Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜೆಕರ್ಯ 10 - ಕನ್ನಡ ಸತ್ಯವೇದವು J.V. (BSI)


ಕಣಿಯವರಲ್ಲಿ ನಂಬಿಕೆ ಇಡಕೂಡದು

1 ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ; ಯೆಹೋವನೇ ವಿುಂಚುಗಳನ್ನು ಉಂಟುಮಾಡುತ್ತಾನೆ, ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ, ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.

2 ವಿಗ್ರಹಗಳು ನುಡಿಯುವದು ಜೊಳ್ಳು; ಕಣಿಯವರು ಕಾಣುವದು ಸುಳ್ಳು, ತಿಳಿಸುವ ಕನಸುಗಳು ಕಲ್ಪಿತ, ಹೇಳುವ ಸಮಾಧಾನವು ವ್ಯರ್ಥ, ಆದದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.


ಇಸ್ರಾಯೇಲಿನ ನೂತನ ಬಲ

3 ನನ್ನ ಕೋಪವು ಕುರುಬರ ಮೇಲೆ ಧಗಧಗಿಸುತ್ತದೆ, ನಾನು ಹೋತಗಳನ್ನು ದಂಡಿಸುವೆನು; ಸೇನಾಧೀಶ್ವರ ಯೆಹೋವನು ತನ್ನ ಮಂದೆಯಾದ ಯೆಹೂದ ವಂಶವನ್ನು ಪರಾಂಬರಿಸಿ ಘನವಾದ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವನು.

4 ಆ ವಂಶದಿಂದ ಮೂಲೆಗಲ್ಲು, ಆ ವಂಶದಿಂದ ಮೊಳೆ, ಆ ವಂಶದಿಂದ ಯುದ್ಧದ ಬಿಲ್ಲು, ಅಂತು ಆ ವಂಶದೊಳಗಿಂದ ಸಕಲ ಅಧಿಕಾರಿಗಳು ಉಂಟಾಗುವರು.

5 ಇವರು ವೀರರಾಗಿ ರಣದೊಳಗೆ [ಶತ್ರುಗಳನ್ನು] ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು; ಯೆಹೋವನು ತಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು; ಎದುರಿಸುವ ಸವಾರರು ಭಂಗಪಡುವರು.

6 ನಾನು ಯೆಹೂದ ವಂಶವನ್ನು ಬಲಗೊಳಿಸಿ ಯೋಸೇಫ ವಂಶವನ್ನು ಉದ್ಧರಿಸುವೆನು; ನನ್ನ ಕನಿಕರವು ಅವರ ಮೇಲೆ ಇರುವದರಿಂದ ಅವರನ್ನು ಹಿಂದಕ್ಕೆ ಬರಮಾಡುವೆನು; ಆಗ ನಾನು ಅವರನ್ನು ತಳ್ಳಿಬಿಟ್ಟದ್ದು ಇಲ್ಲದಂತಾಗುವದು; ನಾನು ಅವರ ದೇವರಾದ ಯೆಹೋವನಾಗಿದ್ದೇನಲ್ಲಾ, ಅವರ ಮೊರೆಯನ್ನು ಲಾಲಿಸುವೆನು.


ಚದರಿದವರ ಹಿಂದಿರುಗುವಿಕೆ

7 ಎಫ್ರಾಯೀಮ್ಯರು ಶೂರನಂತಿರುವರು, ದ್ರಾಕ್ಷಾರಸಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವದು; ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು, ಅವರ ಹೃದಯವು ಯೆಹೋವನಲ್ಲಿ ಆನಂದಿಸುವದು.

8 ನಾನು ಅವರನ್ನು ಸಿಳ್ಳುಹಾಕಿ ಕರೆದು ಕೂಡಿಸುವೆನು; ಅವರನ್ನು ವಿಮೋಚಿಸಿದ್ದೇನಲ್ಲಾ; ಅವರು ಹಿಂದೆ ವೃದ್ಧಿಯಾದಂತೆ ಮುಂದೆಯೂ ವೃದ್ಧಿಯಾಗುವರು.

9 ನಾನು ಅವರನ್ನು ಜನಾಂಗಗಳೊಳಗೆ ಚೆಲ್ಲಿದರೂ ಅವರು ದೂರದೇಶಗಳಲ್ಲಿ ನನ್ನನ್ನು ಸ್ಮರಿಸಿಕೊಂಡು ಸಂತಾನಸಮೇತವಾಗಿ ಬದುಕಿ ಬಾಳಿ ಹಿಂದಿರುಗಿ ಬರುವರು.

10 ನಾನು ಅವರನ್ನು ಐಗುಪ್ತ ದೇಶದೊಳಗಿಂದ ಹಿಂದಕ್ಕೆ ಕರತರುವೆನು; ಅಶ್ಶೂರದಿಂದ ಕೂಡಿಸುವೆನು; ಗಿಲ್ಯಾದುಲೆಬನೋನುಗಳ ಪ್ರಾಂತಕ್ಕೆ ಬರಮಾಡುವೆನು; ಅವರಿಗೆ ಸಾಕಾದಷ್ಟು ಸ್ಥಳ ಸಿಕ್ಕದು.

11 ಅವರು ಕಷ್ಟವೆಂಬ ಕಡಲನ್ನು ದಾಟಿ ಬರುವರು, ಅಲ್ಲಕಲ್ಲೋಲವಾದ ಸಮುದ್ರವನ್ನು ಭೇದಿಸಿಬಿಡುವರು, ನೈಲ್‍ನದಿಯೆಲ್ಲಾ ತಳದ ತನಕ ಒಣಗುವದು, ಅಶ್ಶೂರದ ಗರ್ವವು ತಗ್ಗಿಸಲ್ಪಡುವದು, ಐಗುಪ್ತದ ರಾಜದಂಡವು ತಪ್ಪಿಹೋಗುವದು.

12 ಅವರು ಯೆಹೋವನಲ್ಲಿ ಬಲಗೊಳ್ಳುವರು, ಆತನ ಹೆಸರಿನಲ್ಲಿ ನಡೆದುಕೊಳ್ಳುವರು; ಇದು ಯೆಹೋವನ ನುಡಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು