Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 9 - ಕನ್ನಡ ಸತ್ಯವೇದವು J.V. (BSI)


ಶತ್ರುಬಾಧೆಯ ಕಾಲದ ಪ್ರವಾದನೆಗಳು ( 9—14 ) ಅರಾಮ್, ತೂರ್, ಫಿಲಿಷ್ಟಿಯ ಈ ರಾಜ್ಯಗಳಿಗಾಗುವ ದಂಡನೆ

1 ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ, ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ, ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ

2 ದಮಸ್ಕದ ಪಕ್ಕದಲ್ಲಿನ ಹಮಾತಿನಲ್ಲಿಯೂ ಬಹು ಜಾಣತನದವುಗಳು ಎಂದುಕೊಂಡಿರುವ ತೂರ್ ಚೀದೋನ್ ಪಟ್ಟಣಗಳಲ್ಲಿಯೂ ಕಣ್ಣಿಟ್ಟಿದ್ದಾನೆ.

3 ತೂರ್ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ದೂಳಿನಂತೆಯೂ ಬಂಗಾರವನ್ನು ಬೀದಿಯ ಬದಿಯಂತೆಯೂ ರಾಶಿರಾಶಿ ಮಾಡಿಕೊಂಡಿದೆ.

4 ಆಹಾ, ಕರ್ತನು ಅದರ ಆಸ್ತಿಯನ್ನು ಆಕ್ರವಿುಸಿ ಪೌಳಿಗೋಡೆಯನ್ನು ಸಮುದ್ರದೊಳಕ್ಕೆ ಹೊಡೆದು ಹಾಕುವನು; ಪಟ್ಟಣವು ಬೆಂಕಿಗೆ ತುತ್ತಾಗುವದು.

5 ಅಷ್ಕೆಲೋನು ಇದನ್ನು ನೋಡಿ ಹೆದರುವದು; ಗಾಜವು ಸಹ ಅತಿಸಂಕಟಪಡುವದು; ಎಕ್ರೋನು ನಿರೀಕ್ಷೆಗೆಟ್ಟು ಬಹು ವ್ಯಥೆಗೆ ಒಳಗಾಗುವದು; ಗಾಜಕ್ಕೆ ರಾಜನೇ ಇಲ್ಲವಾಗುವನು; ಅಷ್ಕೆಲೋನು ನಿರ್ಜನವಾಗುವದು;

6 ಅಷ್ಡೋದಿನಲ್ಲಿ ವಿುಶ್ರಜಾತಿಯವರು ವಾಸಮಾಡುವರು; ಹೀಗೆ ಫಿಲಿಷ್ಟಿಯದ ಗರ್ವವನ್ನು ಭಂಗಪಡಿಸುವೆನು.

7 ಅವರು ಸವಿಯುವ ರಕ್ತವನ್ನು ಬಾಯೊಳಗಿಂದ ತೆಗೆದುಬಿಡುವೆನು; ಅವರು ಕಚ್ಚುವ ಅಸಹ್ಯಪದಾರ್ಥಗಳನ್ನು ಹಲ್ಲುಗಳ ಮಧ್ಯದಿಂದ ಕಿತ್ತುಹಾಕುವೆನು; ಅವರೂ ಇಸ್ರಾಯೇಲಿನ ದೇವರಿಗೆ ಶೇಷಜನವಾಗಿ ನಿಲ್ಲುವರು; ಯೆಹೂದದಲ್ಲಿ ಕುಲಪಾಲಕನಂತಿರುವರು; ಎಕ್ರೋನಿನವರು ಯೆಬೂಸಿಯರ ಹಾಗಿರುವರು.

8 ಯಾರೂ ಹಾದುಹೋಗಿ ಬಾರದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಾಗಿರುವೆನು; ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ಬೀಳನು; ಏಕಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ.


ಸಮಾಧಾನಪ್ರದರಾಜನು

9 ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.

10 ನಾನು ಎಫ್ರಾಯೀವಿುನ ರಥಬಲವನ್ನೂ ಯೆರೂಸಲೇವಿುನ ಅಶ್ವಬಲವನ್ನೂ ನಿಶ್ಶೇಷಮಾಡುವೆನು; ಯುದ್ಧದ ಬಿಲ್ಲು ಇಲ್ಲವಾಗುವದು; ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವದು; ಆತನ ಆಳ್ವಿಕೆಯು ಸಮುದ್ರದಿಂದ ಸಮುದ್ರದವರೆಗೂ [ಯೂಫ್ರೇಟೀಸ್] ನದಿಯಿಂದ ಭೂವಿುಯ ಕಟ್ಟಕಡೆಯವರೆಗೂ ಹರಡಿಕೊಂಡಿರುವದು.


ಇಸ್ರಾಯೇಲ್ಯರು ಗ್ರೀಕರನ್ನು ಜಯಿಸುವದು

11 [ನನ್ನ ಜನವೇ,] ನೀನು ಒಡಂಬಡಿಕೆ ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ ಸೆರೆಯಾಗಿರುವ ನಿನ್ನವರನ್ನು ನೀರಿಲ್ಲದ ಆ ಬಾವಿಯೊಳಗಿಂದ ಬರಮಾಡುವೆನು.

12 ಸುನಿರೀಕ್ಷೆಯುಂಟಾದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರಡರಷ್ಟು [ಸುಖವನ್ನು] ದಯಪಾಲಿಸುವೆನು ಎಂದು ಈಗಲೂ ಪ್ರಕಟಿಸುತ್ತೇನೆ.

13 ಯೆಹೂದವೆಂಬ ಬಿಲ್ಲನ್ನು ಬೊಗ್ಗಿಸಿಕೊಂಡಿದ್ದೇನೆ, ಅದರಲ್ಲಿ ಎಫ್ರಾಯೀಮನ್ನು ಹೂಡಿದ್ದೇನೆ; ಚೀಯೋನೇ, ನಾನು ನಿನ್ನ ಸಂತಾನವನ್ನು ಗ್ರೀಕ್ ಸಂತಾನಕ್ಕೆ ವಿರುದ್ಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯನ್ನಾಗಿ ಮಾಡುವೆನು.

14 ಯೆಹೋವನು ಸ್ವಜನರಿಗಾಗಿ ಅವರ ಮೇಲ್ಗಡೆ ಕಾಣಿಸಿಕೊಳ್ಳುವನು; ಆತನ ಬಾಣವು ಸಿಡಿಲಿನಂತೆ ಹಾರುವದು; ಕರ್ತನಾದ ಯೆಹೋವನು ತುತೂರಿಯನ್ನೂದಿ ದಕ್ಷಿಣಪ್ರಾಂತದ ಬಿರುಗಾಳಿಗಳೊಡನೆ ನುಗ್ಗುವನು.

15 ಸೇನಾಧೀಶ್ವರ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು [ಶತ್ರುಗಳನ್ನು] ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; [ರಕ್ತವನ್ನು] ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ ಯಜ್ಞವೇದಿಯ ಮೂಲೆಗಳ ಹಾಗೂ ರಕ್ತಪೂರ್ಣರಾಗಿರುವರು.

16 ಆ ದಿನದಲ್ಲಿ ಅವರ ದೇವರಾದ ಯೆಹೋವನು ಅವರನ್ನು ತನ್ನ ಹಿಂಡಾಗಿರುವ ಜನರೆಂದು ರಕ್ಷಿಸುವನು; ಅವರು ಕಿರೀಟದಲ್ಲಿನ ರತ್ನಗಳಂತೆ ತಮ್ಮ ದೇಶದಲ್ಲಿ ಥಳಥಳಿಸುವರು.

17 ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು! ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು