Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 5 - ಕನ್ನಡ ಸತ್ಯವೇದವು J.V. (BSI)


ಹಾರುವ ಸುರಳಿಯ ಕನಸು

1 ಪುನಃ ನಾನು ಕಣ್ಣೆತ್ತಿ ನೋಡಲು ಇಗೋ, ಹಾರುತ್ತಿರುವ ಒಂದು ಸುರಳಿಯು ಕಾಣಿಸಿತು.

2 ಅವನು ನನ್ನನ್ನು - ನಿನಗೆ ಏನು ಕಾಣಿಸುತ್ತಿದೆ ಎಂದು ಕೇಳಿದ್ದಕ್ಕೆ - ಹಾರುತ್ತಿರುವ ಒಂದು ಸುರಳಿಯು ಕಾಣಿಸುತ್ತದೆ; ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದುತ್ತರ ಕೊಟ್ಟೆನು.

3 ಆಗ ಅವನು ನನಗೆ - ಇದು ದೇಶದ ಮೇಲೆಲ್ಲಾ ಹೊರಟು ಬಂದಿರುವ ಶಾಪ; ಇದಕ್ಕೆ ತಕ್ಕಂತೆ ಪ್ರತಿಯೊಬ್ಬ ಕಳ್ಳನು ದೇಶದಿಂದ ತೊಡೆಯಲ್ಪಡುವನು; ಇದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬ ಸುಳ್ಳುಸಾಕ್ಷಿಯೂ ದೇಶದಿಂದ ತೊಡೆಯಲ್ಪಡುವನು.

4 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ಅಪ್ಪಣೆಯಂತೆ ಇದು ಹೊರಟು ಕಳ್ಳನ ಮನೆಯೊಳಗೂ ನನ್ನ ಹೆಸರೆತ್ತಿ ಸುಳ್ಳುಸಾಕ್ಷಿ ಹೇಳುವವನ ಮನೆಯೊಳಗೂ ನುಗ್ಗಿ ನಟ್ಟನಡುವೆ ನೆಲೆಗೊಂಡು ಅದನ್ನು ಕಲ್ಲುಮರ ಸಹಿತವಾಗಿ ನಾಶಮಾಡುವದು ಎಂದು ಹೇಳಿದನು.


ಕೊಳಗದೊಳಗಣ ಹೆಂಗಸಿನ ವಿಷಯವಾದ ಕನಸು

5 ಅನಂತರ ವಿವರಿಸುವ ದೂತನು ಹತ್ತಿರ ಬಂದು - ಕಂಡುಬರುತ್ತಿರುವ ಆ ವಸ್ತು ಏನೆಂದು ನೋಡು ಎಂಬದಾಗಿ ನನಗೆ ಹೇಳಲು ನಾನು -

6 ಏನದು ಎಂದು ಕೇಳಿದ್ದಕ್ಕೆ ಅವನು - ಕಂಡುಬರುತ್ತಿರುವ ಆ ವಸ್ತು ಒಂದು ಕೊಳಗಪಾತ್ರೆ ಎಂದು ತಿಳಿಸಿದನು. ಅಲ್ಲದೆ - ಅದು ಪೂರ್ಣದೇಶದಲ್ಲಿನ ಪಾಪಿಗಳ ಅಧರ್ಮವೇ ಅಂದನು.

7 ಇಗೋ, ತಟ್ಟೆಯಾಕಾರವಾದ ಸೀಸದ ಮುಚ್ಚಳವು ಎತ್ತಲ್ಪಡಲಾಗಿ ಆಹಾ, ಒಬ್ಬ ಹೆಂಗಸು ಕೊಳಗದೊಳಗೆ ಕೂತಿದ್ದಳು.

8 ಅವನು ಕಂಡು - ಇವಳು ಪಾಪಮೂರ್ತಿ ಎಂದು ಹೇಳಿ ಅವಳನ್ನು ಕೊಳಗದೊಳಗೆ ಅದುವಿು ಸೀಸದ ಭಾರಿ ಮುಚ್ಚಳವನ್ನು ಅದರ ಬಾಯಿಗೆ ಹಾಕಿಬಿಟ್ಟನು.

9 ನಾನು ಕಣ್ಣೆತ್ತಿನೋಡಲು ಆಹಾ, ಕೊಕ್ಕರೆಯ ರೆಕ್ಕೆಯಂತಿರುವ ರೆಕ್ಕೆಯುಳ್ಳ ಇಬ್ಬರು ಹೆಂಗಸರು ಕಂಡುಬಂದರು; ಅವರ ರೆಕ್ಕೆಗಳೊಳಗೆ ಗಾಳಿಯು ತುಂಬಿಕೊಂಡಿತ್ತು; ಅವರು ಪೀಪಾಯಿಯನ್ನು ಭೂಮ್ಯಾಕಾಶಗಳ ಅಂತರಾಳದಲ್ಲಿ ಎತ್ತಿಕೊಂಡು ಹೋದರು.

10 ಅವರು ಕೊಳಗವನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ ಎಂದು ನನಗೆ ವಿವರಿಸುವ ದೇವದೂತನನ್ನು ನಾನು ಕೇಳಿದ್ದಕ್ಕೆ

11 ಅವನು ನನಗೆ - ಶಿನಾರ್ ದೇಶದಲ್ಲಿ ಅವಳಿಗೆ ಮನೆಕಟ್ಟುವದಕ್ಕಾಗಿ ಹೋಗುತ್ತಾರೆ; ಅದು ಸಿದ್ಧವಾದಾಗ ಆ ಸ್ವಂತ ಸ್ಥಳದಲ್ಲಿ ನಿಲ್ಲಿಸಲ್ಪಡುವಳು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು