. 2 ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ. 3 ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ; ವಂಚಕರಿಗೆ ವಕ್ರತೆಯು ನಾಶಕ. 4 ಧನವು ಕೋಪದ ದಿನದಲ್ಲಿ ವ್ಯರ್ಥ; ಧರ್ಮವು ಮರಣವಿಮೋಚಕ. 5 ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವದು; ದೋಷಿಯು ತನ್ನ ದೋಷದಿಂದಲೇ ಬಿದ್ದುಹೋಗುವನು. 6 ಧರ್ಮವು ಯಥಾರ್ಥವಂತರನ್ನು ಉದ್ಧರಿಸುವದು; ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು. 7 ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವದು; ಬಲದ ಮೇಲಣ ನಂಬಿಕೆಯು ಬಿದ್ದುಹೋಗುವದು. 8 ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು; ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು. 9 ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು; ಶಿಷ್ಟನು ತಿಳುವಳಿಕೆಯಿಂದ ಉದ್ಧಾರವಾಗುವನು. 10 ಸಜ್ಜನರು ಸುಖಿಗಳಾದರೆ ಪಟ್ಟಣಕ್ಕೆ ಉಲ್ಲಾಸ; ದುರ್ಜನರು ಹಾಳಾದರೆ ಜಯಘೋಷ. 11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವದು, ಕೆಟ್ಟವರ ಬಾಯಿಂದ ಕೆಡವಲ್ಪಡುವದು. 12 ನೆರೆಯವನನ್ನು ಹೀನೈಸುವವನು ಬುದ್ಧಿಹೀನನು; ವಿವೇಕಿಯು ಬಾಯಿಬಿಡನು. 13 ಚಾಡಿಕೋರನು ಗುಟ್ಟು ರಟ್ಟುಮಾಡುವನು; ನಂಬಿಗಸ್ತನು ಸಂಗತಿಯನ್ನು ಗುಪ್ತಪಡಿಸುವನು. 14 ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದುಹೋಗುವದು; ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವದು. 15 ಹೆರರಿಗೆ ಹೊಣೆಯಾದರೆ ಹಾನಿ; ಹೊಣೆಗೆ ಅಸಹ್ಯಪಟ್ಟರೆ ನಿರ್ಭಯ. 16 ದಯಾಳುವಾದ ಹೆಂಗಸು ಮಾನವನ್ನು ಪಡೆಯುವಳು; ಬಲಾತ್ಕಾರಿಗಳು ಧನವನ್ನು ಮಾತ್ರ ಆರ್ಜಿಸುವರು. 17 ಪರೋಪಕಾರವು ತನಗೂ ಉಪಕಾರ; ಕ್ರೂರನು ತನ್ನ ಶರೀರವನ್ನೂ ಹಿಂಸಿಸುವನು. 18 ಅಧರ್ಮಿಯ ಸಂಬಳವು ಜೊಳ್ಳು; ಧರ್ಮವನ್ನು ಬಿತ್ತುವವನ ಲಾಭವು ಗಟ್ಟಿ. 19 ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ. 20 ವಕ್ರಹೃದಯರು ಯೆಹೋವನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ದಯೆಗೆ ಆಸ್ಪದರು. 21 ದುಷ್ಟನಿಗೆ ದಂಡನೆ ಖಂಡಿತ; ಶಿಷ್ಟವಂಶಕ್ಕೆ ರಕ್ಷಣೆ. 22 ಹಂದಿಯ ಮೂತಿಗೆ ಚಿನ್ನದ ಮೂಗುತಿಯು ಹೇಗೋ ಅವಿವೇಕಳಿಗೆ ಸೌಂದರ್ಯವು ಹಾಗೆ. 23 ಸಜ್ಜನರ ಆಶೆಯು ಮಂಗಳಾಸ್ಪದ; ದುರ್ಜನರ ನಿರೀಕ್ಷೆಯು ರೋಷಾಸ್ಪದ. 24 ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ; ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ. 25 ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು. 26 ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ; ಮಾರುವವನ ತಲೆಯ ಮೇಲೆ ಆಶೀರ್ವಾದ. 27 ಧರ್ಮಕ್ಕೆ ಆತುರಪಡುವವನಿಗೆ ದಯೆ; ಕೇಡನ್ನು ಹುಡುಕುವವನಿಗೆ ಕೇಡೇ. 28 ಧನವನ್ನೇ ನಂಬಿದವನು ಬಿದ್ದು ಹೋಗುವನು; ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು. 29 ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು; ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು; 30 ಧರ್ಮಾತ್ಮನ ಫಲ ಜೀವವೃಕ್ಷ; ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು. 31 ಶಿಷ್ಟನೇ ಭೂವಿುಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ ದುಷ್ಟನೂ ಪಾಪಿಯೂ ಅನುಭವಿಸುವರು ಎಂದು ಹೇಳಬೇಕಾಗಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India