Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಗಲಾತ್ಯದವರಿಗೆ 5 - ಕನ್ನಡ ಸತ್ಯವೇದವು J.V. (BSI)

1 ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.

2 ನೋಡಿರಿ, ಪೌಲನೆಂಬ ನಾನು ನಿಮಗೆ ಒಂದನ್ನು ಹೇಳುತ್ತೇನೆ - ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ.

3 ಸುನ್ನತಿಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ - ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರಿಗಿ ಪ್ರಮಾಣವಾಗಿ ಹೇಳುತ್ತೇನೆ.

4 ನಿಮ್ಮಲ್ಲಿ ಯಾರಾರು ಕರ್ಮಗಳಿಂದ ನೀತಿವಂತರಾಗಬೇಕೆಂದಿರುತ್ತಾರೋ ಅವರು ಕ್ರಿಸ್ತನಿಂದ ಅಗಲಿ ಹೋದರು. ಕೃಪಾಶ್ರಯದೊಳಗಿಂದ ಬಿದ್ದುಹೋದರು.

5 ನಾವೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ ನಿರೀಕ್ಷೆ ಸಫಲವಾಗುವದೆಂದು ಎದುರುನೋಡುತ್ತೇವೆ.

6 ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋಜನವಿಲ್ಲ. ಪ್ರೀತಿಯಿಂದ ಕೆಲಸ ನಡಿಸುವ ನಂಬಿಕೆಯಿಂದಲೇ ಪ್ರಯೋಜನವಾಗಿದೆ.

7 ಚೆನ್ನಾಗಿ ಓಡುತ್ತಾ ಇದ್ದಿರಿ; ನೀವು ಸತ್ಯವನ್ನು ಅನುವರ್ತಿಸದಂತೆ ಯಾರು ನಿಮ್ಮನ್ನು ತಡೆದರು?

8 ಈ ಬೋಧನೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.

9 ಸ್ವಲ್ಪ ಹುಳಿಯಿಂದ ಕಣಿಕವೆಲ್ಲಾ ಹುಳಿಯಾಗುವದು.

10 ನನಗಂತೂ ನೀವು ಬೇರೆ ಅಭಿಪ್ರಾಯವನ್ನು ಹಿಡಿಯುವದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತು ಭರವಸ ಉಂಟು. ನಿಮ್ಮಲ್ಲಿ ಭೇದವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ ಬರುವ ದಂಡನೆಯನ್ನು ಅನುಭವಿಸುವನು.

11 ನಾನಾದರೆ ಸಹೋದರರೇ, ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ಇನ್ನು ನನಗೆ ಹಿಂಸೆಯಾಗುವದು ಯಾಕೆ? ಆ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾದ ಆಕ್ಷೇಪವು ಹೋಯಿತಲ್ಲಾ?

12 ನಿಮ್ಮನ್ನು ಕಳವಳಪಡಿಸುವವರು ಅಂಗಚ್ಫೇದನೆಯನ್ನಾದರೂ ಮಾಡಿಕೊಂಡರೆ ವಾಸಿ.


ನೇಮನಿಷ್ಠೆಗಳ ಅಧಿಕಾರವನ್ನು ತಪ್ಪಿಸಿ ಬಿಡುಗಡೆಯನ್ನು ಹೊಂದಿದವರು ಮನಸ್ಸುಬಂದಂತೆ ನಡೆಯದೆ ಪವಿತ್ರಾತ್ಮನಿಗೆ ಅನುಗುಣವಾಗಿ ಯೋಗ್ಯರಾಗಿ ನಡೆಯುವರು

13 ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನಸ್ವಭಾವಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

14 ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಕವಾಗಿದೆ.

15 ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ಹರಕೊಂಡು ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ನೋಡಿರಿ.

16 ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.

17 ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಫಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

18 ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ನೇಮನಿಷ್ಠೆಗಳಿಗೆ ಅಧೀನರಲ್ಲ.

19 ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ - ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು

20 ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣ ಇಂಥವುಗಳೇ.

21 ಇವುಗಳ ವಿಷಯದಲ್ಲಿ - ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ಹಿಂದೆ ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

22 ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ - ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ.

23 ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.

24 ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಫಾಭಿಲಾಷೆ ಸಹಿತ ಶಿಲುಬೆಗೆ ಹಾಕಿದವರು.


ಕ್ರೈಸ್ತರು ಪವಿತ್ರಾತ್ಮಪ್ರೇರಿತರಾಗಿ ನಡೆಯಬೇಕಾದ ರೀತಿಯ ವಿಷಯದಲ್ಲಿ ಕೆಲವು ಬುದ್ಧಿಮಾತುಗಳು

25 ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ.

26 ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು