Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಗಲಾತ್ಯದವರಿಗೆ 6 - ಕನ್ನಡ ಸತ್ಯವೇದವು J.V. (BSI)

1 ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೋ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.

2 ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.

3 ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ.

4 ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿವಿುತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿವಿುತ್ತದಿಂದಾಗುವದಿಲ್ಲ.

5 ಯಾಕಂದರೆ ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.

6 ದೇವರ ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶಮಾಡುವವನಿಗೆ ತನಗಿರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.

7 ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

8 ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

9 ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.

10 ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.


ಕಡೇ ಮಾತುಗಳು; ಪೌಲನು ಸ್ವಂತ ಕೈಯಿಂದ ಬರೆದವುಗಳು

11 ಇಗೋ, ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ.

12 ಬಹಿರಾಚಾರಗಳಿಂದ ಮಾನಪಡೆಯಬೇಕೆಂದಿರುವವರು ಸುನ್ನತಿಮಾಡಿಸಿಕೊಳ್ಳಿರಿ ಎಂಬದಾಗಿ ನಿಮ್ಮನ್ನು ಬಲಾತ್ಕರಿಸುತ್ತಾರೆ. ತಮಗೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ಹಿಂಸೆಯಾಗಬಾರದೆಂಬದೊಂದೇ ಅವರ ಉದ್ದೇಶ.

13 ಸುನ್ನತಿಮಾಡಿಸಿಕೊಳ್ಳುವ ತಾವಾದರೂ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವದಿಲ್ಲ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.

14 ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ. ಆತನ ಮೂಲಕ ಲೋಕವು ಶಿಲುಬೆಗೆ ಹಾಕಿಸಿಕೊಂಡು ನನ್ನ ಪಾಲಿಗೆ ಸತ್ತಿತು, ನಾನು ಶಿಲುಬೆಗೆ ಹಾಕಿಸಿಕೊಂಡು ಲೋಕದ ಪಾಲಿಗೆ ಸತ್ತೆನು.

15 ಸುನ್ನತಿಯಾಗುವದರಲ್ಲಿ ಏನೂ ಇಲ್ಲ, ಸುನ್ನತಿಯಾಗದೆ ಇರುವದರಲ್ಲಿಯೂ ಏನೂ ಇಲ್ಲ; ಹೊಸ ಸೃಷ್ಟಿಯೇ ಬೇಕು.

16 ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರಿಗೆ ಅಂದರೆ ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ ಕರುಣೆಯೂ ಆಗಲಿ.

17 ಇನ್ನು ಮೇಲೆ ಯಾರೂ ನನ್ನನ್ನು ತೊಂದರೆಪಡಿಸಬಾರದು, ನನ್ನ ದೇಹದಲ್ಲಿ ಯೇಸುವಿನ ಮುದ್ರೆಗಳು ಹಾಕಿರುತ್ತವಲ್ಲಾ.

18 ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು