ಗಲಾತ್ಯದವರಿಗೆ 4 - ಕನ್ನಡ ಸತ್ಯವೇದವು J.V. (BSI)1 ಆದರೆ ನಾನು ಹೇಳುವದೇನಂದರೆ ಬಾಧ್ಯನು ತಾನು ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆ ಇರುವನೇ ಹೊರತು ಬೇರೆಯಿಲ್ಲ. 2 ತಂದೆಯು ನೇವಿುಸಿದ ದಿನದವರೆಗೂ ಪಾಲಕರ ಮತ್ತು ಮನೆವಾರ್ತೆಯವರ ಕೈಕೆಳಗಿರುವನು. 3 ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದವರ ಬಾಲಬೋಧೆಗೆ ಅಧೀನರಾಗಿದ್ದೆವು. 4-5 ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಾಧೀನರಾದವರನ್ನು ವಿಮೋಚಿಸಬೇಕೆಂತಲೂ ಪುತ್ರರ ಪದವಿಯನ್ನು ನಮಗೆ ದೊರಕಿಸಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ ಧರ್ಮಶಾಸ್ತ್ರಧೀನನಾಗಿಯೂ ಬಂದನು. 6 ನೀವು ಪುತ್ರರಾಗಿರುವದರಿಂದ ದೇವರು ಅಪ್ಪಾ ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. 7 ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ಬಾಧ್ಯನೂ ಆಗಿದ್ದೀ. ನಂಬಿಕೆಯ ಮೂಲಕ ನೇಮನಿಷ್ಠೆಗಳ ಅಧಿಕಾರದಿಂದ ಸ್ವಾತಂತ್ರ್ಯವನ್ನು ಹೊಂದಿರುವವರು ತಿರಿಗಿ ಅವುಗಳಿಗೆ ಅಧೀನರಾಗುವದು ತಕ್ಕದ್ದಲ್ಲ 8 ಪೂರ್ವಕಾಲದಲ್ಲಿ ನೀವು ದೇವರ ಜ್ಞಾನವಿಲ್ಲದವರಾಗಿ ದೇವರಲ್ಲದವುಗಳಿಗೆ ಅಧೀನರಾಗಿದ್ದಿರಿ. 9 ಈಗಲಾದರೋ ನೀವು ದೇವರನ್ನು ತಿಳುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ತಿಳುಕೊಂಡಿದ್ದಾನೆ. ಹೀಗಿರಲಾಗಿ ನೀವು ಕೆಲಸಕ್ಕೆ ಬಾರದ ದರಿದ್ರಬಾಲಬೋಧೆಗೆ ಮತ್ತೂ ಅಧೀನರಾಗಬೇಕೆಂದು ಅಪೇಕ್ಷಿಸಿ ಪುನಃ ಅದಕ್ಕೆ ತಿರುಗಿಕೊಳ್ಳುವದು ಹೇಗೆ? 10 ನೀವು ಆಯಾ ದಿನಗಳನ್ನೂ ಮಾಸಗಳನ್ನೂ ಉತ್ಸವಕಾಲಗಳನ್ನೂ ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸುತ್ತೀರಿ. 11 ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ. 12 ಸಹೋದರರೇ, ನಾನು ನಿಮ್ಮ ಹಾಗೆ ಆದದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಅನ್ಯಾಯಮಾಡಲಿಲ್ಲ. 13 ನನ್ನ ಶರೀರಕ್ಕೆ ಅಸೌಖ್ಯವಿದ್ದದರಿಂದ ನಾನು ನಿಮ್ಮಲ್ಲಿದ್ದು ಮೊದಲನೆಯ ಸರ್ತಿ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ. 14 ನನ್ನ ಶರೀರದಲ್ಲಿ ನಿಮ್ಮ ಬೇಸರಿಕೆಗೆ ಆಸ್ಪದವಾದದ್ದನ್ನು ನೀವು ಹೀನೈಸಲಿಲ್ಲ, ಓಕರಿಸಲಿಲ್ಲ; ನನ್ನನ್ನು ದೇವದೂತನಂತೆ ಕ್ರಿಸ್ತ ಯೇಸುವಿನಂತೆ ಸೇರಿಸಿಕೊಂಡಿರಿ. 15 ಆಗ ನಮಗೆ ಶುಭವಾಯಿತೆಂದು ನೀವು ಅಂದುಕೊಂಡಿರಲ್ಲಾ; ಆ ಶುಭವು ಎಲ್ಲಿ ಹೋಯಿತು? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನಾದರೂ ಕಿತ್ತು ನನಗೆ ಕೊಡುತ್ತಿದ್ದಿರೆಂದು ನಿಮ್ಮನ್ನು ಕುರಿತು ಸಾಕ್ಷಿಹೇಳುತ್ತೇನೆ. 16 ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವದರಿಂದ ನಿಮಗೆ ಶತ್ರುವಾಗಿದ್ದೇನೋ? 17 ಅವರು ನಿಮ್ಮನ್ನು ಮೆಚ್ಚಿಸುವದಕ್ಕೆ ಆಸಕ್ತರಾಗಿದ್ದಾರೆ; ಆದರೆ ಒಳ್ಳೇ ಅಭಿಪ್ರಾಯದಿಂದ ಅಂಥವರಾಗಿರದೆ ನೀವು ತಮ್ಮನ್ನೇ ಮೆಚ್ಚಿಸುವವರಾಗಬೇಕೆಂದು ನಿಮ್ಮನ್ನು ಅಗಲಿಸುವದಕ್ಕೆ ಅಪೇಕ್ಷಿಸುತ್ತಾರೆ. 18 ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಒಳ್ಳೇ ವಿಷಯದಲ್ಲಿ ನೀವು ಮೆಚ್ಚಿಸಿಕೊಳ್ಳುವದು ಒಳ್ಳೇದೇ. 19 ನನ್ನ ಪ್ರಿಯವಾದ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ತಿರಿಗಿ ಪ್ರಸವವೇದನೆ ಪಡುತ್ತೇನೆ. 20 ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತಿಳಿಯದು. ನಾನು ಈಗಲೂ ನಿಮ್ಮಲ್ಲಿದ್ದು ಬೇರೆ ರೀತಿಯಿಂದ ಮಾತಾಡುವದಕ್ಕೆ ಎಷ್ಟೋ ಆಶೆಪಡುತ್ತೇನೆ. 21 ಧರ್ಮಶಾಸ್ತ್ರಾಧೀನರಾಗುವದಕ್ಕೆ ಮನಸ್ಸುಳ್ಳವರೇ, ಧರ್ಮಶಾಸ್ತ್ರಕ್ಕೆ ಕಿವಿಗೊಡುವದಿಲ್ಲವೋ? ನನಗೆ ಹೇಳಿರಿ. 22 ಅದರಲ್ಲಿ ಬರೆದಿರುವದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು; ಒಬ್ಬನು ತೊತ್ತಿನಿಂದ ಹುಟ್ಟಿದವನು, ಒಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು. 23 ತೊತ್ತಿನ ಮಗನು ಸ್ವಾಭಾವಿಕವಾಗಿ ಹುಟ್ಟಿದನು. ಧರ್ಮಪತ್ನಿಯ ಮಗನೋ ವಾಗ್ದಾನದ ಫಲವಾಗಿ ಹುಟ್ಟಿದನು. 24 ಈ ಸಂಗತಿಗಳು ಉಪಮಾನವಾಗಿವೆ; ಹೇಗಂದರೆ, ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು; ಅದೇ ಹಾಗರ್. 25 ಹಾಗರ್ ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತ. ಅವಳು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಕೆ ತನ್ನ ಮಕ್ಕಳ ಸಹಿತ ದಾಸತ್ವದಲ್ಲಿದ್ದಾಳೆ. 26 ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. 27 ಹೆರದ ಬಂಜೆಯೇ, ಆನಂದವಾಗಿರು, ಪ್ರಸವವೇದನೆಯಿಲ್ಲದವಳೇ, ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು ಎಂದು ಬರೆದದೆಯಲ್ಲಾ. 28 ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ. 29 ಆದರೆ ಪೂರ್ವದಲ್ಲಿ ಸ್ವಾಭಾವಿಕವಾಗಿ ಹುಟ್ಟಿದವನು ದೇವರಾತ್ಮ ಬಲದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ ಈಗಲೂ ಅದೆ. 30 ಆದರೂ ಶಾಸ್ತ್ರವು ಏನು ಹೇಳುತ್ತದೆ? ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯನಾಗಬಾರದೆಂದು ಹೇಳುತ್ತದೆ. 31 ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India