ಚೆಫನ್ಯ 2 - ಕನ್ನಡ ಸತ್ಯವೇದವು J.V. (BSI)ಯೆಹೂದಕ್ಕೆ ಪ್ರಬೋಧನೆಯೂ ಖಂಡನೆಯೂ ( 2.1—3.8 ) ಯೆಹೋವನನ್ನು ಶರಣುಹೊಗಲು ಪ್ರೇರಣೆ 1 ನಾಚಿಕೆಗೇಡಿಯ ಜನಾಂಗದವರೇ, ತೀರ್ಪು ಫಲಿಸುವದರೊಳಗೆ ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ, ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು ಸೇರಿಬನ್ನಿರಿ, ಕೂಡಿಕೊಳ್ಳಿರಿ; 2 ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ. 3 ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದು ವೇಳೆ ಮರೆಯಾಗುವಿರಿ. ಫಿಲಿಷ್ಟಿಯದ ದುರ್ಗತಿ 4 ಗಾಜ ನಿರ್ಜನವಾಗುವದು, ಅಷ್ಕೆಲೋನ್ ಹಾಳಾಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಓಡಿಸಿಬಿಡುವರು, ಎಕ್ರೋನ್ ನಿರ್ಮೂಲವಾಗುವದು. 5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ! ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು. 6 ಸಮುದ್ರ ತೀರದ ಆ ಪ್ರಾಂತವು ಹುಲ್ಗಾವಲಾಗುವದು, ಕುರುಬರ ಹೊಂಡಗಳು, ಹಿಂಡುಗಳ ದೊಡ್ಡಿಗಳು, ಇವೇ ಅಲ್ಲಿರುವವು. 7 ಆ ಕರಾವಳಿಯು ಯೆಹೂದವಂಶಶೇಷದವರ ಪಾಲಾಗುವದು; ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು; ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು. ಅಮ್ಮೋನು ಮೋವಾಬುಗಳ ದುರ್ಗತಿ 8 ಮೋವಾಬ್ಯರೂ ಅಮ್ಮೋನ್ಯರೂ ಉಬ್ಬಟೆಯಿಂದ ನನ್ನ ಜನರ ಮೇರೆಯನ್ನು ಮೀರಿ ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ. 9 ಇಸ್ರಾಯೇಲ್ಯರ ದೇವರಾದ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಹೀಗಿರಲು, ನನ್ನ ಜೀವದಾಣೆ, ಸೊದೋವಿುನ ಗತಿಯೇ ಮೋವಾಬಿಗೂ ಆಗುವದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವದು; ಆ ಪ್ರಾಂತಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವವು; ನನ್ನ ಪ್ರಜೆಯಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು, ಅವು ನನ್ನ ಜನಶೇಷದವರಿಗೆ ಸ್ವಾಸ್ತ್ಯವಾಗುವವು. 10 ಆ ಪ್ರಾಂತಗಳವರು ಸೇನಾಧೀಶ್ವರ ಯೆಹೋವನ ಜನರನ್ನು ದೂಷಿಸಿ ಅವರ ಮೇಲೆ ಉಬ್ಬಿಕೊಂಡು ಬಂದದರಿಂದ ಅವರ ಹೆಮ್ಮೆಯ ನಿವಿುತ್ತವೇ ಅವರಿಗೆ ಈ ಗತಿಯಾಗುವದು. 11 ಯೆಹೋವನು ಅವರಿಗೆ ಭಯಂಕರವಾಗುವನು; ಲೋಕದ ದೇವರುಗಳನ್ನೆಲ್ಲಾ ಕ್ಷಯಿಸಿಬಿಡುವನು; ಸಮಸ್ತ ಜನರು, ಅಂದರೆ ಸಮುದ್ರ ಪ್ರಾಂತದ ನಿವಾಸಿಗಳಾದ ಸಕಲ ಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು. ಕೂಷಿನ ದುರ್ಗತಿ 12 ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ. ನಿನೆವೆಯ ದುರ್ಗತಿ 13 ಯೆಹೋವನು ಬಡಗಲಿಗೆ ಕೈಚಾಚಿ ಅಶ್ಶೂರವನ್ನು ಧ್ವಂಸಪಡಿಸುವನು; ನಿನೆವೆಯನ್ನು ಹಾಳುಮಾಡಿ ಮರುಭೂವಿುಯಂತೆ ಒಣಗಿಸಿಬಿಡುವನು. 14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು; ಕೊಕ್ಕರೆಯೂ ಮುಳ್ಳುಹಂದಿಯೂ ಅದರ ಬೋದಿಗೆಗಳಲ್ಲಿ ವಾಸಮಾಡಿಕೊಳ್ಳುವವು; ಕಿಟಕಿಗಳಲ್ಲಿ ಚಿಲಿಪಿಲಿಗಾನವು ಕೇಳಿಸುವದು; ಹೊಸ್ತಿಲುಗಳಲ್ಲಿ ಹಾಳುಬಡಿಯುವದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವದು. 15 ಈ ನಿನೆವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು ತನ್ನ ಹೃದಯದೊಳಗೆ - ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ ಅಂದುಕೊಳ್ಳುತ್ತಿತ್ತು; ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಹಕ್ಕೆಯಾಗಿದೆ! ಹಾದುಹೋಗುವವರೆಲ್ಲರೂ ಸಿಳ್ಳುಹಾಕಿ ಕೈಯಾಡಿಸುತ್ತಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India