Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 13 - ಕನ್ನಡ ಸತ್ಯವೇದವು J.V. (BSI)


ದೇಶದ ಶುದ್ಧೀಕರಣ, ವಿುಥ್ಯಾಪ್ರವಾದನೆಯ ನಿರಾಕರಣ

1 ಆ ದಿನದಲ್ಲಿ ಪಾಪವನ್ನೂ ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ ಯೆರೂಸಲೇವಿುನವರಿಗೂ ತೆರೆದಿರುವದು.

2 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನಾನು ವಿಗ್ರಹಗಳನ್ನು ದೇಶದೊಳಗಿಂದ ನಿರ್ನಾಮಮಾಡುವೆನು, ಅವು ಇನ್ನು ಯಾರ ನೆನಪಿಗೂ ಬಾರವು; ಅಲ್ಲದೆ ಪ್ರವಾದಿಗಳನ್ನೂ ದುರಾತ್ಮವನ್ನೂ ದೇಶದೊಳಗಿಂದ ತೊಲಗಿಸಿಬಿಡುವೆನು.

3 ಆಗ ಯಾವನಾದರೂ ಮತ್ತೆ ಪ್ರವಾದನೆಮಾಡಿದರೆ ಅವನ ಹೆತ್ತ ತಾಯಿತಂದೆಗಳು ಅವನಿಗೆ - ನೀನುಳಿಯಬೇಡ; ಯೆಹೋವನ ಹೆಸರೆತ್ತಿ ಸುಳ್ಳಾಡುತ್ತೀ ಎಂದು ಹೇಳಿ ಆ ಹೆತ್ತ ತಾಯಿತಂದೆಗಳೇ ಅವನ ಪ್ರವಾದನೆಯ ನಿವಿುತ್ತ ಅವನನ್ನು ಇರಿದುಬಿಡುವರು.

4 ಆದಿನದಲ್ಲಿ ಯಾವ ಪ್ರವಾದಿಯೇ ಆಗಲಿ ಪ್ರವಾದನೆ ಮಾಡಬೇಕೆಂದಿರುವಾಗ ತನಗಾದ ದರ್ಶನವನ್ನು ಪ್ರಕಟಿಸಲು ನಾಚಿಕೆಪಡುವನು; ಯಾವನೂ ಮೋಸಕ್ಕಾಗಿ ಕಂಬಳಿಯನ್ನು ಹೊದ್ದುಕೊಳ್ಳನು;

5 ಒಬ್ಬನು - ನಾನು ಪ್ರವಾದಿಯಲ್ಲ, ಹೊಲದ ಕೆಲಸದವನು; ಚಿಕ್ಕತನದಿಂದಲೂ ಗುಲಾಮನಾಗಿದ್ದೇನೆ ಎಂದು ಹೇಳಲು

6 ಮತ್ತೊಬ್ಬನು ಅವನನ್ನು - ನಿನ್ನ ಎದೆಯ ಮೇಲಿನ ಈ ಗಾಯಗಳೇನು ಎಂದು ಕೇಳಿದರೆ ಅವನು - ವಿುತ್ರರ ಮನೆಯಲ್ಲಿ ನನಗಾದ ಗಾಯಗಳು ಎಂದುತ್ತರ ಕೊಡುವನು.


ಮಂದೆಗಾಗುವ ಹಿಂಸೆ, ಶೇಷಕ್ಕೆ ಲಭಿಸುವ ಸುಫಲ

7 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಖಡ್ಗವೇ, ನಾನು ನೇವಿುಸಿದ ಕುರುಬನೂ ನನ್ನ ಸಂಗಡಿಗನೂ ಆಗಿರುವವನಿಗೆ ವಿರುದ್ಧವಾಗಿ ಎಚ್ಚರಗೊಳ್ಳು; ಕುರುಬನನ್ನು ಹೊಡೆ, ಕುರಿಗಳು ಚದರಿಹೋಗುವವು; ಮರಿಗಳ ಮೇಲೂ ಕೈಮಾಡಬೇಕೆಂದಿದ್ದೇನೆ.

8 ದೇಶದೊಳಗೆಲ್ಲಾ ಮೂರರಲ್ಲಿ ಎರಡು ಭಾಗದವರು ಹತರಾಗಿ ಸಾಯುವರು, ಮೂರನೆಯ ಭಾಗದವರು ಅಲ್ಲಿ ಉಳಿಯುವರು; ಇದು ಯೆಹೋವನ ನುಡಿ.

9 ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿಮಾಡುವೆನು; ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು, ನಾನು ಆಲಿಸುವೆನು; ನಾನು - ಇವರು ನನ್ನ ಜನರು ಅಂದುಕೊಳ್ಳುವೆನು, ಅವರು - ನಮ್ಮ ದೇವರಾದ ಯೆಹೋವನೇ ಅನ್ನುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು